ಪಾಲಿಕೆ ಆದಾಯ ಮೀರಿದ ಯೋಜನೆಗಳಿಂದ ₹13000 ಕೋಟಿ ಬಿಲ್‌ ಬಾಕಿ!

| Published : Feb 05 2024, 01:50 AM IST

ಸಾರಾಂಶ

ಆದಾಯಕ್ಕಿಂತ ಹೆಚ್ಚಿನ ಮೊತ್ತದ ಯೋಜನೆಗಳ ಘೋಷಣೆಯಿಂದ ಪ್ರಸ್ತುತ ₹13 ಸಾವಿರ ಕೋಟಿಗೂ ಅಧಿಕ ಮೊತ್ತ ಬಾಕಿ ಬಿಲ್‌ ಪಾವತಿಸುವ ಹೊಣೆಗಾರಿ ಬಿಬಿಎಂಪಿ ಮೇಲಿದೆ.

ಕಾಮಗಾರಿಗಳ ಅನುದಾನ ಪೈಕಿ ಬಿಬಿಎಂಪಿಯ ₹4,918.48 ಕೋಟಿ, ರಾಜ್ಯ ಸರ್ಕಾರದ ₹8,487.99 ಕೋಟಿ, ಕೇಂದ್ರದ ₹250.52 ಕೋಟಿ ಪಾವತಿ ಉಳಿಕೆವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ಆದಾಯಕ್ಕಿಂತ ಹೆಚ್ಚಿನ ಮೊತ್ತದ ಯೋಜನೆಗಳ ಘೋಷಣೆಯಿಂದ ಪ್ರಸ್ತುತ ₹13 ಸಾವಿರ ಕೋಟಿಗೂ ಅಧಿಕ ಮೊತ್ತ ಬಾಕಿ ಬಿಲ್‌ ಪಾವತಿಸುವ ಹೊಣೆಗಾರಿ ಬಿಬಿಎಂಪಿ ಮೇಲಿದೆ.

ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯು 2024-25ನೇ ಸಾಲಿನ ಆಯವ್ಯಯ ಸಿದ್ಧಪಡಿಸುತ್ತಿವೆ. ರಾಜಧಾನಿ ಬೆಂಗಳೂರಿಗೆ ಭರಪೂರ ಘೋಷಣೆ ಮಾಡುವ ಸಾಧ್ಯತೆಗಳಿವೆ. ಆದರೆ, ಬಿಬಿಎಂಪಿ ಈ ಹಿಂದಿನ ವರ್ಷಗಳಲ್ಲಿ ಬಜೆಟ್‌ನಲ್ಲಿ ಘೋಷಣೆ ಮಾಡಿ ಕೈಗೊಂಡ ಕಾಮಗಾರಿಗಳಿಗೆ ಬರೋಬ್ಬರಿ ₹13,657 ಕೋಟಿ ಬಾಕಿ ಬಿಲ್‌ ಪಾವತಿಯ ಹೊಣೆಗಾರಿಯನ್ನು ಹೊಂದಿದೆ. ಈ ಮೊತ್ತವು ಬಿಬಿಎಂಪಿಯು 2024-25ನೇ ಸಾಲಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನ ಒಳಗೊಂಡು ಘೋಷಣೆ ಮಾಡುವ ಬಜೆಟ್‌ ಮೊತ್ತಕ್ಕಿಂತ ಹೆಚ್ಚಾಗಿದೆ.

ಬಿಬಿಎಂಪಿಯ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಪೈಕಿ ₹4,918.48 ಕೋಟಿ ಬಾಕಿ ಬಿಲ್‌ ಇದೆ. ರಾಜ್ಯ ಸರ್ಕಾರದ ಅನುದಾನದಲ್ಲಿ ಕೈಗೊಂಡ ಕಾಮಗಾರಿಯ ಪೈಕಿ ₹8,487.99 ಕೋಟಿ ಬಾಕಿ ಬಿಲ್‌ ಇದೆ. ಇನ್ನು ಕೇಂದ್ರ ಸರ್ಕಾರದ ಅನುದಾನದಲ್ಲಿ ಕೈಗೊಂಡ ಕಾಮಗಾರಿಯ ಪೈಕಿ ₹250.52 ಕೋಟಿ ಬಾಕಿ ಬಿಲ್‌ ಪಾವತಿ ಮಾಡಬೇಕಿದೆ.

ಈ ಎಲ್ಲಾ ಪೈಕಿ ₹5,837.34 ಕೋಟಿ ಮೊತ್ತದ ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡು ಗುತ್ತಿಗೆದಾರರಿಗೆ ಬಿಲ್‌ ಪಾವತಿ ಮಾತ್ರ ಬಾಕಿ ಇದೆ. ಇನ್ನು ₹5,267.85 ಕೋಟಿ ಮೊತ್ತದ ಕಾಮಗಾರಿ ಪ್ರಗತಿಯಲ್ಲಿವೆ. ಜತೆಗೆ 2,551.80 ಕೋಟಿ ರು. ಮೊತ್ತದ ಕಾಮಗಾರಿಗಳು ಆಡಳಿತಾತ್ಮಕ ಅನುಮೋದನೆಗೊಂಡಿವೆ ಮತ್ತು ಕಡತ ಚಾಲನೆಯಲ್ಲಿದ್ದು, ಒಟ್ಟಾರೆ 13,657 ಕೋಟಿ ರು. ಬಾಕಿ ಇದೆ ಎಂದು ಬಿಬಿಎಂಪಿಯ ಅಧಿಕೃತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಶೇ. 62ರಷ್ಟು ರಾಜ್ಯ ಸರ್ಕಾರದ ಬಾಕಿ:

