ಈ ವರ್ಷ ಬಿಬಿಎಂಪಿ ಚುನಾವಣೆ ಅನುಮಾನ?

| Published : Jul 02 2024, 01:50 AM IST / Updated: Jul 02 2024, 09:02 AM IST

ಸಾರಾಂಶ

ಕಾಂಗ್ರೆಸ್ ನಡೆಸಿದ ಆಂತರಿಕ ಪರೀಕ್ಷೆಯಲ್ಲಿ ಹಿನ್ನಡೆ ಆಗುವ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಮುಂದೂಡ ಶಂಕೆ ವ್ಯಕ್ತವಾಗಿದೆ.

 ಬೆಂಗಳೂರು:  ಈ ವರ್ಷಾಂತ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಸುತ್ತೇವೆ ಎಂದು ಉಪಮುಖ್ಯಮಂತ್ರಿ ಸೇರಿದಂತೆ ಕೆಲ ಸಚಿವರು ಹೇಳುತ್ತಿದ್ದರೂ, ಬಿಬಿಎಂಪಿ ಚುನಾವಣಾ ವಿಭಾಗದಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆ ಆರಂಭ ಆಗದಿರುವುದು ಚುನಾವಣೆ ಇನ್ನೂ ಒಂದು ವರ್ಷ ನಡೆಯುವುದು ಅನುಮಾನ ಎನ್ನುವಂತಾಗಿದೆ.

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ 225 ವಾರ್ಡ್‌ಗಳಿಗೆ ಮೀಸಲಾತಿ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದರು. ಆದರೆ, ಮೀಸಲಾತಿ ನಿಗದಿ ಸೇರಿದಂತೆ ಚುನಾವಣೆಗೆ ಅಗತ್ಯವಿರುವ ಯಾವುದೇ ಪ್ರಕ್ರಿಯೆಗಳೂ ಆರಂಭವಾಗಿಲ್ಲ. ಅದರ ನಡುವೆಯೇ ಕಾಂಗ್ರೆಸ್‌ ಪಕ್ಷದಿಂದ ನಡೆಸಿರುವ ಆಂತರಿಕ ಸರ್ವೇಯು ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಅಂಶ ತಿಳಿದಿದ್ದು, ಹೀಗಾಗಿ ಈ ವರ್ಷವೂ ಚುನಾವಣೆ ನಡೆಸುವುದು ಬೇಡ ಎಂ ಬಗ್ಗೆ ಕಾಂಗ್ರೆಸ್‌ನ ಬೆಂಗಳೂರು ಶಾಸಕರು ಸಿಎಂ ಮತ್ತು ಡಿಸಿಎಂ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ.ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ?:

