ಬಸವೇಶ್ವರರ ಜಯಂತಿ ಮಹೋತ್ಸವ ನಾಳೆಯಿಂದ

| Published : May 02 2025, 11:45 PM IST

ಸಾರಾಂಶ

ಬಸವೇಶ್ವರರ ಜಯಂತಿ ಮಹೋತ್ಸವ ಹಾಗೂ ಯುವ ಜನೋತ್ಸವ ಕಾರ್ಯಕ್ರಮವನ್ನು ಮೇ.4 ಮತ್ತು 5ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಸಿ.ಎಸ್. ರೇಣುಕಾರಾಧ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ವೀರಶೈವ ಲಿಂಗಾಯತ ಸಂಘಟನೆ, ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಡವೇಶ್ವರರ ಜಯಂತಿ ಮಹೋತ್ಸವ ಹಾಗೂ ಯುವ ಜನೋತ್ಸವ ಕಾರ್ಯಕ್ರಮವನ್ನು ಮೇ.4 ಮತ್ತು 5ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಸಿ.ಎಸ್. ರೇಣುಕಾರಾಧ್ಯ ತಿಳಿಸಿದರು.

ನಗರದ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್ಕಾರಿ ಬಾಲಕಿಯರ ಕಾಲೇಜು ಆವರಣದಲ್ಲಿ 4ರಂದು ಬೆಳಗ್ಗೆ 10ಗಂಟೆಗೆ ಯುವಜನೋತ್ಸವ ನಡೆಯಲಿದೆ. ಉದ್ಘಾಟನೆಯನ್ನು ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ. ಸೋಮೇಶ್ವರ ನೆರವೇರಿಸಲಿದ್ದು, ಮುಖ್ಯಅತಿಥಿಗಳಾಗಿ ಬೆಂಗಳೂರು ಡಿವೈಎಸ್‌ಪಿ ದಿನೇಶ್ ಪಾಟೀಲ್, ಸ್ಪರ್ಶ ಆಸ್ಪತ್ರೆಯ ಡಾ. ಚಂದ್ರಮೌಳಿ, ಶೇಖರ್ ಆಸ್ಪತ್ರೆಯ ಡಾ. ಸೋಮಶೇಖರ್, ರಾಜ್ಯ ಬಿಜೆಪು ವಕ್ತಾರ ಎಚ್.ಎಂ. ಚಂದ್ರಶೇಖರ್ ಭಾಗವಹಿಸಲಿದ್ದು, ಸಂಘಟನೆ ಉಪಾಧ್ಯಕ್ಷ ಎಸ್.ಆರ್. ರಘುನಂದನ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ನಂತರ ರಂಗಗೀತೆ ಹಾಗೂ ವಚನಗಾಯನ ಸ್ಪರ್ಧೆ, ಹಗ್ಗ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ, ಮ್ಯೂಸಿಕಲ್ ಚೇರ್, ಗೋಣಿಚೀಲ ಓಟ ಹಾಗೂ ಥಟ್ ಅಂತ ಹೇಳಿ ಸ್ಪರ್ಧೆ ಸೇರಿದಂತೆ ಅನೇಕ ಮನರಂಜನಾತ್ಮಕ ಕ್ರೀಡೆಗಳನ್ನು ಏರ್ಪಡಿಸಲಾಗಿದೆ. ಶೇಖರ್ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಲಿದೆ ಎಂದರು. 5ರಂದು ಬೆಳಗ್ಗೆ 9ಗಂಟೆಗೆ ನಗರದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನದಿಂದ ವೈಭವದ ಸಾಂಸ್ಕೃತಿಕ ಮೆರವಣಿಗೆಯು ಪ್ರಾರಂಭವಾಗಿ ಕೋಡಿ ಸರ್ಕಲ್‌ನಿಂದ ದೊಡ್ಡಪೇಟೆ ಮಾರ್ಗವಾಗಿ ಶ್ರೀ ಗುರುಕುಲಾನಂದಾಶ್ರಮ ಕಲ್ಯಾಣ ಮಂಟಪ ತಲುಪಲಿ ೧೧ಗಂಟೆಗೆ ಧಾರ್ಮಿಕ ಸಮಾರಂಭ ನಡೆಯಲಿದೆ. ಸಾನಿಧ್ಯವನ್ನು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ, ಕಾಡಸಿದ್ದೇಶ್ವರ ಮಠದ ಶ್ರೀ ಡಾ. ಕರಿವೃಷಭದೇಶಿಕೇಂದ್ರ ಸ್ವಾಮೀಜಿ, ಗುರುಕುಲ ಶ್ರೀ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮೀಜಿ ಮತ್ತಿತರರು ಭಾಗವಹಿಸಲಿದ್ದು, ಉದ್ಘಾಟನೆಯನ್ನು ಶಾಸಕ ಕೆ. ಷಡಕ್ಷರಿ ನೆರವೇರಿಸಲಿದ್ದು, ಮುಖ್ಯಅತಿಥಿಗಳಾಗಿ ಮಾಜಿ ಶಾಸಕ ಬಿ. ನಂಜಾಮರಿ, ಮಾಜಿ ಸಚಿವ ನಾಗೇಶ್, ಸಮಾಜ ಸೇವಕರಾದ ಲೋಕೇಶ್ವರ, ಕೆ.ಟಿ. ಶಾಂತಕುಮಾರ್, ನಗರಸಭೆ ಅಧ್ಯಕ್ಷೆ ಯಮುನಾ ಮತ್ತಿತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯದವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ರಘುನಂದನ್, ಕಾರ್ಯದರ್ಶಿ ಕುಮಾರಸ್ವಾಮಿ, ಖಜಾಂಚಿ ದಯಾನಂದ್, ಸಹಕಾರ್ಯದರ್ಶಿ ಎಚ್.ಎಂ. ರಾಜಶೇಖರ್, ನಿರ್ದೇಶಕರಾದ ಶ್ಯಾಮಸುಂದರ್, ವಸಂತ್‌ಕುಮಾರ್, ಮಂಜುನಾಥ್, ಗುರುಸ್ವಾಮಿ ಮತ್ತಿತರರಿದ್ದರು.

ಕೋಟ್‌....

ಇದು ಕೇವಲ ವೇದಿಕೆ ಕಾರ್ಯಕ್ರಮವಲ್ಲ ಬಸವಣ್ಣವರು ಹೇಳಿದಂತೆ ಎಲ್ಲರನ್ನು ಸೇರಿಸಿಕೊಂಡು ಆಚರಿಸುತ್ತಿರುವ ಬಸವ ಜಯಂತಿ. ಇಲ್ಲಿ ಯಾವುದೇ ಭೇದಗಳು ಇಲ್ಲದೇ ಹಬ್ಬದ ವಾತಾವರಣ ನಿರ್ಮಾಣ ಮಾಡಲಾಗಿದೆ. ಎರಡು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಆಧ್ಯಾತ್ಮಿಕ ರಸದೂಟದ ಜೊತೆಗೆ ಆಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಳಿಗೂ ಆದ್ಯತೆ ನೀಡಲಾಗಿದೆ - ಸಿ.ಎಸ್. ರೇಣುಕಾರಾಧ್ಯ ಸಂಘಟಕರು.