ಬರ ಗೆದ್ದ ಬಾಸೂರು ಅಮೃತಮಹಲ್ ಕಾವಲ್: 250ಕ್ಕೂ ಹೆಚ್ಚು ರಾಸುಗಳ ನಿರ್ವಹಣೆ

| Published : May 10 2024, 11:46 PM IST

ಬರ ಗೆದ್ದ ಬಾಸೂರು ಅಮೃತಮಹಲ್ ಕಾವಲ್: 250ಕ್ಕೂ ಹೆಚ್ಚು ರಾಸುಗಳ ನಿರ್ವಹಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ಅಮೃತಮಹಲ್ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಶ್ರಮಿಸುತ್ತಿರುವ ಬಾಸೂರು ಅಮೃತಮಹಲ್ ಕಾವಲು ಹಲವು ಕೊರತೆಗಳ ನಡುವೆಯೂ ಬರಗಾಲವನ್ನು ಯಶಸ್ವಿಯಾಗಿ ಮೆಟ್ಟಿನಿಂತಿದೆ.

- ಕೊಳವೆಬಾವಿಯಲ್ಲಿ ಭರಪೂರ ನೀರು । ಸಮೃದ್ಧ ಹಸಿರು ಮೇವುಕನ್ನಡಪ್ರಭ ವಾರ್ತೆ, ಬೀರೂರು

ಅಮೃತಮಹಲ್ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಶ್ರಮಿಸುತ್ತಿರುವ ಬಾಸೂರು ಅಮೃತಮಹಲ್ ಕಾವಲು ಹಲವು ಕೊರತೆಗಳ ನಡುವೆಯೂ ಬರಗಾಲವನ್ನು ಯಶಸ್ವಿಯಾಗಿ ಮೆಟ್ಟಿನಿಂತಿದೆ.ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಾಸೂರು ಗ್ರಾಮದಲ್ಲಿರುವ ಈ ಅಮೃತಮಹಲ್ ಒಟ್ಟು 1,719.10 ಎಕರೆ ವಿಸ್ತೀರ್ಣ ಹೊಂದಿರುವ ಅಪ್ಪಟ ಹುಲ್ಲು ಗಾವಲು. ಈ ಹಿಂದೆ 250ಕ್ಕೂ ಹೆಚ್ಚು ರಾಸುಗಳ ನಿರ್ವಹಣೆ ಹಾಗೂ ತಳಿ ಸಂವರ್ಧನೆ ಇಲ್ಲಿ ನಡೆಯುತ್ತಿತ್ತು. ಕಾರಣಾಂತರಗಳಿಂದ ಸದ್ಯ ಇಲ್ಲಿ 120 ರಾಸುಗಳಿವೆ. ಅದರಲ್ಲಿ 103 ಹೆಣ್ಣು ಕರುಗಳು ಮತ್ತು ಹಸು ಗಳಿದ್ದು, 17 ಬೀಜದ ಹೋರಿಗಳಿವೆ. ಇವುಗಳ ಸಂತತಿಯಲ್ಲಿ ಗಂಡು ಕರುಗಳನ್ನು ಪ್ರತಿವರ್ಷ ಹರಾಜು ಮಾಡಲಾಗುತ್ತಿದ್ದು ಸರ್ಕಾರಕ್ಕೆ ಆದಾಯವೂ ಇದೆ. ಮೇವಿನ ಕೊರತೆ ಆಗಬಾರದು ಎನ್ನುವ ನಿಟ್ಟಿನಲ್ಲಿ ತಲಾ 20 ಎಕರೆ 2 ಪ್ಲಾಟ್ ಅನ್ನು ಬೇಲಿ ಹಾಕಿ, ಮೇವು ಬೆಳೆಯಲು ಬಳಸಿಕೊಳ್ಳಲಾಗುತ್ತಿದೆ. ಸರ್ಕಾರದಿಂದ ನಿರಂತರ ಅನುದಾನ ಇಲ್ಲದ ಕಾರಣ ಪ್ರತಿ ತಿಂಗಳು 2 ಅಥವಾ 3 ಎಕರೆಯಲ್ಲಿ ಹಿಂಗಾರು ಜೋಳ, ಮೆಕ್ಕೆಜೋಳ ಬಿತ್ತನೆ ಮಾಡಿ ರಾಸುಗಳಿಗೆ ಹಸಿರು ಮೇವು ಪೂರೈಸಲಾಗುತ್ತಿದೆ.

