ಕಾಮಗಾರಿ ಪರೀಕ್ಷೆಗೆ ಪಾಲಿಕೆ ಸಂಚಾರಿ ಲ್ಯಾಬ್‌

| Published : Feb 22 2024, 01:46 AM IST / Updated: Feb 22 2024, 12:21 PM IST

ಸಾರಾಂಶ

ತನ್ನ ಗುಣ ನಿಯಂತ್ರಣ ಪ್ರಯೋಗಾಲಯ ಬೆಂಕಿಗೆ ಆಹುತಿ ಆದ ಬಳಿಕ ಬಿಬಿಎಂಪಿ ಈಗ 3 ಸಂಚಾರಿ ಲ್ಯಾಬ್‌ ಆರಂಭಿಸಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಟೆಂಡರ್ ಆಹ್ವಾನಿಸಿದೆ.

ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿಯ ಕೇಂದ್ರ ಕಚೇರಿಯ ಆವರಣದಲ್ಲಿದ್ದ ಗುಣ ನಿಯಂತ್ರಣ ಪ್ರಯೋಗಾಲಯಕ್ಕೆ ಬೆಂಕಿ ಬಿದ್ದು ಸುಟ್ಟು ಕರಕಲಾದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿಯ ಎರಡು ಸಂಚಾರಿ ಹಾಗೂ ಮೂರು ಸ್ಥಿರ ಗುಣ ನಿಯಂತ್ರಣ ಪ್ರಯೋಗಾಲಯ ಸ್ಥಾಪನೆಗೆ ಮುಂದಾಗಿದೆ.

ಬಿಬಿಎಂಪಿಯಿಂದ ಕೈಗೊಳ್ಳುವ ನಗರದ ರಸ್ತೆ, ಚರಂಡಿ, ಫ್ಲೈಓವರ್‌, ಕಟ್ಟಡ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಗುಣನಿಯಂತ್ರಣ ಪ್ರಯೋಗಾಲಯನ್ನು ಹೊಂದಿತ್ತು. 

ಕಳೆದ ಆಗಸ್ಟ್‌ 11ರಂದು ಬೆಂಕಿ ಅವಘಡ ಸಂಭವಿಸಿ ಅದೇ ವಿಭಾಗದ ಮುಖ್ಯ ಎಂಜಿನಿಯರ್‌ ಮೃತಪಟ್ಟಿದ್ದರು. ಜತೆಗೆ, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಆ ಬಳಿಕ ಬಿಬಿಎಂಪಿಯು ನಡೆಸುತ್ತಿದ್ದ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಯನ್ನು ಖಾಸಗಿ ಸಂಸ್ಥೆಯ ಲ್ಯಾಬ್‌ನಲ್ಲಿ ನಡೆಸಲಾಗುತ್ತಿತ್ತು. ಇದೀಗ ಬಿಬಿಎಂಪಿಯು ಎರಡು ಸಂಚಾರ ಮತ್ತು ಮೂರು ಸ್ಥಿರ ಗುಣ ನಿಯಂತ್ರಣ ಪ್ರಯೋಗಾಲಯ ಸ್ಥಾಪನೆಗೆ ಮುಂದಾಗಿದೆ.

ಎರಡು ಮೊಬೈಲ್‌ ಲ್ಯಾಬ್‌ಗೆ ₹54 ಲಕ್ಷ: ಎರಡು ಸಂಚಾರಿ ಗುಣನಿಯಂತ್ರಣ ಪ್ರಯೋಗಾಲಯ ಸ್ಥಾಪನೆಗೆ ಒಟ್ಟು ₹54 ಲಕ್ಷ ವೆಚ್ಚ ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ. ಈ ಸಂಬಂಧ ಟೆಂಡರ್‌ ಆಹ್ವಾನಿಸಿದ್ದು, ವಾಹನ ಸೇರಿದಂತೆ ಡಾಂಬರ್‌ ಬಿಟುಮಿನ್‌, ಕಾಂಕ್ರೀಟ್‌, ಮಣ್ಣು ಸೇರಿದಂತೆ ಸಿವಿಲ್‌ ಕಾಮಗಾರಿಗೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳನ್ನು ನಡೆಸುವುದಕ್ಕೆ ಅಗತ್ಯವಿರುವ ಉಪಕರಣಗಳನ್ನು ಪೂರೈಕೆದಾರರು ಒದಗಿಸಬೇಕಿದೆ.

ಮೂರು ಸ್ಥಿರ ಲ್ಯಾಬ್‌ಗೆ ತಯಾರಿ: ಮೂರು ಸ್ಥಿರ ಗುಣನಿಯಂತ್ರಣ ಲ್ಯಾಬ್‌ ನಿರ್ಮಾಣಗಳನ್ನು ಬಿಬಿಎಂಪಿಯ ಹೊರ ವಲಯದ ಕಚೇರಿ ಆವರಣದಲ್ಲಿ ಸ್ಥಾಪನೆ ಮಾಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. 

