ಸಾರಾಂಶ
ಬಿಜೆಪಿಗರು ಪಂಚಮಸಾಲಿ ಸಮುದಾಯಕ್ಕೆ ಕಾಂತರಾಜು ಅವರ ಮಧ್ಯಂತರ ವರದಿಯನ್ನಾಧರಿಸಿಯೇ 2ಡಿ ಮೀಸಲಾತಿ ನೀಡಿದ್ದು. ಈ ಕುರಿತು ನಮ್ಮ ಬಳಿ ದಾಖಲೆಗಳಿದ್ದು ಬಿಡುಗಡೆ ಮಾಡುತ್ತೇವೆ.
ಕೊಪ್ಪಳ:
ಕಾಂತರಾಜು ವರದಿಯ ಮೂಲ ಪ್ರತಿ ಇಲ್ಲವೆಂದು ತಗಾದೆ ತೆಗೆದಿರುವ ಬಿಜೆಪಿ ನಾಯಕರು, ತಮ್ಮ ಸರ್ಕಾರದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಡಿ ನೀಡಿದ್ದು ಯಾವ ವರದಿ ಆಧರಿಸಿ? ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಮಂಡಿಸಿರುವ ವರದಿ ಮೂಲ ಪ್ರತಿಯಾಗಿದೆ. ಇದೀಗ ಅದು ಮೂಲ ಪ್ರತಿಯಲ್ಲ ಎನ್ನುವುದು ಯಾವ ನ್ಯಾಯ ಎಂದರು.
ಬಿಜೆಪಿಗರು ಪಂಚಮಸಾಲಿ ಸಮುದಾಯಕ್ಕೆ ಕಾಂತರಾಜು ಅವರ ಮಧ್ಯಂತರ ವರದಿಯನ್ನಾಧರಿಸಿಯೇ 2ಡಿ ಮೀಸಲಾತಿ ನೀಡಿದ್ದು. ಈ ಕುರಿತು ನಮ್ಮ ಬಳಿ ದಾಖಲೆಗಳಿದ್ದು ಬಿಡುಗಡೆ ಮಾಡುತ್ತೇವೆ ಎಂದು ಸವಾಲು ಹಾಕಿದ ತಂಗಡಗಿ, ಬಿಜೆಪಿಗರು ಹಿಂದುಳಿದ ವರ್ಗದ ಆಯೋಗದ ವರದಿ ಪರವಾಗಿ ಇದ್ದಾರೋ ಅಥವಾ ವಿರುದ್ಧವಾಗಿ ಇದ್ದಾರೋ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದರು.ದೆಹಲಿಯಲ್ಲಿ ಮಾಡಲಿ:
ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿದೆ ಎಂದು ಬಿಜೆಪಿಗರು ರಾಜ್ಯದಲ್ಲಿ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರವೇ ಬೆಲೆ ಏರಿಕೆ ಮಾಡಿದ್ದು ಎಂಬುದನ್ನು ಅರಿತುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ದೆಹಲಿಯಲ್ಲಿ ಪ್ರತಿಬಟನೆ ಮಾಡಲಿ ಎಂದು ಹೇಳಿದರು.ಮುಸ್ಲಿಂರ ಜಪ:
ಗಂಗಾವತಿ ತಾಲೂಕಿನ ಆನೆಗೊಂದಿಯ ಶ್ರೀಕೃಷ್ಣ ದೇವರಾಯ ಸಮಾಧಿಯ 64 ಕಂಬಗಳ ಮಂಟಪದಲ್ಲಿ ಮಾಂಸ ಕತ್ತರಿಸಿದ್ದು ತಪ್ಪು. ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು. ಜನರಲ್ಲಿಯೂ ಜಾಗೃತಿ ಮೂಡಿಸಲಾಗುವುದು. ಆದರೆ, ಎಲ್ಲ ವಿಷಯದಲ್ಲೂ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮುಸ್ಲಿಂರು ಕಾಣುತ್ತಾರೆ. ಅವರನ್ನು ಬಿಟ್ಟು ಮಾತನಾಡಲು ಯತ್ನಾಳ ಅವರಿಗೆ ಬರುವುದೇ ಇಲ್ಲ. ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ ಹೆಚ್ಚಳವಾಗಿದೆ ಎಂಬ ಗುತ್ತಿಗೆದಾರರ ಆರೋಪದಲ್ಲಿ ಹುರುಳಿಲ್ಲ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವೇ ಆಗಿಲ್ಲ. ಬಿಜೆಪಿಯವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದ ಅವರು, ಬಿಜೆಪಿಗರು ಕೋವಿಡ್ ಸಮಯದಲ್ಲಿ ಎಷ್ಟು ಲೂಟಿ ಮಾಡಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದರು.
