ಸಾರಾಂಶ
ಜು.31ರೊಳಗೆ ತೆರಿಗೆ ಕಟ್ಟಿ ದಂಡ ತಪ್ಪಿಸಿಕೊಳ್ಳಿ ಎಂದು ಬಿಬಿಎಂಪಿ ತಿಳಿಸಿದೆ. ಈ ಮೂಲಕ 15 ಲಕ್ಷ ಆಸ್ತಿಗಳಿಗೆ ಅನುಕೂಲವಾಗಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮಂಡಿಸಲಾಗಿರುವ ಬೆಂಗಳೂರಿಗರಿಗೆ ಯಾವುದೇ ತೆರಿಗೆ ಹೊರೆ ಹೊರಿಸದಂತೆ ಬಿಬಿಎಂಪಿ ಬಜೆಟ್ ಮಂಡಿಸಲಾಗಿದೆ. ಅದರ ಬದಲು ಆಸ್ತಿ ಮಾಲೀಕರ ಮೇಲಿದ್ದ ತೆರಿಗೆ ಹೊರೆ ಇಳಿಸುವ ಯೋಜನೆಯನ್ನು ಘೋಷಿಸಲಾಗಿದೆ.ಬಿಬಿಎಂಪಿ ಬಜೆಟ್‌ನಲ್ಲಿ ಈ ಬಾರಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಾಗೂ ಎಸ್‌ಎಎಸ್ ಅಡಿ ಆಸ್ತಿ ವಿವರ ತಪ್ಪು ನೀಡಿದ ಆಸ್ತಿ ಮಾಲೀಕರಿಗೆ ಸಂತಸದ ಸುದ್ದಿ ನೀಡಲಾಗಿದೆ. ಅದರಂತೆ ತೆರಿಗೆ ಬಾಕಿ ತೆರಿಗೆ ಉಳಿಸಿಕೊಂಡಿರುವ 15 ಲಕ್ಷ ಆಸ್ತಿಗಳಿಗೆ ಒನ್ ಟೈಂ ಸೆಟಲ್‌ಮೆಂಟ್ (ಒಟಿಎಸ್) ಅಡಿಯಲ್ಲಿ ಶೇ.100ರಷ್ಟು ಬಡ್ಡಿ ಮತ್ತು ದಂಡ ಮನ್ನಾ ಮಾಡುವ ಯೋಜನೆ ಘೋಷಿಸಲಾಗಿದೆ. 2024ರ ಜುಲೈ 31ರೊಳಗೆ ಬಾಕಿ ತೆರಿಗೆ ಪಾವತಿಸಿದರೆ ಬಾಕಿ ತೆರಿಗೆ ಮೇಲೆ ವಿಧಿಸಲಾಗುವ ದಂಡ ಮತ್ತು ಬಡ್ಡಿ ವಿನಾಯಿತಿ ನೀಡುವುದಾಗಿ ಘೋಷಿಸಲಾಗಿದೆ. ಅದರಿಂದ ಬಿಬಿಎಂಪಿಗೆ ₹2,500 ಕೋಟಿ ಆದಾಯ ಖೋತಾ ಆಗಲಿದೆ.