ಬಿಬಿಎಂಪಿಯ ಕಳೆದ ವರ್ಷದ ಬಜೆಟ್‌ಗೆ ಕತ್ತರಿ!

| Published : Feb 02 2024, 01:03 AM IST / Updated: Feb 02 2024, 03:16 PM IST

BBMP
ಬಿಬಿಎಂಪಿಯ ಕಳೆದ ವರ್ಷದ ಬಜೆಟ್‌ಗೆ ಕತ್ತರಿ!
Share this Article
  • FB
  • TW
  • Linkdin
  • Email

ಸಾರಾಂಶ

ಬಿಬಿಎಂಪಿಯು ಬಜೆಟ್‌ ಮಂಡನೆ ವೇಳೆ ತಿಳಿಸಿದ್ದ ಪ್ರಮುಖ ಆದಾಯ ಮೂಲಗಳಿಂದ ನಿರೀಕ್ಷಿತ ಆದಾಯ ಬಂದಿಲ್ಲವಾಗಿ, ಬಜೆಟ್‌ ಗಾತ್ರವನ್ನು ಆರ್ಥಿಕ ವರ್ಷಾಂತ್ಯದಲ್ಲಿ ಕಡಿತಗೊಳಿಸುವುದಕ್ಕೆ ಪಾಲಿಕೆ ಮುಂದಾಗಿದೆ.

ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರು

ಬಾರದ ಆದಾಯವನ್ನು ನೆಚ್ಚಿಕೊಂಡು ಕಳೆದ ವರ್ಷ ಬಿಬಿಎಂಪಿ ಮಂಡಿಸಿದ್ದ ₹11,885 ಕೋಟಿ ವೆಚ್ಚದ ಆಯವ್ಯಯಕ್ಕೆ ಕತ್ತರಿ ಬಿದ್ದಿದ್ದು, ಬಜೆಟ್‌ ಗಾತ್ರವನ್ನು ₹9,537 ಕೋಟಿಗೆ ಕುಗ್ಗಿಸಲಾಗುತ್ತಿದೆ.

ಈ ಮೂಲಕ ಬಿಬಿಎಂಪಿಯ 2023-24ನೇ ಸಾಲಿನ ₹2,350 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ.

ಬಿಬಿಎಂಪಿಯು ಕಳೆದ ವರ್ಷ ಬರೋಬ್ಬರಿ ₹11,158 ಕೋಟಿ ಆದಾಯ ನಿರೀಕ್ಷೆ ಇಟ್ಟುಕೊಂಡು ₹11,157 ಕೋಟಿ ವೆಚ್ಚದ ಯೋಜನೆಗಳನ್ನು ಘೋಷಣೆ ಮಾಡಿತ್ತು. ರಾಜ್ಯ ಸರ್ಕಾರವೂ ಬಿಬಿಎಂಪಿಯ ಬಜೆಟ್‌ಗೆ ಅನುಮೋದನೆ ಸಂದರ್ಭದಲ್ಲಿ ಇನ್ನಷ್ಟು ಅನುದಾನ ನೀಡುವುದಾಗಿ ತಿಳಿಸಿ ಪಾಲಿಕೆ ಬಜೆಟ್‌ ಗಾತ್ರವನ್ನು ₹11,885 ಕೋಟಿಗೆ ಹೆಚ್ಚಿಸಲಾಗಿತ್ತು.

ಆದರೀಗ ಬಿಬಿಎಂಪಿಯು ಬಜೆಟ್‌ ಮಂಡನೆ ವೇಳೆ ತಿಳಿಸಿದ್ದ ಪ್ರಮುಖ ಆದಾಯ ಮೂಲಗಳಿಂದ ನಿರೀಕ್ಷಿತ ಆದಾಯ ಬಂದಿಲ್ಲ. ಹೀಗಾಗಿ, ಬಜೆಟ್‌ ಗಾತ್ರವನ್ನು ಆರ್ಥಿಕ ವರ್ಷಾಂತ್ಯದಲ್ಲಿ ಕಡಿತಗೊಳಿಸುವುದಕ್ಕೆ ಮುಂದಾಗಿದೆ.

ಬಾರದ ಆದಾಯ ಯಾವುವು?
ಬಿಬಿಎಂಪಿಯು ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಮಾನ್ಯತೆ ನೀಡುವ ಮೂಲಕ ಸುಮಾರು ₹1 ಸಾವಿರ ಕೋಟಿಗೂ ಅಧಿಕ ಆದಾಯವನ್ನು ನಿರೀಕ್ಷೆ ಮಾಡಿತ್ತು. ಆದರೆ, ಆ ಪ್ರಕ್ರಿಯೆ ಆಗದ ಕಾರಣ ಆದಾಯ ಬಂದಿಲ್ಲ.

ಇನ್ನು ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಸೇರಿದಂತೆ ಹೊರಾಂಗಣ ಜಾಹೀರಾತು ನಿಷೇಧಿಸಲಾಗಿದೆ. ಜಾಹೀರಾತು ಬೈಲಾ ತಿದ್ದುಪಡಿಗೊಳಿಸಿ ಸುಮಾರು ₹750 ಕೋಟಿ ಆದಾಯ ಗಳಿಸುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಆ ಕಾರ್ಯವೂ ಆಗಿಲ್ಲ. ಹಾಗಾಗಿ, ಆದಾಯ ಕೊರತೆ ಉಂಟಾಗಿದೆ.

