ಸಾರಾಂಶ
ಹೊಸಪೇಟೆ: ಜಗಜ್ಯೋತಿ ಬಸವೇಶ್ವರರು ಅಕ್ಷರಶಃ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಶ್ರೀ ಬಸವಣ್ಣನವರ ವಚನಗಳು ಮಾನವೀಯ ಮೌಲ್ಯ ತಿಳಿಸುತ್ತವೆ. ಬಸವಣ್ಣನವರ ತತ್ವಗಳು ಮತ್ತು ವಿಚಾರಗಳನ್ನು ನಮ್ಮ ನಿತ್ಯ ಜೀವನದಲ್ಲಿ ಹಾಗೂ ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ನಡೆದ ವಿಶ್ವಗುರು, ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸರ್ಕಾರವು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದೆ. ಬಸವಣ್ಣನವರ ವಿಚಾರ, ವಚನ ಸಾಹಿತ್ಯದ ಒಳಾರ್ಥಗಳನ್ನು ಎಲ್ಲ ಅಧಿಕಾರಿಗಳು ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು. ಆಡಳಿತದ ನೈಪುಣ್ಯತೆ, ಮಾನವೀಯ ನಡೆ ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ತಿಳಿಸಿದ್ದಾರೆ. ಅವುಗಳನ್ನು ಪಾಲನೆ ಮಾಡುವುದಕ್ಕೆ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದು ಹೇಳಿದರು.
ಹಿಟ್ನಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಟಿ.ಎಚ್. ಬಸವರಾಜ ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕರಾಗಲು ಬೇಕಾದಂತಹ ವ್ಯಕ್ತಿಗುಣಗಳು, ಆಚಾರ, ವಿಚಾರ, ಇರುವುದರಿಂದ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರವು ಘೋಷಿಸಿದೆ. ಬಸವಣ್ಣನವರು ಪ್ರಸ್ಥಾಪಿಸಿದ ಐದು ಆಚಾರಗಳಾದ ಸದಾಚಾರ, ಶಿವಾಚಾರ, ಲಿಂಗಾಚಾರ, ದೃತ್ಯಾಚಾರ, ರುಣಾಚಾರಗಳನ್ನು ನಮಗೆ ಗೊತ್ತಿಲ್ಲದೇ ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಿದ್ದೇವೆ ಎಂದರು.ಮಲ್ಲಿಕಾರ್ಜುನ ತುವನೂರು ಮತ್ತು ತಂಡದವರು ವಚನಗಾಯನ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಸದಾಶಿವ ಪ್ರಭು ಬಿ., ಎಸ್ಪಿ ಶ್ರೀಹರಿ ಬಾಬು, ಹೊಸಪೇಟೆ ಉಪ ವಿಭಾಗಾಧಿಕಾರಿ ಮಹದ್ ಅಲಿ ಅಕ್ರಮ್ ಷಾ, ಹೊಸಪೇಟೆ ತಹಸೀಲ್ದಾರ್ ಶೃತಿ ಎಂ.,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣವರ, ಬಸವಾಭಿಮಾನಿಗಳಾದ ಕೆ. ಕೊಟ್ರೇಶ್, ಸಾಲಿಸಿದ್ದಯ್ಯಸ್ವಾಮಿ, ಜಿ.ತಮ್ಮನಳಪ್ಪ, ನಿಂಬಗಲ್ ರಾಮಕೃಷ್ಣ, ವಿನಾಯಕ ಶೆಟ್ಟರ್, ಮಾವಿನಹಳ್ಳಿ ಬಸವರಾಜ, ಶರಣಸ್ವಾಮಿ, ಇಟಗಿ ಸಂಗಪ್ಪ, ಈಶ್ವರಪ್ಪ ಎಂಜಿನಿಯರ್, ಸಂಗಪ್ಪ ಧರ್ಮಸಾಗರ, ಗುಜ್ಜಲ ಗಣೇಶ ಮತ್ತಿತರರಿದ್ದರು.