ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜನರ ಹಿತದೃಷ್ಠಿಯಿಂದ, ವ್ಯಾಪಾರ ವಹಿವಾಟು ಹಾಗೂ ತುರ್ತು ಆರೋಗ್ಯ ಪರಿಹಾರ ಕ್ರಮದ ದೃಷ್ಠಿಯಿಂದ ನಗರದ ಬಜಾರ್ ರಸ್ತೆ ಮತ್ತು ಗಂಗಮ್ಮ ಗುಡಿಯಲ್ಲಿರುವ ಅನಧಿಕೃತ ಕಟ್ಟಡಗಳ ತೆರವಿಗೆ ಮೊದಲ ಆದ್ಯತೆ ನೀಡಲಾಗುವುದು, ವರ್ತಕರ ಸಹಕಾರದಿಂದ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸದ್ಯದಲ್ಲೇ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.ನಗರದ ಬಜಾರ್ ರಸ್ತೆ ಮತ್ತು ಗಂಗಮ್ಮಗುಡಿ ರಸ್ತೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು ಅಲ್ಲಿನ ವ್ಯಾಪಾರಸ್ಥರು ಹಾಗೂ ನಿವಾಸಿಗಳ ಜತೆ ಬೆರೆತು ಅವರಿಂದ ಅಹವಾಲುಗಳನ್ನು ಸ್ವೀಕಾರ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗಂಗಮ್ಮಗುಡಿ ರಸ್ತೆ ಮತ್ತು ಬಜಾರ್ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿಯು ದಶಕ ಗಳ ಕನಸಾಗಿದೆ. ಜಿಲ್ಲಾ ಕೇಂದ್ರದ ಪ್ರಮುಖ ವಾಣಿಜ್ಯ ಚಟವಟಿಕೆಗಳ ತಾಣವಾದ ಈ ರಸ್ತೆಗಳ ಜನರ ಜೀವನದೊಂದಿಗೆ ನಿಕಟ ಸಂಬಂಧ ಹೊಂದಿವೆ. ಇದನ್ನು ಮನಗಂಡಿರುವ ಜಿಲ್ಲಾಡಳಿತ ಸರ್ಕಾರಿ ನಿಯಮಗಳಿಗೆ ಅನುಸಾರವಾಗಿ ಕ್ರಮವಹಿಸಿದೆ. ಈ ಸಂಬಂಧ ವರ್ತಕರ ಮಾಲಿಕರ ಸಭೆ ಕೂಡ ನಡೆಸಿದ್ದು ಎಲ್ಲರೂ ಕೂಡ ಉತ್ತಮ ಸಲಹೆ ಸೂಚನೆ ಸಹಕಾರ ನೀಡಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ಮುತುವರ್ಜಿಯಿಂದ ಈ ರಸ್ತೆ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಸರ್ಕಾರ ಈಗಾಗಲೇ ಅನುದಾನವನ್ನು ಸಹ ಬಿಡುಗಡೆ ಮಾಡಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ. ಅನಧಿಕೃತವಾಗಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವ ನಿವಾಸಿಗಳು ಹಾಗೂ ವ್ಯಾಪಾರಸ್ಥರು ಸಹ ಒತ್ತುವರಿ ಜಾಗದ ತಮ್ಮ ಕಟ್ಟಡಗಳನ್ನು ಸ್ವಯಂ ಪ್ರೇರಿತರಾಗಿ ತೆರವು ಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ನಗರದ ಅಭಿವೃದ್ಧಿ ದೃಷ್ಠಿಯಿಂದ ಹಾಗೂ ಸುಗಮ ಸಂಚಾರದ ಹಿತದೃಷ್ಠಿಯಿಂದ ಈ ರಸ್ತೆಗಳ ಅಭಿವೃದ್ಧಿ ಕಾರ್ಯ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಈ ರಸ್ತೆಯ ಇಕ್ಕೆಲಗಳಲ್ಲಿನ ಎಲ್ಲಾ ಅಂಗಡಿ ಮಳಿಗೆಗಳ ಮಾಲೀಕರು, ವ್ಯಾಪಾರಸ್ಥರು, ನಿವಾಸಿಗಳು ಕೈಜೋಡಿಸಿ ಸಹಕಾರ ನೀಡುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಸಭೆಯಲ್ಲಿ ಭಾಗಿಯಾಗಿದ್ದ ವರ್ತಕರು ಮತ್ತು ಮಾಲಿಕರು ಮಧ್ಯ ರಸ್ತೆಯಿಂದ 30 ಅಡಿ ಎಡಕ್ಕೆ 30 ಅಡಿ ಬಲಕ್ಕೆ ತೆರವು ಮಾಡಬೇಕೆಂಬ ನಿಯಮವಿದ್ದರೂ ಇಷ್ಟು ತೆರವು ಮಾಡಲಾಗದು. ಕಡಿಮೆ ಮಾಡಿ ಎಂದು ಮನವಿ ಮಾಡಿದ್ದಾರೆ. ಒಂದಿಷ್ಟು ಮಂದಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತಂದರೆ ಸಂಚಾರ ದಟ್ಟಣೆ ಕಡಿಮೆ ಮಾಡಬಹುದು ಎಂದಿದ್ದಾರೆ. ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಸೌಹಾರ್ದಯುತವಾಗಿ ಈ ಕೆಲಸ ಮಾಡಲಾಗುವುದು ಎಂದರು.
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಗೌರಿಬಿದನೂರು ಮತ್ತು ಚಿಂತಾಮಣಿ ತಾಲೂಕುಗಳನ್ನು ಸಂಪರ್ಕಿಸುವ ರಸ್ತೆಯನ್ನು ಈಗಾಗಲೇ ಅಗಲೀಕರಣ ಭರದಿಂದ ಸಾಗಿದ್ದು, ಈ ಮೂಲಕ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಅದೇ ರೀತಿ ಬಜಾರ್ ರಸ್ತೆ ಮತ್ತು ಗಂಗಮ್ಮಗುಡಿ ರಸ್ತೆಗಳನ್ನು ಎಲ್ಲರ ಸಹಕಾರ ಪಡೆದು ನೂತನವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಮಂಜುನಾಥ್, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಪರಿಸರ ಅಭಿಯಂತರ ಉಮಾಶಂಕರ್, ನಗರಸಭೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿ, ನಗರಸಭೆ ಮಾಜಿ ಸದಸ್ಯರು, ಸ್ಥಳೀಯ ವ್ಯಾಪಾರಸ್ಥರು ಹಾಗೂ ನಿವಾಸಿಗಳು ಇದ್ದರು.
ಸಿಕೆಬಿ-1 ನಗರದ ಬಜಾರ್ ರಸ್ತೆ ಮತ್ತು ಗಂಗಮ್ಮಗುಡಿ ರಸ್ತೆಗೆ ಜಿಲ್ಲಾಧಿಕಾರಿ ಜಿ.ಪ್ರಭು ಭೇಟಿ ನೀಡಿ ರಸ್ತೆ ಅಗಲೀಕರಣ ಕುರಿತು ಪರಿಶೀಲನೆ ನಡೆಸಿದರು.