ರಾಜ್ಯ ಸರ್ಕಾರದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಪೈಕಿ ಶೇ.62 ರಷ್ಟು ಹಣ ಬಾಕಿ ಬಿಲ್‌ ಪಾವತಿ ಮಾಡಬೇಕಿದೆ. ಈ ಪೈಕಿ 3,155.84 ಕೋಟಿ ರು. ಈಗಾಗಲೇ ಕಾಮಗಾರಿ ಮುಕ್ತಾಯಗೊಂಡು ಬಿಲ್‌ ಪಾವತಿ ಅಷ್ಟೇ ಬಾಕಿ ಇದೆ.

3833 ಕೋಟಿ ರು. ಮೊತ್ತದ ವಿವಿಧ ಕಾಮಗಾರಿ ಪ್ರಗತಿಯಲ್ಲಿವೆ. ಉಳಿದಂತೆ 1,498.92 ಕೋಟಿ ರು. ಮೊತ್ತದ ವಿವಿಧ ಕಾಮಗಾರಿಗಳು ಆಡಳಿತಾತ್ಮಕ ಅನುಮೋದನೆಗೊಂಡಿವೆ ಮತ್ತು ಕಡತ ಚಾಲನೆಯಲ್ಲಿವೆ.

ಪಾಲಿಕೆ ಆದಾಯಕ್ಕಿಂತ ಬಿಲ್‌ ಪಾವತಿ ಹೆಚ್ಚು:

ಬಿಬಿಎಂಪಿಯು ಪ್ರಸ್ತುತ ಸುಮಾರು 3500 ಕೋಟಿ ರು. ನಷ್ಟು ಆಸ್ತಿ ತೆರಿಗೆ ಸಂಗ್ರಹ ಮಾಡುತ್ತಿದೆ. ತೆರಿಗೇತರ ಆದಾಯ ಸೇರಿದಂತೆ 4 ಸಾವಿರ ಕೋಟಿ ರು. ಆಸುಪಾಸಿನಲ್ಲಿ ಸಂಪನ್ಮೂಲ ಸಂಗ್ರಹಿಸಲಿದೆ. ಈ ಪೈಕಿ ಬಹುತೇಕ ಪಾಲು ಆಡಳಿತ ನಿರ್ವಹಣೆ, ಸಭೆ ಸಮಾರಂಭಗಳಿಗೆ ವೆಚ್ಚ ಮಾಡಬೇಕಾಗಿದೆ. ಆದರೆ, ಬಿಬಿಎಂಪಿಯು ಪ್ರಸ್ತುತ ತನ್ನ ಆದಾಯದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಯಲ್ಲಿ ಗುತ್ತಿಗೆದಾರರಿಗೆ 4,918.48 ಕೋಟಿ ರು. ಬಾಕಿ ಬಿಲ್‌ ಪಾವತಿ ಮಾಡಬೇಕಿದೆ.

- - -

---ಬಾಕ್ಸ್‌---

ಹೆಚ್ಚುವರಿ 4,100 ಕೋಟಿ ಆದಾಯ ನಿರೀಕ್ಷೆ

ಬಿಬಿಎಂಪಿಯು ಈಗಾಗಲೇ ಭಾರೀ ಮೊತ್ತದ ಬಾಕಿ ಬಿಲ್‌ ಪಾವತಿ ಹೊಣೆಗಾರಿಯನ್ನು ಹೊಂದಿದೆ. ಆದರೂ, 2024-25ನೇ ಸಾಲಿನಲ್ಲಿ ಬರೋಬ್ಬರಿ 4,100 ಕೋಟಿ ರು. ಹೆಚ್ಚುವರಿ ಆದಾಯ ನಿರೀಕ್ಷೆಯ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ.

ಕ್ಯಾಪಿಟಲ್‌ ವ್ಯಾಲಿವ್‌ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಗೊಳಿಸುವುದು ಹಾಗೂ ಪ್ರೀಮಿಯಂ ಎಫ್‌ಐಆರ್‌ ತಲಾ ಒಂದು ಸಾವಿರ ಕೋಟಿ ರು. ಜಾಹೀರಾತು ತೆರಿಗೆಯಿಂದ 750 ಕೋಟಿ ರು., ಎಸ್‌ಡಬ್ಲ್ಯೂಎಂ ಬಳಕೆದಾರರ ಶುಲ್ಕ 850 ಕೋಟಿ ರು. ಸಂಗ್ರಹ ನಿರೀಕ್ಷೆ ತೋರಿಸಲಾಗಿದೆ.

- - -

ಪಾಲಿಕೆ ಪೋಟೋ ಬಳಸಿ