ಪರೀಕ್ಷೆಯಲ್ಲಿ ಸಂದರ್ಭದಲ್ಲಿ ಜನಿವಾರ ತೆಗೆಸಿದ್ದು ತಪ್ಪೇ. ಅದೇ ರೀತಿ ನಾವು ಹಿಜಾಬ್ ತೆಗೆಯುವುದನ್ನು ಸಹಿಸುವುದಿಲ್ಲ. ಯಾವುದೇ ಧರ್ಮದ ಆಚರಣೆಗೆ ತೊಂದರೆಯಾಗಬಾರದು ಎನ್ನುವವರು ನಾವು. ಈಗಾಗಲೇ ಜನಿವಾರ ತೆಗೆಸಿದವರ ಮೇಲೆ ಸರ್ಕಾರ ಕ್ರಮಕೈಗೊಂಡಿದೆ ಎಂದು ತಿಳಿಸಿದರು.ವಿಶೇಷ ಅಧಿವೇಶನ:
ಕಾಂತರಾಜು ವರದಿಯನ್ನು ಸಚಿವರಿಗೆ ನೀಡಿದ್ದು ಅಧ್ಯಯನ ಮಾಡುತ್ತಿದ್ದಾರೆ. ಬಳಿಕ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ವರದಿಯನ್ನು ಶಾಸಕರಿಗೂ ನೀಡುತ್ತೇವೆ. ಈ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುತ್ತೇವೆ ಎಂದು ತಂಗಡಗಿ ಹೇಳಿದರು.ಜಾತಿ ಗಣತಿ ಎಂದ ಸಚಿವಕಾಂತರಾಜು ವರದಿ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸುವ ವೇಳೆ ಜಾತಿಗಣತಿ ಎಂದು ಹೇಳಿದರು. ಮಾಧ್ಯಮದವರು ಇದು ಜಾತಿ ಗಣತಿಯೇ ಎಂದು ಮರು ಪ್ರಶ್ನಿಸಿದಾಗ, ಇಲ್ಲ ಇದು ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ವರದಿ ಎಂದರು.ಸಿಎಂ ಬಳಿಗೆ ನಿಯೋಗ
ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸದಂತೆ ಈಗಾಗಲೇ ಜನಪ್ರತಿನಿಧಿಗಳ ನಿಯೋಗ ಮುಖ್ಯಮಂತ್ರಿ ಬಳಿ ತೆರಳಿ ಮನವಿ ಮಾಡಿದ್ದೇವೆ. ಅವರು ಸಹ ಕಾರ್ಖಾನೆ ಸ್ಥಾಪಿಸದಂತೆ ಸೂಚಿಸಿದ್ದಾರೆ. ಮತ್ತೊಮ್ಮೆ ಸಿಎಂ ಬಳಿ ನಿಯೋಗ ತೆಗೆದುಕೊಂಡು ಹೋಗಲಾಗುವುದು. ಶಾಸಕ ರಾಘವೇಂದ್ರ ಹಿಟ್ನಾಳ ಅವರು ಈಗಾಗಾಲೇ ಈ ಕುರಿತು ಸ್ಪಷ್ಟಪಡಿಸಿದ್ದು, ಕಾರ್ಖಾನೆ ಸ್ಥಾಪಿಸಲು ಅವಕಾಶ ನೀಡುವುದಿಲ್ಲ ಎಂದು ಶಿವರಾಜ ತಂಗಡಗಿ ತಿಳಿಸಿದರು.