ಕಡೂರು ತಾಲೂಕು ಬರಪೀಡಿತ ಪ್ರದೇಶವಾಗಿ ಘೋಷಿತವಾಗಿದ್ದರೂ, ಪಕ್ಕದ ಕಾವಲಿನಲ್ಲಿ ನೀರು ಮೇವಿಗೆ ಕೊರತೆ ಕಂಡು ಬಂದಿದ್ದರೂ ಇಲ್ಲಿ ಅಂತಹ ಸಮಸ್ಯೆ ಏನೂ ಕಂಡು ಬಂದಿಲ್ಲ. ತುರ್ತು ಸಂದರ್ಭಕ್ಕೆ ಇರಲಿ ಎಂದು ಜಿಲ್ಲಾಧಿಕಾರಿ ಸೂಚನೆ ಮೇರೆಗೆ 5 ಎಕರೆ ಭೂಮಿಯಲ್ಲಿ ಹಸಿರು ಮೇವು ಬೆಳೆಯಲಾಗಿದೆ. ಸದ್ಯ ಸುಮಾರು 110 ಟನ್ ಹಸಿಮೇವು ಲಭ್ಯವಿದ್ದು, 50 ಟನ್ ಒಣಮೇವು ಸಂಗ್ರಹಿಸಲಾಗಿದೆ. ಇರುವ 3 ಕೊಳವೆಬಾವಿಗಳಲ್ಲಿ ಸಮೃದ್ಧ ನೀರಿವೆ. ಇಂತಹ ವ್ಯವಸ್ಥೆಯಿಂದಲೇ ಈ ಬಾರಿ ಬರ ಗೆಲ್ಲಲೂ ಸಾಧ್ಯವಾಗಿದೆ.

ಆದರೆ ಮಳೆ ಕೊರತೆ ಕಾರಣದಿಂದ ಸಾವಿರಾರು ಎಕರೆಯಲ್ಲಿರುವ ಕಾವಲಿನಲ್ಲಿ ನೈಸರ್ಗಿಕವಾಗಿ ಬೆಳೆಯುವ ಹುಲ್ಲು ಕಡಿಮೆಯಾಗಿದೆ. ಅಲ್ಲದೆ ಈ ವ್ಯಾಪ್ತಿಯಲ್ಲಿ ರಾಸುಗಳನ್ನು ಬಹುದೂರದವರೆಗೂ ಕಳುಹಿಸಲಾಗದೇ ಚಿರತೆಗಳಿಂದ ಸಂರಕ್ಷಿಸುವ ಸಲುವಾಗಿ ಅವುಗಳನ್ನು ನಿಗದಿತ ಪ್ರದೇಶದಲ್ಲಿ ಓಡಾಡಿಸಿ ಶೆಡ್ ಬಳಿ ತಂದು ಮೇವು, ನೀರು ಪೂರೈಸ ಲಾಗುತ್ತಿದೆ. ಕಾವಲಿನ ವ್ಯಾಪ್ತಿಯ ಕೆರೆಯಲ್ಲಿಯೂ ಸ್ವಲ್ಪಮಟ್ಟಿನ ನೀರಿನ ಸಂಗ್ರಹವಿದೆ. ಇದು ಸಂರಕ್ಷಿತ ಪ್ರದೇಶದ ಇತರ ವನ್ಯಜೀವಿಗಳ ನೀರಿನ ಆಶ್ರಯವಾಗಿದೆ.ಲಭ್ಯ ಸಂಪನ್ಮೂಲ ಬಳಸಿಕೊಂಡು ಅಮೃತಮಹಲ್ ಕಾವಲಿನ ಸಂರಕ್ಷಣೆ ನಡೆದಿದೆ. ಜಾನುವಾರುಗಳ ನೀರಿನ ದಾಹ ತಣಿ ಸಲು ಕೊಳವೆ ಬಾವಿ ಸದ್ಯದ ಆಸರೆ ಆಗಿದೆ. ವಿದ್ಯುತ್ ಸಮಸ್ಯೆ ಮಾತ್ರ ತೀವ್ರವಾಗಿ ಕಾಡುತ್ತಿದೆ. ಮೇವು ಬೆಳೆಯುವ ಪ್ರದೇಶಕ್ಕೆ ಹಂದಿಗಳ ಕಾಟ ವಿಪರೀತವಾಗಿದ್ದು ಐಬೆಕ್ಸ್ ಬೇಲಿ ಅಳವಡಿಸಿದರೂ ವಿದ್ಯುತ್ ಪೂರೈಕೆ ಕೊರತೆಯಿಂದ ಉದ್ದೇಶಕ್ಕೆ ಅಡ್ಡಿ ಯಾಗುತ್ತಿದೆ. ಹಾಗಾಗಿ ನಿರಂತರ ಜ್ಯೋತಿ ಮೂಲಕ ವಿದ್ಯುತ್ ಪೂರೈಕೆ ಆಗಬೇಕು ಎಂಬುದು ಸ್ಥಳೀಯರ ಆಗ್ರಹ.

