ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳನ್ನು ಹರಾಜು ಹಾಕುವುದಕ್ಕೆ ಸಿದ್ಧತೆ ನಡೆಸಿರುವ ಬಿಬಿಎಂಪಿಯು, ಪಾಲಿಕೆಯ ಎಂಟು ವಲಯಗಳ ಪೈಕಿ ತಲಾ ಒಂದು ಆಸ್ತಿಯನ್ನು ಪ್ರಾಯೋಗಿಕವಾಗಿ ಹರಾಜು ಹಾಕುವುದಕ್ಕೆ ನಿರ್ಧರಿಸಿದೆ.
ಈಗಾಗಲೇ ವಲಯ ಮಟ್ಟದಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಇರುವ ವಾಣಿಜ್ಯ ಕಟ್ಟಡವನ್ನು ಗುರುತಿಸಿಕೊಂಡಿರುವ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಬಿಬಿಎಂಪಿಯ ಆಸ್ತಿ ತೆರಿಗೆ ವ್ಯಾಪ್ತಿಗೆ ಸುಮಾರು 21 ಲಕ್ಷ ಆಸ್ತಿಗಳಿದ್ದು, ಈ ಪೈಕಿ ಸುಮಾರು 17 ಲಕ್ಷ ಆಸ್ತಿಗಳ ಮಾಲೀಕರು ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಇನ್ನುಳಿದ ಸುಮಾರು 4 ಲಕ್ಷದಷ್ಟು ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಉಳಿಸಿಕೊಂಡವರ ಅನುಕೂಲಕ್ಕೆ ಬಡ್ಡಿ ಮತ್ತು ದಂಡ ಮೊತ್ತವನ್ನು ಸಂಪೂರ್ಣವಾಗಿ ಮನ್ನಗೊಳಿಸುವ ಒಟಿಎಸ್ ಯೋಜನೆ ಜಾರಿಗೊಳಿಸಿ ಬರೋಬ್ಬರಿ 8 ತಿಂಗಳು ಅವಕಾಶ ನೀಡಿತ್ತು. ಆದರೂ ಪಾವತಿ ಮಾಡದ ಆಸ್ತಿಗಳನ್ನು ಇದೀಗ ಹರಾಜು ಹಾಕುವುದಕ್ಕೆ ಬಿಬಿಎಂಪಿಯು ಮುಂದಾಗಿದೆ.
ಇದೇ ವಾರ ಹರಾಜು ನೋಟಿಸ್:
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಪೈಕಿ ಅತಿ ಹೆಚ್ಚು ಬಾಕಿ ಇರುವ ಒಂದೊಂದು ವಾಣಿಜ್ಯ ಕಟ್ಟಡವನ್ನು ಗುರುತಿಸಿಕೊಂಡಿರುವ ವಲಯ ಮಟ್ಟದ ಕಂದಾಯ ಅಧಿಕಾರಿಗಳು, ಇದೇ ವಾರದಲ್ಲಿ ಹರಾಜು ಹಾಕುವ ಬಗ್ಗೆ ಆಯಾ ಮಾಲೀಕರಿಗೆ ನೋಟಿಸ್ ನೀಡಲು ತಯಾರಿ ಮಾಡಿಕೊಂಡಿದ್ದಾರೆ. ನೋಟಿಸ್ ನೀಡಿದ ತಕ್ಷಣ ಮಾಲೀಕರು ಬಾಕಿ ಮೊತ್ತ ಪಾವತಿ ಮಾಡಿದರೆ ಹರಾಜು ಪ್ರಕ್ರಿಯೆ ಕೈ ಬಿಡಲಾಗುತ್ತದೆ. ಇಲ್ಲವಾದರೆ ನಿಯಮಾನುಸಾರ ಹರಾಜು ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೀಜ್‌ಗೆ ಬಗ್ಗದ ಸುಸ್ತಿದಾರರು:
ಬಿಬಿಎಂಪಿಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಮೇಲೆ ಕಳೆದೊಂದು ವರ್ಷದಿಂದ ಆಸ್ತಿಯನ್ನು ಸೀಜ್ ಮಾಡುವ ಕೆಲಸವನ್ನು ಬಿಬಿಎಂಪಿಯ ಅಧಿಕಾರಿಗಳು ಮಾಡುತ್ತಿದ್ದಾರೆ. ಈವರೆಗೆ ಸುಮಾರು 6 ಸಾವಿರಕ್ಕೂ ಅಧಿಕ ಆಸ್ತಿ ಸೀಜ್ ಮಾಡಿದ್ದಾರೆ. ಜತೆಗೆ, 81 ಸಾವಿರ ಆಸ್ತಿ ಮಾಲೀಕರ ಬ್ಯಾಂಕ್ ಖಾತೆಯನ್ನು ಬಿಬಿಎಂಪಿಯು ಬ್ಯಾಂಕ್ ಖಾತೆಯೊಂದಿಗೆ ಅಟ್ಯಾಚ್‌ಮೆಂಟ್ ಮಾಡಲಾಗಿದೆ. ಆದರೂ ಸುಸ್ತಿದಾರರು ಬಾಕಿ ಇರುವ ಆಸ್ತಿ ತೆರಿಗೆ ಪಾವತಿ ಮಾಡ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆಗೆ ಮುಂದಾಗಿದೆ.
