ಸಾರಾಂಶ
ಕನ್ನಡ ನಾಮಫಲಕ ಹಾಕದ ಮಳಿಗೆಗಳಿಗೆ ಬೀಗ ಹಾಕುತ್ತಿರುವ ಬಿಬಿಎಂಪಿ, ಅವುಗಳ ಲೈಸೆನ್ಸ್ ರದ್ದು ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯ ವಾಣಿಜ್ಯ ಮಳಿಗೆಗಳಲ್ಲಿ ಶೇಕಡ 60ರಷ್ಟು ನಾಮ ಫಲಕ ಅಳವಡಿಕೆ ಮಾಡದ ಅಂಗಡಿ- ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿ ಸೀಜ್ ಮಾಡಲಾರಂಭಿಸಿದ್ದಾರೆ.
ಕನ್ನಡ ನಾಮಫಲಕ ಅಳವಡಿಕೆಗೆ ನೀಡಲಾದ ಗಡುವು ಬುಧವಾರಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಗುರುವಾರದಿಂದ ಕಾರ್ಯಾಚರಣೆಗಿಳಿದ ಬಿಬಿಎಂಪಿ ಅಧಿಕಾರಿಗಳು ನಿಗದಿಪಡಿಸಿದ ನಾಮಫಲಕ ಇಲ್ಲದ ಅಂಗಡಿ ಮಳಿಗೆಗಳಿಗೆ ಬೀಗ ಹಾಕಿ ಸೀಜ್ ಮಾಡಲು ಆರಂಭಿಸಿದ್ದಾರೆ.
ಜತೆಗೆ ಬಿಬಿಎಂಪಿಯಿಂದ ನೀಡಲಾದ ಉದ್ದಿಮೆ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದಾರೆ. ಶೇ.60ರಷ್ಟು ಕನ್ನಡ ಬಳಕೆಯ ನಾಮಫಲಕ ಅಳವಡಿಕೆ ಮಾಡಿರುವ ಕುರಿತು ಛಾಯಚಿತ್ರವನ್ನು ಸಲ್ಲಿಸಿದರೆ ಅಮಾನತು ತೆರವು ಮಾಡಲಾಗುವುದು ಎಂದು ತಿಳಿಸಲಾಗಿದೆ.
ಗುರುವಾರ ಯಲಹಂಕ ವಲಯ ವ್ಯಾಪ್ತಿಯ ಮಾಲ್ ಆಫ್ ಏಷ್ಯಾದಲ್ಲಿ ಕೆಲವು ಮಳಿಗೆಗಳಿಗೆ ಬೀಗ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.