ಸಾರಾಂಶ
ರಾಮನಗರ: ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಪೋಸ್ಟರ್ ಗಳನ್ನು ಅಂಟಿಸಿ ಪ್ರತಿಭಟಿಸಿದರು.
ನಮ್ಮ ತೆರಿಗೆ ನಮ್ಮ ಹಕ್ಕು ಘೋಷವಾಕ್ಯದಡಿ ಪ್ರತಿಭಟನೆ ಆರಂಭಿಸಿದ ಕಾರ್ಯಕರ್ತರು, ಬಸ್ ನಿಲ್ದಾಣದ ಗೋಡೆಗಳಿಗೆ ಪೋಸ್ಟರ್ ಗಳನ್ನು ಅಂಟಿಸಿ ಸಾರ್ವಜನಿಕರಲ್ಲಿ ಕೇಂದ್ರ ಸರ್ಕಾರ ತೆರಿಗೆ ನೀಡಿಕೆಯಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ಜಾಗೃತಿ ಮೂಡಿಸಿದರು.ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಿತಿಕೇಶ್ ಕಂಠಿ ಶೆಲ್ಕೆ ಮಾತನಾಡಿ, ಕೇಂದ್ರ ಸರ್ಕಾರ ತಾಯಿ ಸ್ಥಾನದಲ್ಲಿ ನಿಂತು ಪ್ರತಿ ರಾಜ್ಯಗಳಿಗೆ ನ್ಯಾಯ ಕಲ್ಪಿಸಬೇಕು. ಆದರೆ, ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಇದೆ ಎಂದು ದೂರಿದರು.
ಪ್ರಧಾನಿ ಮೋದಿಯವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಕರ್ನಾಟಕ ರಾಜ್ಯ 100 ರು. ತೆರಿಗೆ ಕಟ್ಟಿದರೆ ಅದಕ್ಕೆ 12-13 ರು. ಕೇಂದ್ರ ನೀಡುತ್ತಿದೆ. ಅದೇ ಉತ್ತರ ಪ್ರದೇಶ ಸರ್ಕಾರ 100 ರು. ನೀಡಿದರೆ, ಅವರಿಗೆ 300 ರು. ವಾಪಸ್ ಕೊಡುತ್ತಿದೆ. ಈ ತಾರತಮ್ಯವನ್ನು ನಾಡಿನ ಜನರು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಕೇಂದ್ರಕ್ಕೆ ಅಧಿಕ ತೆರಿಗೆ ಆದಾಯ ತಂದು ಕೊಡುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ತೆರಿಗೆ ಪಾಲು ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ನೀತಿ ಖಂಡನೀಯ. ಈ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ಬಾಯಿಗೆ ಬೀಗ ಹಾಕಿಕೊಡುವಂತೆ ಮೌನ ವಹಿಸದೆ ತುಟಿ ಬಿಚ್ಚಬೇಕು. ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ಅನುದಾನ, ಸವಲತ್ತುಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡದ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿದ್ದೇವೆ. ಸಬ್ ಕಾ ಸಾಥ್ , ಸಬ್ ಕಾ ವಿಕಾಸ್ ಎನ್ನುವ ಪ್ರಧಾನಿ ಮೋದಿಯವರು ರಾಜ್ಯದ ಜಿಎಸ್ ಟಿ ಪಾಲು ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿರುವುದ ಏಕೆ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಸಂದೀಪ್, ನಗರ ಘಟಕದ ಕಾರ್ಯಾಧ್ಯಕ್ಷ ತೌಸಿಪ್, ಬಿಡದಿ ಬ್ಲಾಕ್ ಕಾರ್ಯಾಧ್ಯಕ್ಷ ಮಹದೇಶ್, ಚನ್ನಪಟ್ಟಣ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ಯುವ ಮುಖಂಡರಾದ ಕಾರ್ತಿಕ್, ಸಂತೋಷ್, ಮಲ್ಲೇಗೌಡ, ಸಿದ್ದು, ವಸಂತ, ಮಹದೇವು, ರಂಜನ್, ಅರುಣ ಮತ್ತಿತರರು ಭಾಗವಹಿಸಿದ್ದರು.16ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ತೆರಿಗೆ ನಮ್ಮ ಹಕ್ಕು ಪೋಸ್ಟರ್ ಗಳನ್ನು ಅಂಟಿಸಿ ಪ್ರತಿಭಟನೆ ನಡೆಸಿದರು.