ಸದ್ಯದ ಮಾಹಿತಿಯಂತೆ ಕಾಂಗ್ರೆಸ್‌ನಿಂದ ನಡೆಸಿರುವ ಆಂತರಿಕ ಸರ್ವೆಯಲ್ಲಿ ಬಿಬಿಎಂಪಿ ಚುನಾವಣೆ ನಡೆದರೆ 225 ಸ್ಥಾನಗಳಲ್ಲಿ ಕನಿಷ್ಠ 100 ಸ್ಥಾನಗಳಲ್ಲೂ ಗೆಲುವು ಸಾಧಿಸುವುದು ಕಷ್ಟ ಎನ್ನುವಂತಹ ಪರಿಸ್ಥಿತಿಯಿದೆ ಎಂಬ ಅಂಶಗಳು ತಿಳಿದುಬಂದಿದೆ. ಪ್ರಮುಖವಾಗಿ ಸರ್ಕಾರ ರಚನೆಯಾಗಿ 14 ತಿಂಗಳಾದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಂಡಿಲ್ಲ ಎಂಬುದು ಜನರ ಮನಸ್ಸಿನಲ್ಲಿರುವ ಅಭಿಪ್ರಾಯ. ಅಲ್ಲದೆ, ಮಹಾನಗರದ ಜನರಿಗೆ ಗ್ಯಾರಂಟಿ ಯೋಜನೆಗಳ ಮೇಲೆ ಅಷ್ಟಾಗಿ ಒಲವಿಲ್ಲ ಎಂದೂ ಹೇಳಲಾಗಿದೆ. ಈ ಎಲ್ಲ ಕಾರಣಗಳಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಸರ್ವೆ ವರದಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.ಬೆಲೆ ಏರಿಕೆಯೂ ಗಣನೆಗೆ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ, ಹೆಚ್ಚುವರಿ ಹಾಲು ನೀಡಿದರೂ ದರ ಹೆಚ್ಚಳ ಮಾಡಿರುವುದು, ಮಾರ್ಗಸೂಚಿ ದರದಲ್ಲಿ ಹೆಚ್ಚಳದಿಂದಾಗಿರುವ ಸಮಸ್ಯೆಗಳು, ನೀರಿನ ಶುಲ್ಕ ಹೆಚ್ಚಳದ ಕುರಿತ ಚರ್ಚೆ, ಬಸ್ ಪ್ರಯಾಣ ದರ ಹೆಚ್ಚಳದ ಚಿಂತನೆಗಳ ಬಗ್ಗೆಯೂ ಜನರು ಸರ್ಕಾರದ ಮೇಲೆ ಮುನಿಸಿಕೊಳ್ಳುವಂತಾಗಿದೆ. ಹೀಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಎಲ್ಲ ಲಕ್ಷಣಗಳಿವೆ.ಶಾಸಕರಿಗಿಲ್ಲ ಆಸಕ್ತಿ

ಪಕ್ಷಾತೀತವಾಗಿ ಬೆಂಗಳೂರು ನಗರದ ಎಲ್ಲ ಶಾಸಕರಿಗೂ ಬಿಬಿಎಂಪಿ ಚುನಾವಣೆ ಬಗ್ಗೆ ಆಸಕ್ತಿಯಿಲ್ಲದಂತಾಗಿದೆ. ಹೀಗಾಗಿ ಚುನಾವಣೆ ಮುಂದೂಡಲು ಬಿಬಿಎಂಪಿ ಮರುವಿಂಗಡಣೆ, ಲಂಡನ್‌ ಮಾದರಿಯಲ್ಲಿ ಪಾಲಿಕೆ ರಚನೆ, ಬಿಬಿಎಂಪಿಯನ್ನು 5 ಭಾಗಗಳಾಗಿ ವಿಭಜಿಸುವ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಅದರ ನಡುವೆಯೇ ನಡೆಸಲಾಗಿರುವ ಸರ್ವೆಯಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ ಎಂಬ ಅಂಶ ಬೆಳಕಿಗೆ ಬಂದಿದೆ.

ಒಂದು ವೇಳೆ ಚುನಾವಣೆ ನಡೆಸಿ ಬಿಬಿಎಂಪಿ ಮೇಲಿನ ಹಿಡಿತ ಕೈ ತಪ್ಪಿದರೆ, ಶಾಸಕರಿಗೆ ದೊರೆಯುವ ಅನುದಾನ ಸೇರಿದಂತೆ ಇನ್ನಿತರ ವ್ಯವಸ್ಥೆಗಳು ಇಲ್ಲದಂತಾಗಲಿದೆ. ಎಲ್ಲದಕ್ಕೂ ಬಿಬಿಎಂಪಿ ಸದಸ್ಯರನ್ನು ಜತೆಗಿಟ್ಟುಕೊಂಡು ಕೆಲಸ ಮಾಡಬೇಕಿದೆ. ಹೀಗಾಗಿ ಶಾಸಕರು ಚುನಾವಣೆ ಮೇಲೆ ಈಗಲೂ ಆಸಕ್ತಿ ತೋರುತ್ತಿಲ್ಲ ಎಂದು ಬಿಬಿಎಂಪಿಯ ಕೆಲ ಮಾಜಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.