ಅದ್ಧೂರಿಯ ಬಸವೇಶ್ವರ ಮಹಾರಥೋತ್ಸವ

| Published : Aug 27 2024, 01:35 AM IST

ಸಾರಾಂಶ

ತಾಲೂಕಿನ ಬಿನ್ನಾಳ ಗ್ರಾಮದ ಶ್ರೀ ಬಸವೇಶ್ವರ ಮಹಾರಥೋತ್ಸವ ಸೋಮವಾರ ಸಂಜೆ ಅಪಾರ ಭಕ್ತ ಸಮೂಹ ಮಧ್ಯೆ ಜರುಗಿತು.

ಭಕ್ತಿ ಗ್ರಾಮ ಬಿನ್ನಾಳ ದೈವ ಭೂಮಿ: ಸಂಸದ ರಾಜಶೇಖರ ಹಿಟ್ನಾಳ ಬಣ್ಣನೆ

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ಬಿನ್ನಾಳ ಗ್ರಾಮದ ಶ್ರೀ ಬಸವೇಶ್ವರ ಮಹಾರಥೋತ್ಸವ ಸೋಮವಾರ ಸಂಜೆ ಅಪಾರ ಭಕ್ತ ಸಮೂಹ ಮಧ್ಯೆ ಜರುಗಿತು.

ಗ್ರಾಮದ ಹಾಗೂ ಸುತ್ತಮುತ್ತಲಿನ ನಾನಾ ಗ್ರಾಮದ ಆರಾಧ್ಯ ದೈವವಾಗಿರುವ ಬಿನ್ನಾಳ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆಯಿಂದ ನಾನಾ ಪೂಜೆ ಹಾಗು ಅಭಿಷೇಕ ಸಲ್ಲಿಸಲಾಯಿತು. ಬೆಳಗ್ಗೆಯಿಂದ ಭಕ್ತರು ನಾನಾ ಗ್ರಾಮದಿಂದ ಪಾದಯಾತ್ರೆ ಮೂಲಕ ಗ್ರಾಮಕ್ಕೆ ಆಗಮಿಸಿದ್ದರು. ಗ್ರಾಮದ ಭಕ್ತರು ಗ್ರಾಮದ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನೈವೇದ್ಯ, ಹರಕೆ ತೀರಿಸಿದರು.

ಸಂಜೆ ಆಗುತ್ತಿದ್ದಂತೆ ಅಪಾರ ಭಕ್ತ ಸಮೂಹ ಮಧ್ಯೆ ರಥೋತ್ಸವ ಸಾಗಿತು. ನಂದಿಕೋಲು ಕುಣಿತ ಭಕ್ತರ ಕಣ್ಮನ ಸೆಳೆಯಿತು. ರಥೋತ್ಸವ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆ ಹಣ್ಣು ಸಮರ್ಪಿಸಿ ಭಕ್ತಿ ಸಮಿರ್ಪಸಿದರು. ಬಿನ್ನಾಳ ಬಸವೇಶ್ವರ ಮಹಾರಾಜಕೀ ಜೈ ಅನ್ನುವ ಜಯಘೋಷ ಮುಗಿಲು ಮುಟ್ಟಿದ್ದವು. ಅಪಾರ ಭಕ್ತವೃಂದ ಸೇರಿತ್ತು. ಅನ್ನಸಂತರ್ಪಣೆ ಜರುಗಿತು. ರಥೋತ್ಸವಕ್ಕೆ ಕೂಡಲಸಂಗಮದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಚಾಲನೆ ನೀಡಿದರು. ದಾವಣಗೆರೆಯ ಶ್ರೀ ಬಸವಪ್ರಭು ಸ್ವಾಮೀಜಿ, ಹರ್ಲಾಪೂರದ ಕೊಟ್ಟೂರೇಶ್ವರ ಸ್ವಾಮೀಜಿ, ಮೈನಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗು ಹರಗುರುಚರಮೂರ್ತಿಗಳು ಸಾನಿಧ್ಯ ವಹಿಸಿದ್ದರು.

ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರು, ಬಿನ್ನಾಳ ಗ್ರಾಮದ ಭಕ್ತಿ ಪ್ರಧಾನವಾದ ಗ್ರಾಮ. ಮಹಾರಥೋತ್ಸವಕ್ಕೆ ಸೇರಿರುವ ಅಪಾರ ಭಕ್ತಗಣ ಕಂಡರೆ ಬಸವೇಶ್ವರ ದೇವರ ಮೇಲೆ ಗ್ರಾಮಸ್ಥರು ಇಟ್ಟಿರುವ ಅಪಾರ ಭಕ್ತಿ ಕಂಡು ಬರುತ್ತದೆ. ಇಡೀ ಗ್ರಾಮಸ್ಥರು ಜಾತ್ರೆಗೆ ಟೊಂಕ ಕಟ್ಟಿ ಭಕ್ತಿ ಸೇವೆ ಮಾಡುತ್ತಿರುವುದು ಮಾದರಿ ಕಾರ್ಯ ಎಂದರು.

ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಗ್ರಾಪಂ ಅಧ್ಯಕ್ಷೆ ದಾಕ್ಷಾಯಣಿ ಸಂಗಪ್ಪ ತಹಸೀಲ್ದಾರ, ಗ್ರಾಪಂ ಸದಸ್ಯರಾದ ಮೊಹಮ್ಮದಸಾಬ ವಾಲೀಕಾರ್, ಲಕ್ಷ್ಮಣ ಚಲವಾದಿ, ಪ್ರಮುಖರಾದ ಬಸವಂತಪ್ಪ ಕುಟಗನಹಳ್ಳಿ, ಭೀಮಪ್ಪ ಕುರಿ, ಬಸವರಾಜ ಬನ್ನಿಕೊಪ್ಪ, ಸಂತೋಷ ಮೆಣಸಿನಕಾಯಿ, ಚನ್ನಯ್ಯ ಹಿರೇಮಠ, ಸಿದ್ದಲಿಂಗಯ್ಯ ಹಿರೇಮಠ ಹಾಗು ಗ್ರಾಮಸ್ಥರು, ನಾನಾ ಗ್ರಾಮದ ಭಕ್ತರು ಇದ್ದರು.ಭಕ್ತಿ ಗ್ರಾಮ ಬಿನ್ನಾಳ ದೈವ ಭೂಮಿ:

ರಥೋತ್ಸವ ಉದ್ದೇಶಿಸಿ ಮಾತನಾಡಿದ ಸಂಸದ ರಾಜಶೇಖರ ಹಿಟ್ನಾಳ, ಗ್ರಾಮಸ್ಥರ ಭಕ್ತಿಯಿಂದ ಬಿನ್ನಾಳ ಗ್ರಾಮ ದೈವ ಭೂಮಿ ಆಗಿದೆ. ಬಿನ್ನಾಳ ಗ್ರಾಮಸ್ಥರ ಕಾಯಕಯೋಗ ಇಡೀ ಜಿಲ್ಲೆಗೆ ಮಾದರಿ ಆಗಿದೆ. ಕೃಷಿ ಕಾಯಕ ಮಾಡುತ್ತಾ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಬಿನ್ನಾಳ ಗ್ರಾಮ ಕೃಷಿ ಪ್ರಧಾನ ಗ್ರಾಮ ಆಗಿದ್ದು, ಗ್ರಾಮದ ಬಸವೇಶ್ವರ ದೇವರ ಆಶೀರ್ವಾದದ ಫಲದಿಂದ ಬಿನ್ನಾಳ ಗ್ರಾಮ ದೈವ ಭೂಮಿ ಆಗಿದೆ. ಈ ನೆಲದಲ್ಲಿ ನಡೆದಾಡುವುದು ನಿಜಕ್ಕೂ ಸಹ ಪುಣ್ಯ ಎಂದರು.