ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಬಸವೇಶ್ವರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ 32ನೇ ವರ್ಷದ ವಾರ್ಷಿಕೋತ್ಸವ, ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ಶ್ರೀ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ಆ. 18ರಂದು ಮಧ್ಯಾಹ್ನ 12.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಟಿ.ಸಿ. ಓಹಿಲೇಶ್ವರ್ ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾನ್ನಿಧ್ಯವನ್ನು ಚಿಕ್ಕತೊಟ್ಲುಕೆರೆ ಅಟವೀ ಜಂಗಮ ಕ್ಷೇತ್ರಾಧ್ಯಕ್ಷ ಅಟವೀ ಶಿವಲಿಂಗ ಸ್ವಾಮೀಜಿ ವಹಿಸಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣನವರಿಗೆ ಆಶೀರ್ವದಿಸುವರು ಎಂದು ಅವರು ತಿಳಿಸಿದರು.ವಾರ್ಷಿಕೋತ್ಸವದ ಉದ್ಘಾಟನೆಯನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ನೆರವೇರಿಸುವರು. ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯುತ್ಸವವನ್ನು ಮಾಜಿ ಸಂಸದ ಜಿ.ಎಸ್. ಬಸವರಾಜು ಉದ್ಘಾಟಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ಟಿ.ಸಿ. ಓಹಿಲೇಶ್ವರ್ ವಹಿಸುವರು. ಶಾಸಕ ಜ್ಯೋತಿಗಣೇಶ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವರು.ಇದೇ ಸಂದರ್ಭದಲ್ಲಿ ಸಹಕಾರಿ ಧುರೀಣ ಹಾಗೂ ಶಾಸಕ ಕೆ. ಷಡಕ್ಷರಿ, ಕೈಗಾರಿಕೋದ್ಯಮಿ ಎನ್.ಜೆ. ರುದ್ರಪ್ರಕಾಶ್ ಹಾಗೂ ಹಿರಿಯ ಪತ್ರಕರ್ತ ತೊ.ಗ. ಅಡವೀಶಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ಓಹಿಲೇಶ್ವರ್ ಹೇಳಿದರು. ಮುಖ್ಯ ಅತಿಥಿಗಳಾಗಿ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ. ಶೇಖರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಡಾ. ಎಸ್. ಪರಮೇಶ್ ಭಾಗವಹಿಸಲಿದ್ದಾರೆ ಎಂದರು.
8 ಕೋಟಿ ನಿವ್ವಳ ಲಾಭ: 2023-24ನೇ ಸಾಲಿನಲ್ಲಿ ಸಂಘವು 945.34 ಕೋಟಿ ರು.ಗಳ ವಹಿವಾಟು ನಡೆಸಿ 8,14,45,530 ರು.ಗಳ ನಿವ್ವಳ ಲಾಭ ಗಳಿಸಿದೆ ಎಂದು ಓಹಿಲೇಶ್ವರ್ ತಿಳಿಸಿದರು. 2024ರ ಜುಲೈ 31ಕ್ಕೆ 1,51,00,788 ರು.ಗಳ ನಿವ್ವಳ ಲಾಭ ಗಳಿಸಿದ್ದು, ದುಡಿಯುವ ಬಂಡವಾಳ 248,71,45,221 ರು.ಗಳಾಗಿದೆ ಎಂದು ಅವರು ಮಾಹಿತಿ ನೀಡಿದರು.ಸಂಘವು ಸದಸ್ಯರಿಗೆ ಕಳೆದ 7 ವರ್ಷಗಳಿಂದ ಶೇ. 20 ರಂತೆ ಡಿವಿಡೆಂಡ್ ನೀಡುತ್ತಾ ಬಂದಿದೆ ಎಂದ ಅವರು, ಸದಸ್ಯರಿಂದ ಷೇರು ಬಂಡವಾಳ, ವಿವಿಧ ರೀತಿಯ ಠೇವಣಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿ ಉಪಾಧ್ಯಕ್ಷ ಎಂ.ಎನ್. ಲೋಕೇಶ್, ನಿರ್ದೇಶಕರಾದ ಎಸ್.ಎಂ. ರಾಜು, ಮಲ್ಲಿಕಾರ್ಜುನಯ್ಯ, ಕುಮಾರಸ್ವಾಮಿ, ಟಿ.ಜೆ. ಅರುಣ್‌ಕುಮಾರ್, ಕೆ.ಆರ್. ಮಹದೇವಯ್ಯ, ಪವನ್‌ಮೂರ್ತಿ, ಸಿಇಒ ಕೆ.ಬಿ. ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))