-- ಕೋಟ್‌--ಬಾಸೂರು ಅಮೃತಮಹಲ್ ಕಾವಲು ಜಿಲ್ಲೆಯ ಅಪ್ಪಟ ಹುಲ್ಲುಗಾವಲಾಗಿದ್ದು, ಪರಿಸರ ರಕ್ಷಣೆ ಮತ್ತು ಸಮತೋಲನಕ್ಕೆ ಇದರ ಸಂರಕ್ಷಣೆ ಮುಖ್ಯವಾಗಿದೆ. ಇಲ್ಲಿ ಅಭಿವೃದ್ಧಿ ನೆಪದಲ್ಲಿ ಕಾವಲಿನ ವಿಭಜನೆ ಕೃತ್ಯ ಸಾಧುವಲ್ಲ. ಯಾರೂ ಹಸ್ತಕ್ಷೇಪ ಮಾಡದೆ ಇರುವ ಹಾಗೆ ಇಟ್ಟರೆ ಒಳ್ಳೆಯದು.

- ಸ.ಗಿರಿಜಾಶಂಕರ

ವನ್ಯಜೀವಿ ಸಂರಕ್ಷಣೆ ಹೋರಾಟಗಾರ

-- ಬಾಕ್ಸ್--‘ಪೂರಕ ವಾತಾವರಣ ಆದ್ಯತೆ’ಪಶು, ಪಕ್ಷಿ, ಜಾನುವಾರುಗಳು ತಮ್ಮ ನೋವು, ಸಂಕಟ ಹೇಳಿಕೊಳ್ಳಲಾರವು, ಸೂಕ್ಷ್ಮ ಸಂವೇದನೆ ಮೂಲಕ ಅವುಗಳ ನಡೆ-ನುಡಿ ಅರ್ಥೈಸಿಕೊಂಡು ಅದಕ್ಕೆ ತಕ್ಕಂತೆ ನಾವು ನಡೆಯಬೇಕು. ಬಾಸೂರು ಅಮೃತಮಹಲ್ ಕಾವಲಿನಲ್ಲಿ ರಾಸುಗಳ ಸಂರಕ್ಷಣೆ, ಸಂವರ್ಧನೆ ಜತೆಗೆ ಅವುಗಳಿಗೆ ಪೂರಕ ವಾತಾವರಣ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ ಎನ್ನುತ್ತಾರೆ ಬಾಸೂರು ಅಮೃತಮಹಲ್ ಕಾವಲು ಪಶುವೈದ್ಯಾಧಿಕಾರಿ ಡಾ.ಕೆ.ಟಿ.ನವೀನ್.10 ಬೀರೂರು 1ಬಾಸೂರು ಅಮೃತಮಹಲ್ ಕಾವಲಿನಲ್ಲಿರುವ ಜಾನುವಾರುಗಳು10 ಬೀರೂರು 2ಬಾಸೂರು ಕಾವಲಿನಲ್ಲಿ ಜಾನುವಾರುಗಳಿಗೆ ಹಿಂಗಾರು ಜೋಳ ಬೆಳೆದಿರುವುದು