ಬಯಲಾಟ ಕಲೆ ಗ್ರಾಮೀಣ ಸಂಸ್ಕೃತಿಯ ಪ್ರತೀಕ: ಶಾಂತನಾಯ್ಕ

| Published : Feb 11 2024, 01:46 AM IST

ಸಾರಾಂಶ

ಸಂಡೂರಿನ ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ಬಳ್ಳಾರಿ ಜಿಲ್ಲೆಯ ಬಯಲಾಟ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಬಯಲಾಟ ಕುರಿತು ಹಲವು ತಜ್ಞರು ವಿಷಯ ಪ್ರಸ್ತುತಪಡಿಸಿದರು.

ಸಂಡೂರು: ಬಯಲಾಟ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿದೆ. ಸಂಸ್ಕೃತಿ ವಿಕೃತಿಯಾಗುತ್ತಿರುವ ಸಂದರ್ಭದಲ್ಲಿ ಬಯಲಾಟ, ಸಣ್ಣಾಟ, ಗೊಂದಲಿಗರ ಹಾಡು, ಲಂಬಾಣಿ ನೃತ್ಯ ಮೊದಲಾದ ಕಲೆಗಳು ಉಳಿದು ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಗಿವೆ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶಾಂತನಾಯ್ಕ ಅಭಿಪ್ರಾಯಪಟ್ಟರು.

ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ಶ್ರೀ ಕಾರ್ತಿಕೇಶ್ವರ ಕಲಾಬಳಗ ಟ್ರಸ್ಟ್, ಲಕ್ಷ್ಮೀಪುರ-ಸಂಡೂರು ಹಾಗೂ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲೆಯ ಬಯಲಾಟ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ಗಂಡು ಕಲೆ ಎನಿಸಿಕೊಂಡಿರುವ ಬಯಲಾಟದ ಕಲಾವಿದರು ತಮ್ಮ ಪಾತ್ರದೊಳಗೆ ಪ್ರವೇಶ ಮಾಡಿ ಕಥೆಯೊಂದಿಗೆ ತಮ್ಮ ಕಲೆಯನ್ನು ಅನಾವರಣಗೊಳಿಸುವ ಕಲೆ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ ಎಂದರು.

ರಂಗಕರ್ಮಿ ರಾಜಪ್ಪ ದಳವಾಯಿ, ಬಳ್ಳಾರಿ ಜಿಲ್ಲೆಯ ಬಯಲಾಟಗಳು ವಿಶಿಷ್ಟವಾಗಿದ್ದು, ಮನರಂಜನೆಯ ಅಭಿವ್ಯಕ್ತಿಯ ಕಲೆಯಾಗಿದೆ. ನೋಡುಗರ ದೃಷ್ಟಿಯಿಂದ ಬಯಲಾಟಗಳು ಪರಿಷ್ಕರಣೆಯಾಗಬೇಕಾಗಿದೆ. ಯಕ್ಷಗಾನಕ್ಕೆ ಸಿಕ್ಕಷ್ಟು ಮಾನ್ಯತೆ ಹಾಗೂ ಪ್ರಚಾರ ಬಯಲಾಟಕ್ಕೆ ಸಿಕ್ಕಿಲ್ಲ. ಅದಕ್ಕೆ ಕಾರಣಗಳು ಹಲವಾರು ಇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನಾಡೋಜ ವಿ.ಟಿ. ಕಾಳೆ, ಬಯಲಾಟಕ್ಕೆ ಮೂಡಲಪಾಯ ಎನ್ನುತ್ತಾರೆ. ಇಂತಹ ಬಯಲಾಟವನ್ನು ಸರಳೀಕೃತಗೊಳಿಸಿ ಪ್ರಯೋಗ ಮಾಡಿದರೆ, ಅದು ವಿಶ್ವವಿಖ್ಯಾತವಾಗುತ್ತದೆ ಎಂದು ಹೇಳಿದರು.

ನಿವೃತ್ತ ಉಪನ್ಯಾಸಕ ಬಸವರಾಜ ಮಸೂತಿ, ಡಾ. ತಿಪ್ಪೇರುದ್ರ, ಮುಖಂಡರಾದ ಹಗರಿ ಬಸವರಾಜಪ್ಪ, ಉಪ್ಪಾರಹಳ್ಳಿ ಕಿನ್ನೂರೇಶ್ವರ, ಮದ್ದಾನಿ ಕುಮಾರಸ್ವಾಮಿ, ಡಾ. ಮಲ್ಲಯ್ಯ ಸಂಡೂರು, ಡಾ. ಬಿ.ಎಂ. ಗುರುನಾಥ್, ಡಾ. ಅಣ್ಣಾಜಿ, ಕೃಷ್ಣಾರೆಡ್ಡಿ, ರಂಗ ನಿರ್ದೇಶಕ ಸಾಂಬಶಿವ ದಳವಾಯಿ, ಸಂಗೀತಗಾರರಾದ ಎಚ್. ತಿಪ್ಪೇಸ್ವಾಮಿ ಮುದ್ದಟನೂರು, ಎಚ್. ಕುಮಾರಸ್ವಾಮಿ, ತಾಯಪ್ಪ, ಮಲ್ಲಪ್ಪ ಶಿವಮ್ಮನವರ್ ಉಪಸ್ಥಿತರಿದ್ದರು.