ಹರಾಜು ವಿರುದ್ಧ ನ್ಯಾಯಾಲದ ಮೊರೆ ಸಾಧ್ಯತೆ : ಬಿಬಿಎಂಪಿಯ ಅಧಿಕಾರಿಗಳು ಸುಸ್ತಿದಾರರಿಗೆ ಹರಾಜು ನೋಟಿಸ್ ನೀಡುವುದಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಆದರೆ, ಬಿಬಿಎಂಪಿಯ ಅಧಿಕಾರಿಗಳ ಕ್ರಮದ ವಿರುದ್ಧ ಸುಸ್ತಿದಾರರು ನ್ಯಾಯಾಲಯದ ಮೊರೆ ಹೋಗಿ ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ ತರುವ ಸಾಧ್ಯತೆಯೂ ಹೆಚ್ಚಾಗಿದೆ. ಈಗಾಗಲೇ ಕೋಟ್ಯಾಂತರ ರು. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು ಬಾಕಿ ಪಾವತಿಗೆ ಸಂಬಂಧಿಸಿದಂತೆ ಪಾಲಿಕೆ ನೀಡಿದ ನೋಟಿಸ್ ವಿರುದ್ಧವೇ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ಉದಾಹರಣೆ ಈಗಾಗಲೇ ಕಣ್ಮುಂದೆ ಇದೆ.
ಪಾಲಿಕೆ ಇತಿಹಾಸದಲ್ಲಿ ಮೊದಲ ಸ್ಥಿರಾಸ್ತಿ ಹರಾಜು ಪ್ರಕ್ರಿಯೆ
ಕೆಎಂಸಿ ಕಾಯ್ದೆಯಡಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರ ಚರಾಸ್ತಿಯನ್ನು ಜಪ್ತಿ ಮಾಡಲು ಮಾತ್ರ ಕಾನೂನಿನಲ್ಲಿ ಅವಕಾಶ ಇತ್ತು. ಅದನ್ನೇ ಬಿಬಿಎಂಪಿಯ ಕಾಯ್ದೆಯಲ್ಲಿ ಅಳವಡಿಕೆ ಮಾಡಿಕೊಳ್ಳಲಾಗಿತ್ತು. ಇತ್ತೀಚಿಗೆ ಬಿಬಿಎಂಪಿಯ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಈ ಪ್ರಕಾರ ಸುಸ್ತಿದಾರರ ಚರಾಸ್ತಿ ಮಾತ್ರವಲ್ಲದೇ ಸ್ಥಿರಾಸ್ತಿಯನ್ನೂ ಜಪ್ತಿ ಮಾಡಿ ಹರಾಜು ಹಾಕುವುದಕ್ಕೆ ತಿದ್ದುಪಡಿ ಮಾಡಲಾಗಿದೆ. ಈ ಕಾನೂನು ಬಳಕೆ ಮಾಡಿಕೊಂಡು ಇದೀಗ ಬಿಬಿಎಂಪಿ ಸ್ಥಿರಾಸ್ತಿ ಹರಾಜು ಹಾಕುವುದಕ್ಕೆ ಮುಂದಾಗಿದೆ.ಪ್ರಸಕ್ತ ವರ್ಷ 5,210 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ. ಆದರೆ, ಈವರೆಗೆ 4,380 ಕೋಟಿ ರು. ವಸೂಲಿ ಆಗಿದೆ. ಒಟಿಎಸ್ ಯೋಜನೆ ಮುಗಿದ ಬಳಿಕ ವಸೂಲಿ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ, ಸುಸ್ಥಿತಿದಾರರ ಆಸ್ತಿ ಹರಾಜಿಗೆ ಮುಂದಾಗಿದ್ದೇವೆ. ಈ ವಾರದಲ್ಲಿ ವಲಯವಾರು ಒಂದೊಂದು ಆಸ್ತಿಗೆ ಹರಾಜಿಗೆ ನೋಟಿಸ್ ನೀಡಲಾಗುವುದು.
- ಮುನೀಶ್ ಮೌದ್ಗಿಲ್, ಕಂದಾಯ ವಿಭಾಗದ ವಿಶೇಷ ಆಯುಕ್ತ, ಬಿಬಿಎಂಪಿ