ಸಾರಾಂಶ
ಸ್ಲಂ ಜನಾಂದೋಲನ ಜಿಲ್ಲಾ ಸಮಿತಿಯಿಂದ ಸಿಎಂಗೆ ಮನವಿಗದಗ: ರಾಜ್ಯದ ಸ್ಲಂ ನಿವಾಸಿಗಳ ಜನಸಂಖ್ಯೆ ಆಧಾರದಲ್ಲಿ ಪ್ರತ್ಯೇಕ ಸಚಿವಾಲಯವನ್ನು ರಚನೆ ಮಾಡಿ ಕೊಳಚೆ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರತ್ಯೇಕ ಸಚಿವರು ಹಾಗೂ ಇಲಾಖೆಯನ್ನು ರಚಿಸಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಜಿಲ್ಲಾ ಸ್ಲಂ ಸಮಿತಿಯಿಂದ ಭಾನುವಾರ ನಗರಕ್ಕೆ ಭೇಟಿ ನೀಡಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ರಾಜ್ಯದಲ್ಲಿಯ ವಸತಿ ರಹಿತ ಕುಟುಂಬಗಳ ಸಮೀಕ್ಷೆಯನ್ನು ಮಾಡಿ ನಗರ ಲ್ಯಾಂಡ್ ಬ್ಯಾಂಕ್ ಯೋಜನೆಯನ್ನು ಜಾರಿಗೊಳಿಸಿ ಮನೆ ಇಲ್ಲದ ಕುಟುಂಬಕ್ಕೊಂದು ಮನೆ ನೀಡಲು ರಾಜ್ಯದಲ್ಲಿ ವಸತಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಿ ಸರ್ಕಾರವೇ ಮನೆ ನಿರ್ಮಿಸಿಕೊಡಬೇಕು. ಹಾಗೆಯೇ ಬಡವರಿಗೆ ನಿರ್ಮಿಸುವ ಮನೆಗಳನ್ನು ಗುತ್ತಿಗೆದಾರರಿಗೆ ಅಥವಾ ಬಿಲ್ಡರ್ಸ್‌ಗಳಿಗೆ ನೀಡದೇ ಜನರೇ ತಮ್ಮ ಮನೆ ನಿರ್ಮಿಸಿಕೊಳ್ಳಲು ನೇರವಾಗಿ ೩.೫ ಲಕ್ಷ ರಾಜ್ಯ ಸರ್ಕಾರದ ಸಬ್ಸಿಡಿ ಮತ್ತು ಕೇಂದ್ರದ ೧.೫ ಲಕ್ಷ ಸಬ್ಸಿಡಿಯನ್ನು ಎಲ್ಲಾ ಬಡವರಿಗೂ ನೀಡಬೇಕು. ರಾಜ್ಯ ಸರ್ಕಾರ ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದು ಸ್ಲಂ ನಿವಾಸಿಗಳಿಗೆ ಹಾಗೂ ಬಡವರಿಗೆ ಉದ್ಯೋಗ ನೀಡುವಂತ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು.ಕರ್ನಾಟಕ ಸಮಗ್ರ ಸ್ಲಂ ಅಭಿವೃದ್ಧಿ ಕಾಯಿದೆ ೨೦೧೮ರ ಕರಡು ಜಾರಿಯಾಗಬೇಕು. ರಾಜ್ಯದಲ್ಲಿ ವಸತಿ ಹಕ್ಕು ಕಾಯಿದೆ ಜಾರಿಗೊಳಿಸಬೇಕು, ರಾಜ್ಯದ ಸ್ಲಂ ನಿವಾಸಿಗಳ ಜನಸಂಖ್ಯೆ ಅನುಗುಣವಾಗಿ ಬಜೆಟ್‌ನಲ್ಲಿ ಪಾಲು ನಿಗದಿಗೊಳಿಸಬೇಕು. ಸರ್ಕಾರ ಅಥವಾ ಸ್ಲಂ ಜನರೇ ತಾವೇ ವಸತಿ ನಿರ್ಮಾಣ ಮಾಡುವ ಸಿ.ಎಂ. ಹೌಸಿಂಗ್ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು. ಸ್ಲಂ ನಿವಾಸಿಗಳು ಮತ್ತು ಕೊಳಗೇರಿಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯವನ್ನು ಘೋಷಿಸುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಸ್ಲಂ ಜನರ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಒತ್ತು ನೀಡಿ, ರಾಜ್ಯದ ನಗರಗಳಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸ್ಲಂ ನಿವಾಸಿಗಳು ಶೇ. ೩೬% ಬಡತನ ರೇಖೆಗಿಂತ ಕೆಳಗಿದ್ದಾರೆ. ಆದ್ದರಿಂದ ಈ ನಗರ ವಂಚಿತ ಸಮುದಾಯದಗಳ ಅಭಿವೃದ್ಧಿಗಾಗಿ ಸ್ಲಂ ಜನರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ೫೦೦ ಕೋಟಿ ಅನುದಾನ ಮೀಸಲಿಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ವೇಳೆ ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಇಮ್ತಿಯಾಜ.ಆರ್.ಮಾನ್ವಿ, ಜಿಲ್ಲಾ ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮಕ್ತುಮಸಾಬ ಮುಲ್ಲಾನವರ, ಮಂಜುನಾಥ ಶ್ರೀಗಿರಿ, ಶಿವಾನಂದ ಶಿಗ್ಲಿ, ಇಬ್ರಾಹಿಂ ಮುಲ್ಲಾ ಹಾಗೂ ಪದಾಧಿಕಾರಿಗಳು ಇದ್ದರು.