ಯಾವುದೇ ಸರ್ಕಾರದ ಆರ್ಥಿಕ ಸಹಾಯಧನದ ಅವಲಂಬನೆಯಿಲ್ಲದೆ ಸ್ವತಂತ್ರವಾಗಿ ಬೆಳೆದು, ಸುರಪುರ ತಾಲೂಕಿನಲ್ಲಿ ನಾಲ್ಕು ಪ್ರಮುಖ ಶಾಖೆಗಳನ್ನು ಸ್ಥಾಪಿಸಿರುವ ಬಸವೇಶ್ವರ ಪತ್ತಿನ ಸಹಕಾರ ಸಂಘವು ಇಡೀ ಸಹಕಾರ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ವಿ. ಯಾದವ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಯಾವುದೇ ಸರ್ಕಾರದ ಆರ್ಥಿಕ ಸಹಾಯಧನದ ಅವಲಂಬನೆಯಿಲ್ಲದೆ ಸ್ವತಂತ್ರವಾಗಿ ಬೆಳೆದು, ಸುರಪುರ ತಾಲೂಕಿನಲ್ಲಿ ನಾಲ್ಕು ಪ್ರಮುಖ ಶಾಖೆಗಳನ್ನು ಸ್ಥಾಪಿಸಿರುವ ಬಸವೇಶ್ವರ ಪತ್ತಿನ ಸಹಕಾರ ಸಂಘವು ಇಡೀ ಸಹಕಾರ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ವಿ. ಯಾದವ ಹೇಳಿದರು.

ನಗರದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಶನಿವಾರ 31ನೇ ವಾರ್ಷಿಕ ಮಹಾಸಭೆ ಅಂಗವಾಗಿ ಹಮ್ಮಿಕೊಂಡಿದ್ದ ನೂತನ ಬಸವ ಸಹಕಾರ ಭವನ ಅಡಿಗಲ್ಲು ಸಮಾರಂಭ, ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರಿಗೆ ಇ-ಸ್ಟಾಂಪಿಂಗ್, ಸೇಫ್ ಡೆಪಾಸಿಟ್ ಲಾಕರ್, ಸಂಪೂರ್ಣ ಗಣಕೀಕೃತ ವ್ಯವಸ್ಥೆ, ಕೋರ್ ಬ್ಯಾಂಕಿಂಗ್, ವಾಹನ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿರುವುದು ಸಂಸ್ಥೆಯ ಪ್ರಗತಿಗೆ ಸಾಕ್ಷಿಯಾಗಿದೆ. ‘ನನಗಾಗಿ ಅಲ್ಲ, ಸಂಸ್ಥೆಗಾಗಿ’ ಎಂಬ ಉದ್ದೇಶದಿಂದ ಹಲವು ಸವಾಲುಗಳ ನಡುವೆಯೂ ಸಂಘವನ್ನು ಕಟ್ಟಿಬೆಳೆಸಿದ ಆಡಳಿತ ಮಂಡಳಿ ಹಾಗೂ ಹಿರಿಯ ಮುಖಂಡರ ಸೇವೆ ಶ್ಲಾಘನೀಯ ಎಂದರು. ಅಪೆಕ್ಸ ಬ್ಯಾಂಕ್ ಹಾಗೂ ಆರ್ಥಿಕ ನೆರವಿನ ಕುರಿತು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ, ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಸಾಧ್ಯವಾದಷ್ಟು ಆರ್ಥಿಕ ನೆರವು ಹಾಗೂ ಅಗತ್ಯ ಸಹಕಾರ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಕೆವೈಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಸುರೇಶ ಆರ್. ಸಜ್ಜನ ಮಾತನಾಡಿ, ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿದ್ದರೂ, ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಭೇದ ಮರೆತು ಶಾಂತಿ ಮತ್ತು ಸೌಹಾರ್ದತೆಯಿಂದ ಸಂಘಟಿತರಾಗಿ ಕೆಲಸ ಮಾಡಿ ಬೆಳೆಯಬೇಕು. ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ರೈತರು ಹಾಗೂ ಸಹಕಾರ ಸಂಘಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿ ಶ್ರಮಿಸುತ್ತಿದೆ ಎಂದು ಹೇಳಿದರು.

