ಮನೆಗಳಿಗೆ ತೆರಳಿ ಲಸಿಕೆ ಹಾಕುವ ಸಿಬ್ಬಂದಿಗೆ ಬೈಕ್‌

| Published : Feb 03 2024, 01:45 AM IST

ಸಾರಾಂಶ

ಮನೆಗಳಿಗೆ ತೆರಳಿ ನವಜಾತ ಮಕ್ಕಳಿಗೆ ನಿಯಮಿತವಾಗಿ ಲಸಿಕೆ ನೀಡಲು ಬಿಬಿಎಂಪಿಯು 2024-25 ಸಾಲಿನ ಬಜೆಟ್‌ನಲ್ಲಿ ‘ವ್ಯಾಕ್ಸಿಲ್‌ ವ್ಹೀಲ್’ ಕಾರ್ಯಕ್ರಮ ಜಾರಿ. ನವಜಾತ ಮಕ್ಕಳಿಗೆ ಲಸಿಕೆ ಹಾಕುವ ಸಿಬ್ಬಂದಿಗೆ ಅನುಕೂಲ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಗಳಿಗೆ ತೆರಳಿ ನವಜಾತ ಮಕ್ಕಳಿಗೆ ನಿಯಮಿತವಾಗಿ ಲಿಸಿಕೆ ನೀಡಲು ಬಿಬಿಎಂಪಿಯು 2024-25 ಸಾಲಿನ ಬಜೆಟ್‌ನಲ್ಲಿ ‘ವ್ಯಾಕ್ಸಿಲ್‌ ವ್ಹೀಲ್’ ಕಾರ್ಯಕ್ರಮ ಜಾರಿಗೊಳಿಸಲು ಮುಂದಾಗಿದೆ.

ಮಕ್ಕಳಿಗೆ ನಾಯಿ ಕೆಮ್ಮು, ದಡಾರ, ಮಂಪ್ಸ್, ಹಿಬ್ ಮೆನಿಂಜೈಟಿಸ್, ಮೆನಿಂಗೊಕೊಕಲ್ ಕಾಯಿಲೆ, ನ್ಯುಮೋಕೊಕಲ್ ಕಾಯಿಲೆ, ಹೆಪಟೈಟಿಸ್ ಹಾಗೂ ಪೊಲಿಯೋದಂತಹ ಗಂಭೀರ ಕಾಯಿಲೆಗಳಿಂದ ದೂರವಿಡಲು ಅಗತ್ಯವಿರುವ ಲಸಿಕೆಗಳನ್ನು ಬಿಬಿಎಂಪಿ ಆರೋಗ್ಯ ವಿಭಾಗದಿಂದ ನೀಡಲಾಗುತ್ತದೆ. ಈ ಲಸಿಕೆಗಳನ್ನು ಮನೆಗೆ ತೆರಳಿ ಲಸಿಕೆ ನೀಡಲು ಪಾಲಿಕೆಯ ಆರೋಗ್ಯ ಸಿಬ್ಬಂದಿಗೆ ದ್ವಿಚಕ್ರ ವಾಹನ ನೀಡುವ ಯೋಜನೆಯೇ ವ್ಯಾಕ್ಸಿನ್‌ ವ್ಹೀಲ್‌ ಕಾರ್ಯಕ್ರಮವಾಗಿದೆ.

2 ರಿಂದ 3 ಕೋಟಿ ರು, ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಪ್ರತಿ ವಾರ್ಡ್‌ಗೆ ಒಂದು ದ್ವಿಚಕ್ರ ವಾಹನದಂತೆ 225 ದ್ವಿಚಕ್ರ ವಾಹನ ಖರೀದಿ ಮಾಡಲು ಚಿಂತನೆ ನಡೆಸಲಾಗಿದೆ. ಈ ಕುರಿತು ಬಿಬಿಎಂಪಿ ಆರೋಗ್ಯ ವಿಭಾಗದಿಂದ ಹಣಕಾಸು ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು, 2024-25ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಕೋರಲಾಗಿದೆ.

ವಲಯಕ್ಕೆ 1 ಆ್ಯಂಬುಲೆನ್ಸ್‌:

ತುರ್ತು ಸಂದರ್ಭದಲ್ಲಿ ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಬಿಬಿಎಂಪಿಯ ವಲಯಕ್ಕೆ ಒಂದು ಆ್ಯಂಬುಲೆನ್ಸ್‌ ಖರೀದಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟು ಎಂಟು ವಲಯಗಳಿಗೆ ಎಂಟು ಆ್ಯಂಬುಲೆನ್ಸ್‌ ಖರೀದಿಸಲು ನಿರ್ಧರಿಸಲಾಗಿದೆ.