ಕಟ್ಟಡ ಮತ್ತು ಲ್ಯಾಬ್‌ ಉಪಕರಣಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಪಡಿಸುವ ಕೆಲಸವನ್ನು ಬಿಬಿಎಂಪಿ ಮಾಡುತ್ತಿದ್ದು, ಇನ್ನೊಂದು ವಾರದಲ್ಲಿ ಕ್ರಿಯಾ ಯೋಜನೆ ಸಂಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಮೊಬೈಲ್‌ ಲ್ಯಾಬ್‌ನಲ್ಲಿ ಸ್ಥಳದಲ್ಲಿಯೇ ಫಲಿತಾಂಶ: ಈ ಹಿಂದೆ ಕಾಮಗಾರಿಗೆ ಸಂಬಂಧಿಸಿದಂತೆ ಮಾದರಿಯನ್ನು ಸಂಗ್ರಹಿಸಿ ಕೇಂದ್ರ ಕಚೇರಿಗೆ ತೆಗೆದುಕೊಂಡು ಬಂದು ಪರೀಕ್ಷೆ ನಡೆಸಲಾಗುತ್ತಿತ್ತು. ಸಂಚಾರಿ ಗುಣನಿಯಂತ್ರಣ ಪ್ರಯೋಗಾಲಯ ಸ್ಥಾಪನೆ ಬಳಿಕ ವಾಹನವೇ ಕಾಮಗಾರಿ ಸ್ಥಳಕ್ಕೆ ತೆರಳಿದೆ. 

ಅಲ್ಲಿಯೇ ಮಾದರಿ ಸಂಗ್ರಹಿಸಿ ಅಲ್ಲಿಯೇ ಪರೀಕ್ಷೆ ನಡೆಸಲಿದೆ. ಈ ರೀತಿ ಪರೀಕ್ಷೆಯ ಶೇಕಡ 90ರಷ್ಟು ಸ್ಥಳದಲ್ಲಿಯೇ ಫಲಿತಾಂಶ ಲಭ್ಯವಾಗಲಿದೆ. ಬಾಕಿ ಉಳಿದ ಶೇ.10ರಷ್ಟು ಪರೀಕ್ಷೆಗಳಿಗೆ ಕಚೇರಿಗೆ ಆಗಮಿಸಿ ಲೆಕ್ಕಚಾರ ಹಾಕಿ ಫಲಿತಾಂಶ ಸಿದ್ಧಪಡಿಸಬೇಕಾಗಲಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.ಮೂರ್ನಾಲ್ಕು ಸಿಬ್ಬಂದಿ

ಪ್ರತಿ ಸಂಚಾರಿ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಚಾಲಕ, ಸಹಾಯಕ ಸಿಬ್ಬಂದಿ ಹಾಗೂ ಪರೀಕ್ಷೆ ನಡೆಸುವ ಎಂಜಿನಿಯರ್‌ ಸೇರಿದಂತೆ ಮೂರ್ನಾಲ್ಕು ಸಿಬ್ಬಂದಿ ಮಾತ್ರ ಲ್ಯಾಬ್‌ನಲ್ಲಿ ಇರಲಿದ್ದಾರೆ. 

ಜತೆಗೆ, ಅಗತ್ಯವಿರುವ ರಾಸಾಯನಿಕವನ್ನು ಮಾತ್ರ ವಾಹನದಲ್ಲಿ ಸಂಗ್ರಹಿಸಲಾಗುತ್ತದೆ.ಕೇಂದ್ರ ಕಚೇರಿಯಲ್ಲಿ ಇಲ್ಲ ಲ್ಯಾಬ್‌

ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಸಂಭವಿಸಿದ ಅಗ್ನಿ ಅವಘಡ ಹಿನ್ನೆಲೆಯಲ್ಲಿ ಕೇಂದ್ರ ಕಚೇರಿ ಆವರಣದಲ್ಲಿ ಸ್ಥಿರ ಗುಣನಿಯಂತ್ರಣ ಪ್ರಯೋಗಾಲಯ ಬೇಡ ಎಂಬ ಅಭಿಪ್ರಾಯವನ್ನು ಅಧಿಕಾರಿ ಸಿಬ್ಬಂದಿ ವ್ಯಕ್ತಪಡಿಸಿದ್ದರು. 

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬಿಬಿಎಂಪಿ ಹೊರ ವಲಯದಲ್ಲಿ ಸ್ಥಿರ ಲ್ಯಾಬ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.ಮೂರು ಸ್ಥಿರ ಹಾಗೂ ಎರಡು ಸಂಚಾರಿ ಗುಣ ನಿಯಂತ್ರಣ ಪ್ರಯೋಗಾಲಯ ಸ್ಥಾಪನೆಗೆ ನಿರ್ಧರಿಸಲಾಗಿದೆ. 

ಈಗಾಗಲೇ ಸಂಚಾರ ಗುಣ ನಿಯಂತ್ರಣ ಲ್ಯಾಬ್‌ಗೆ ಟೆಂಡರ್‌ ಆಹ್ವಾನಿಸಲಾಗಿದ್ದು, ಸ್ಥಿರ ಲ್ಯಾಬ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. -ಮಹಂತೇಶ್‌, ಕಾರ್ಯಪಾಲಕ ಎಂಜಿನಿಯರ್‌, ಬಿಬಿಎಂಪಿ ಗುಣ ನಿಯಂತ್ರಣ ವಿಭಾಗ.