ಸೋಮವಾರ ಬೆಳಗ್ಗೆ 5 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಬಸವೇಶ್ವರನಿಗೆ ಮಹಾರುದ್ರಾಭಿಷೇಕ ನೆರವೇರಲಿದೆ

ಕುಕನೂರು: ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಶ್ರೀ ಬಿನ್ನಾಳ ಬಸವೇಶ್ವರ ಜಾತ್ರಾಮಹೋತ್ಸವವು ಆ. 30 ರಿಂದ ಸೆ. 1ರವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.

ಆ. 30ರಂದು ಧರ್ಮ ಧ್ವಜಾರೋಹಣ:

ಭಾನುವಾರ ಬೆಳಗ್ಗೆ 8 ಗಂಟೆಗೆ ಶ್ರೀಬಸವ ಮಂಟಪದಲ್ಲಿ ಮೈನಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಧರ್ಮ ಧ್ವಜಾರೋಹಣ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆಯಲಿದೆ. ಹಿರೇಮಠದ ಚನ್ನಯ್ಯ ತೋಟಯ್ಯ ಹಿರೇಮಠ ಹಾಗೂ ಶಾಂತವೀರಯ್ಯ ಶಾಸ್ತ್ರಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಲಿದೆ.

ಸಂಜೆ 3 ಗಂಟೆಗೆ ಧರ್ಮಸಭೆ ಹಾಗೂ ಲಘು ರಥೋತ್ಸವ ಜರುಗಲಿದ್ದು, ಶ್ರೀಗವಿಮಠ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಧರ್ಮಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.

ಆ.31ರಂದು ಮಹಾರಥೋತ್ಸವ:

ಸೋಮವಾರ ಬೆಳಗ್ಗೆ 5 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಬಸವೇಶ್ವರನಿಗೆ ಮಹಾರುದ್ರಾಭಿಷೇಕ ನೆರವೇರಲಿದೆ. ಮಧ್ಯಾಹ್ನ 12 ಗಂಟೆಗೆ ಜಾತ್ರೆಗೆ ಆಗಮಿಸುವ ಭಕ್ತರಿಗೆ ಗ್ರಾಮದ ನೌಕರರ ವರ್ಗ, ಗೆಳೆಯರ ಬಳಗ ಹಾಗೂ ಸದ್ಭಕ್ತರ ಸಹಕಾರದೊಂದಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಮಧ್ಯಾಹ್ನ 2 ಗಂಟೆಗೆ ನಂದಿಕೋಲು ಮೆರವಣಿಗೆ ಪಾದಗಟ್ಟಿಯಿಂದ ಹೊರಡಲಿದೆ. ಇದೇ ಸಮಯದಲ್ಲಿ ಧರ್ಮಚಿಂತನಾ ಸಭೆ ನಡೆಯಲಿದ್ದು, ತೊಂಟದಾರ್ಯ ಮಠ ಗದಗ-ಡಂಬಳದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಹಾಗೂ ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಮಹಾಸ್ವಾಮಿಗಳ ಸಾನಿಧ್ಯ ಇರಲಿದೆ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದು, ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಸೇರಿದಂತೆ ಗಣ್ಯರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಸಂಜೆ 5.30ಕ್ಕೆ ಸರ್ವ ಪೂಜ್ಯರ ಸಮ್ಮುಖದಲ್ಲಿ ಮಹಾರಥೋತ್ಸವ ಜರುಗಲಿದೆ.

ರಾತ್ರಿ 8 ಗಂಟೆಗೆ 69 ವರ್ಷಗಳ ಪರಂಪರೆ ಮುಂದುವರಿಸಿಕೊಂಡು 70ನೇ ವರ್ಷದ ಶ್ರೀ ಕಲಬುರ್ಗಿ ಮಹಿಮಾ ಪುರುಷ ಸಂತಾನ ಸಂಜೀವಿನಿ, ಬರಗಾಲ ಬಂಟ ಶರಣ ಮಹಾಪುರಾಣ ನಡೆಯಲಿದೆ. ರಾತ್ರಿ 10 ಗಂಟೆಗೆ ಶ್ರೀ ಜಯದೇವ ಮುರುಘರಾಜೇಂದ್ರ ನಾಟ್ಯ ಸಂಘದಿಂದ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಸೆ.1ರಂದು ಧರ್ಮಸಭೆ ಹಾಗೂ ಎತ್ತಿನ ಮೆರವಣಿಗೆ:

ಮಂಗಳವಾರ ಸಂಜೆ 3 ಗಂಟೆಗೆ ಧರ್ಮಸಭೆ ಹಾಗೂ ಎತ್ತಿನ ಮೆರವಣಿಗೆ ನಡೆಯಲಿದೆ. ಹಾಲಕೇರಿಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಹರ್ಲಾಪುರ-ಹಳ್ಳಿಗುಡಿ ಸುಕ್ಷೇತ್ರದ ಅಭಿನವ ಡಾ. ಕೊಟ್ಟುರೇಶ್ವರ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮದಲ್ಲಿ ಗ್ರಾಮೀಣ ಜಾನಪದ ಸೊಗಡಿನೊಂದಿಗೆ ನಗೆಹಬ್ಬ ನಡೆಯಲಿದ್ದು, ಬನಹಟ್ಟಿಯ ಪ್ರೊ. ಬಿ.ಆರ್. ಪೊಲೀಸ್ ಪಾಟೀಲ್ ಹಾಗೂ ಶರಣು ಯಮನೂರ ಅವರಿಂದ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.