ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಮಂಗಳೂರು ಸಹಕಾರದೊಂದಿಗೆ ಉರ್ವಸ್ಟೋರ್‌ನ ತುಳುಭವನದಲ್ಲಿ ಸೋಮವಾರ ಬಸವೇಶ್ವರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ವಚನಕಾರರ ವಚನಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ತಿಳಿಸುವ ಅಗತ್ಯವಿದೆ. ಶಿಕ್ಷಣದ ವಿವಿಧ ಹಂತಗಳಲ್ಲಿರುವ ವಚನಗಳ ಪಠ್ಯವನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿಸುವ ಮೂಲಕ ತಿಳಿವಳಿಕೆ ಮೂಡಿಸಲು ಸಾಧ್ಯ ಎಂದರು.

ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್.ಭೂಮರೆಡ್ಡಿ ಮಾತನಾಡಿ, ಬಸವಣ್ಣ ಹಾಗೂ ಇತರ ವಚನಕಾರರ ವಚನಗಳಿಗೆ ಸಮಾಜದ ಡೊಂಕನ್ನು ತಿದ್ದುವ ಶಕ್ತಿ ಇದೆ. ಅಂತಹ ವಚನಗಳನ್ನು ಪಾಲಿಸಿದಾಗ ಸಮಾಜದಲ್ಲಿ ಶಾಂತಿ, ಸಂಯಮ, ಮಾನವೀಯತೆಯ ಗುಣಗಳು ಬೆಳೆಯಲು ಸಾಧ್ಯ ಎಂದರು.

ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯೋಗೀಶ ಕೈರೋಡಿ ಅವರು ಉಪನ್ಯಾಸ ನೀಡಿದರು. 12ನೇ ಶತಮಾನದ ಬಸವಣ್ಣನವರ ವಿಚಾರಧಾರೆ ಕಾಲ ಮಾನ ಮೀರಿ ತುಂಬಾ ಮುಂದಿದೆ. ಆದರೆ ಇಂದಿಗೂ ಅವರ ಎಲ್ಲ ಆಶಯಗಳು ಈಡೇರಿಲ್ಲ. ಈ ದಿಶೆಯಲ್ಲಿ ಪ್ರಯತ್ನಗಳು ಆಗಬೇಕಿದೆ ಎಂದರು.

ಜಿ.ಪಂ. ಯೋಜನಾ ನಿರ್ದೇಶಕ ಕೆ.ಇ. ಜಯರಾಂ, ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಚೆನ್ನಬಸಪ್ಪ ರೊಟ್ಟಿ ಮತ್ತಿತರರು ಇದ್ದರು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ ಸ್ವಾಗತಿಸಿದರು. ಬಬಿತಾ ನಿರೂಪಿಸಿದರು.