ಸಹಕಾರ ಕ್ಷೇತ್ರದಲ್ಲಿ ತರಬೇತಿ ಕೇಂದ್ರ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒಳಗೊಂಡ ಉತ್ತಮ ಸಹಕಾರ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಅಪೆಕ್ಸ್ ಬ್ಯಾಂಕಿನ ನಿರ್ದೇಶಕ ಶಿವಾನಂದ ಮಾನಕರ್‌ ಅವರು ಈಗಾಗಲೇ ₹5 ಲಕ್ಷ ಅನುದಾನ ನೀಡಿದ್ದು, ಕಟ್ಟಡ ಪೂರ್ಣ ಕಾಮಗಾರಿಗೆ ಹೆಚ್ಚುವರಿಯಾಗಿ ₹10 ಲಕ್ಷ ಅನುದಾನ ನೀಡುವಂತೆ ಮನವಿ ಮಾಡಿದರು. ಸಹಕಾರ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಮಹಿಳಾ ಮಂಡಳಿಗೆ ಮಹಿಳಾ ನಿರ್ದೇಶಕರನ್ನು ಆಯ್ಕೆ ಮಾಡಿರುವುದು ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪೆಕ್ಸ್‌ ಬ್ಯಾಂಕಿನ ನಿರ್ದೇಶಕ ಶಿವಾನಂದ ಮಾನಕರ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ. ಬೆಂಗಳೂರು ನಿರ್ದೇಶಕರು ವಿಶ್ವನಾಥರೆಡ್ಡಿ ದರ್ಶನಾಪುರ, ಡಿವೈಸಿಸಿ ಬ್ಯಾಂಕ್‌ನ ನಿರ್ದೇಶಕ ಬಸವರಾಜ ಪಾಟೀಲ ಚಿಂಚೋಳಿ ಮತ್ತು ಸುರೇಶ ಆರ್. ಸಜ್ಜನ ಕರ್ನಾಟಕ ರಾಜ್ಯ ಮಹಿಳೆ ಸಹಕಾರ ಮಹಾಮಂಡಳಿಯ ನಿರ್ದೇಶಕಿ ಚೆನ್ನಮ್ಮ ಪ್ರಕಾಶ ಅಂಗಡಿ ಕನ್ನೆಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಸ್ಮರಿಸಿ ಅಭಿನಂದಿಸಲಾಯಿತು.

ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥರೆಡ್ಡಿ ದರ್ಶನಾಪುರ, ಶಿವಾನಂದ ಮಾನಕರ, ಸಿದ್ದಪ್ಪ ಹೊಟ್ಟಿ ಮಾತನಾಡಿದರು. ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಹೆಚ್. ಸಿ. ಪಾಟೀಲ ರಾಜನಕೋಳೂರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವೀರೇಂದ್ರಕುಮಾರ ನಿಷ್ಠಿ ದೇಶಮುಖ, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಜಯಲಲಿತಾ ವಿ. ಪಾಟೀಲ ಸೇರಿದಂತೆ ಸಂಸ್ಥೆಯ ನಿರ್ದೇಶಕರು, ಸಲಹೆಗಾರರು, ಶಾಖಾಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಸವರಾಜ ಜಮದ್ರಖಾನಿ, ಮಲ್ಲಣ್ಣ ಸಾಹುಕಾರ ಮುಧೋಳ್, ಪ್ರಕಾಶ ಬಣಗಾರ, ಶಿವರಾಜ ಹೊನ್ನಳ್ಳಿ ಸೇರಿದಂತೆ ಹಿರಿಯ ಮುಖಂಡರು, ಶೇರುದಾರರು, ಸಂಘದ ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿದ್ದರು. ಚನ್ನಮಲ್ಲಿಕಾರ್ಜುನ ಪ್ರಾರ್ಥಿಸಿದರು. ಮಂಜುನಾಥ ಜಾಲಹಳ್ಳಿ ಸ್ವಾಗತಿಸಿದರು. ಡಿ.ಸಿ.ಪಾಟೀಲ ನಿರೂಪಿಸಿ, ವಂದಿಸಿದರು.