ಜತೆಗೆ, ₹4,400 ಕೋಟಿಗೂ ಅಧಿಕ ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಇದೀಗ ಸುಮಾರು ₹3,300 ಕೋಟಿ ಆಸ್ತಿ ತೆರಿಗೆ ವಸೂಲಿ ಆಗಿದೆ. ಈ ಎಲ್ಲಾ ಕಾರಣದಿಂದ ಕಳೆದ ವರ್ಷ ಬಿಬಿಎಂಪಿಯ ಬಜೆಟ್‌ಗೆ ಕತ್ತರಿ ಹಾಕಲಾಗುತ್ತಿದೆ.

₹2,350 ಕೋಟಿಗಾಗಿ ಸರ್ಕಾರಕ್ಕೆ ಜೋತು: ರಾಜ್ಯ ಸರ್ಕಾರವೂ ಕಳೆದ ಸಾಲಿನಲ್ಲಿ ಬಿಬಿಎಂಪಿಗೆ ಸುಮಾರು ₹4 ಸಾವಿರ ಕೋಟಿ ಅನುದಾನ ನೀಡಿದೆ. ಇದೀಗ ಕೊರತೆ ಆಗಿರುವ ₹2,350 ಕೋಟಿ ಪೈಕಿ ರಾಜ್ಯ ಸರ್ಕಾರವೂ ವಿಶೇಷ ಮೂಲಸೌಕರ್ಯ ಕಾರ್ಯಕ್ರಮದಡಿ ₹2 ಸಾವಿರ ಕೋಟಿ ಹಾಗೂ ರಾಜ್ಯ ಹಣಕಾಸು ಆಯೋಗದಡಿ ₹350 ಕೋಟಿಗಳನ್ನು ಬಿಬಿಎಂಪಿಗೆ ಮಂಜೂರು ಮಾಡಿದರೆ ಬಜೆಟ್‌ನಲ್ಲಿ ಘೋಷಣೆ ಮಾಡಿದ ಯೋಜನೆಗಳನ್ನು ಮುಂದುವರೆಸಬಹುದು ಎಂದು ಸರ್ಕಾರಕ್ಕೆ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿಯೂ ಆರ್ಥಿಕ ಶಿಸ್ತಿಗೆ ತಿಲಾಂಜಲಿ?
ಕಳೆದ ಎರಡು ವರ್ಷಗಳ ಹಿಂದೆ ಬಿಬಿಎಂಪಿಯ ಆದಾಯಕ್ಕೆ ತಕ್ಕಂತೆ ಬಜೆಟ್‌ ರೂಪಿಸಿ ಮಂಡನೆ ಮಾಡುವುದು ಮತ್ತು ಅನಗತ್ಯ ಘೋಷಣೆಗಳಿಗೆ ಮೂಗುದಾರ ಹಾಕುವ ಉದ್ದೇಶದಿಂದ ಬಿಬಿಎಂಪಿ ವಿತ್ತೀಯ ಹೊಂದಾಣಿಕೆ ಮತ್ತು ಬಜೆಟ್‌ ನಿರ್ವಹಣೆ ನಿಯಮ-2021 ಜಾರಿಗೊಳಿಸಲಾಗಿದೆ. ಆದರೆ, 2022-23 ಹಾಗೂ 2023-24ನೇ ಸಾಲಿನ ಬಿಬಿಎಂಪಿ ಬಜೆಟ್‌ ರೂಪಿಸುವ ವೇಳೆ ಪಾಲನೆ ಮಾಡಿಲ್ಲ.

ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ 2024-25ನೇ ಸಾಲಿನ ಬಜೆಟ್‌ನಲ್ಲಿ ಪಾಲನೆ ಮಾಡುವ ಸಾಧ್ಯತೆ ಇಲ್ಲ. ಒಂದು ವೇಳೆ ಬಿಬಿಎಂಪಿ ವಿತ್ತೀಯ ಹೊಂದಾಣಿಕೆ ಮತ್ತು ಬಜೆಟ್‌ ನಿರ್ವಹಣೆ ನಿಯಮ ಪಾಲನೆ ಮಾಡಿದರೆ ₹9,332 ಕೋಟಿ ಮೊತ್ತ ಮೀರದಂತೆ ಬಿಬಿಎಂಪಿ ಬಜೆಟ್‌ ಮಂಡಿಸಬೇಕಾಗಲಿದೆ.

ಹಣ ಕೊಟ್ಟರೆ ಕಾರ್ಯಕ್ರಮ: ಬಜೆಟ್‌ ಮಂಡನೆಗೆ ಮುನ್ನ ಕಳೆದ ವರ್ಷದ ಬಜೆಟ್‌ ಪರಿಷ್ಕರಣೆ ಮಾಡಲಾಗುವುದು. ಕೊರತೆ ಉಂಟಾಗಿ ರಾಜ್ಯ ಸರ್ಕಾರ ಹೆಚ್ಚಿನ ಹಣ ನೀಡಿದರೆ ಎಲ್ಲ ಕಾರ್ಯಕ್ರಮ ಮುಂದುವರೆಸಲಾಗುವುದು ಎಂದು ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.