ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಕೃಷಿ ಪಂಪುಸೆಟ್‌ಗಳ ವಿದ್ಯುತ್ ಸಂಪರ್ಕಕ್ಕೆಆಧಾರ್ ಜೋಡಣೆ ಕಡ್ಡಾಯಗೊಳಿಸುತ್ತಿದ್ದು ಹೆಚ್ಚಿನ ಶುಲ್ಕ ವಿಧಿಸಲು ಹೊಸ ನೀತಿ ಜಾರಿಗೆ ತರುವ ಮೂಲಕ ರೈತರನ್ನು ಇಕ್ಕಟಿಗೆ ಸಿಲುಕಲು ಮುಂದಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಪಾವಗಡದ ಪೂಜಾರಪ್ಪ ರಾಜ್ಯ ಸರ್ಕಾರ ಕ್ರಮದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಬುಧವಾರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ವತಿಯಿಂದ ನಡೆದ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು. ರೈತರಿಗೆ ಸರ್ಕಾರದ ಆದೇಶದಿಂದ ತೀವ್ರ ಸಮಸ್ಯೆ ಎದುರಾಗಲಿದೆ. ಪಂಪುಸೆಟ್‌ಗಳ ವಿದ್ಯುತ್ ಸಂಪರ್ಕಕ್ಕೆ ಆಧಾರ್ ಜೋಡಣೆಯ ಕ್ರಮ ಹಿಂಡೆಯುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಧೋರಣೆ ತಳೆಯುತ್ತಿವೆ. ಬಿತ್ತನೆ ಬೀಜಗಳ ಬೆಲೆ ಏರಿಕೆ ಹಿಂಪಡೆಯಬೇಕು. ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವಯಂ ಆರ್ಥಿಕ ಯೋಜನೆ ಜಾರಿಗೊಳಿಸಬೇಕು. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆಯಬೇಕು. ಬರಗಾಲವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವುದರಿಂದ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಶೀಘ್ರ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು.
ರೈತ ಮುಖಂಡರಾದ ಪಾವಗಡದ ಚಿತ್ತಣ್ಣ ಮಾತನಾಡಿ, ರೈತರಿಗೆ ಅನುಕೂಲವಾಗುವ ಎಂಎಸ್‌ಪಿ ಶಾಸನ ಬದ್ಧಗೊಳಿಸಲು ಕೇಂದ್ರ ಮೀನಾ ಮೇಷ ಎಣಿಸುತ್ತಿದ್ದು ರೈತ ವಿರೋಧಿ ನೀತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈ ಬಿಡಬೇಕು. ಇದು ವಿದ್ಯುತ್ ಹೆಸರಿನಲ್ಲಿ ಶುಲ್ಕು ವಸೂಲಾತಿ ಮಾಡುವ ಸರ್ಕಾರದ ಹುನ್ನಾರವಾಗಿದೆ ಎಂದು ಆರೋಪಿಸಿದರು.ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿರುವ ತಾಲೂಕಿನ ಬಹುತೇಕ ಬಡ ರೈತರು ಸಕ್ರಮ ಮಾಡಬೇಕೆಂದು ಅರ್ಜಿ ಸಲ್ಲಿಸಿದ್ದು, ಸರ್ಕಾರ ಕೂಡಲೇ ಪರಿಸೀಲನೆ ನಡೆಸಿ ಸಾಗುವಳಿ ಚೀಟಿ ನೀಡುವ ಮೂಲಕ ಸಕ್ರಮ ಮಾಡಬೇಕು. ರೈತರನ್ನು ಯಾವುದೇ ಕಾರಣಕ್ಕೂ ಭೂಮಿಯಿಂದ ಒಕ್ಕಲೆಬ್ಬಿಸಬಾರದು. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪಹಣೆ ಮ್ಯುಟೇಶನ್, ಸರ್ವೆ ಹದ್ದುಬಸ್ತು,ಇ.ನಕ್ಷೆ ತತ್ಕಾಲ ಪೋಡಿ ಸ್ಟಾಂಪ್ ಡ್ಯೂಟಿ,ಮೋಟಾರ್ ವಾಹನಗಳ ಮೇಲೆ ತೆರಿಗೆ,ಪೆಟ್ರೋಲ್ ಡಿಸೇಲ್ ಮೇಲೆ ತೆರಿಗೆ ಹೆಚ್ಚಿಸಿ ಹಾಗೂ ಇನ್ನೂ ಅನೇಕ ಮೂಲಗಳಿಂದ ಹಣ ವಸೂಲಿ ಮಡುತ್ತಿರುವುದು ರೈತರಿಗೆ ಮತ್ತು ಜನಸಾಮಾನ್ಯರಿಗೆ ತುಂಬಾ ಹೊರೆಯಾಗುತ್ತಿದೆ. ಏರಿಕೆ ಮಾಡಿರುವ ಬೆಲೆಗಳನ್ನು ಕೂಡಲೇ ವಾಪಸ್ಸು ಪಡೆಯುವಂತೆ ಆಗ್ರಹಿಸಿದರು.ಕೃಷ್ಣರಾವ್, ಗೋರಸ್ ಮಾವು ಸದಾಶಿವಪ್ಪ, ಪೂಜಾರ್ ಚಿತ್ತಯ್ಯ ವೀರಭದ್ರಪ್ಪ, ಕೃಷ್ಣಮೂರ್ತಿ, ಸಿದ್ದಪ್ಪ, ರಾಮಾಂಜಿನಪ್ಪ, ಬ್ಯಾಡನೂರು ಶಿವು, ಗುಂಡ್ಲಹಳ್ಳಿ ರಮೇಶ್, ಅಂಜಿನಪ್ಪ, ಹನುಮಂತರಾಯಪ್ಪ, ಮಂಜುನಾಥ್, ಈರಣ್ಣ ನಾಗರಾಜು, ನರಸಿಂಹಪ್ಪ, ಡಿಜೆಎಸ್ ಈರಣ್ಣ, ಮಲ್ಲೇಶಪ್ಪ ಇತರೆ ಆನೇಕ ಮಂದಿ ತಾಲೂಕಿನ ರೈತ ಮುಖಂಡರು ಪ್ರತಿಭಟನೆಯಲ್ಲಿ ಇದ್ದರು.