ಸಾರಾಂಶ
ಹಾವೇರಿ: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ನಡೆಸಿದೆ. ಈ ಹೊತ್ತಿನಲ್ಲಿ ಹಿರೇಕೆರೂರು ಕ್ಷೇತ್ರದ ಶಾಸಕ ಯು.ಬಿ. ಬಣಕಾರ ಹಾಗೂ ಸರ್ಕಾರದ ಸಾಧನೆಗಳನು ಇವೇನಾ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ತಲಾ 10 ಪ್ರಶ್ನೆಗಳನ್ನು ಎಸೆದಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಪ್ರಶ್ನೆ ಕೇಳಿರುವ ಅವರು, ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರ ಬದುಕು ಸಂಪೂರ್ಣವಾಗಿ ದುಸ್ತರವಾಗಿದೆ. ಇದೇ ನಿಮ್ಮ ಸಾಧನೆಯೇ ಎಂದು ವಾಗ್ದಾಳಿ ನಡೆಸಿದ್ದಾರೆ.ಪಾಟೀಲರ ಪ್ರಶ್ನೆಗಳು: ನಿಮ್ಮ 2 ವರ್ಷದ ಸಾಧನೆಯಲ್ಲಿ ನನ್ನ ಅಧಿಕಾರವಧಿಯಲ್ಲಿ ಪ್ರಾರಂಭಗೊಂಡ ತಾಲೂಕಿಗೆ ಮಂಜೂರಾದಂಥ ₹335 ಕೋಟಿ ವೆಚ್ಚದಲ್ಲಿ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರಿನ ಕೆಲಸ ನಿಂತಿದೆ. ₹185 ಕೋಟಿ ವೆಚ್ಚದಲ್ಲಿ 95 ಕೆರೆಗಳನ್ನು ತುಂಬಿಸುವ ಸರ್ವಜ್ಞ ಏತ ನೀರಾವರಿ ಯೋಜನೆ ಪೂರ್ಣವಾಗದೆ ತಡವರಿಸುತ್ತಿದೆ. ಹಿರೇಕೆರೂರು ಹಾಗೂ ರಟ್ಟಿಹಳ್ಳಿ ಪಟ್ಟಣಗಳಲ್ಲಿ ₹10 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಪ್ರವಾಸಿ ಮಂದಿರದ ಕೆಲಸ ಇನ್ನೂ ಮುಕ್ತಾಯವಾಗಿಲ್ಲ. ಸರ್ವಜ್ಞ ಪ್ರಾಧಿಕಾರಕ್ಕೆ ಬಂದ ₹25 ಕೋಟಿಯನ್ನು ಸರ್ಕಾರ ಕಿತ್ತುಕೊಂಡಿದೆ. ಚಿಕ್ಕೇರೂರು, ಮಡ್ಲೂರು, ಕೋಡ, ಅಣಜಿ ರಸ್ತೆಗಳು ನನ್ನ ಅವಧಿಯಲ್ಲಿ ಮಂಜೂರಾಗಿದ್ದು, ಮತ್ತೊಮ್ಮೆ ಗುದ್ದಲಿ ಪೂಜೆ ಮಾಡಿದ್ದು ನಿಮ್ಮ ಸಾಧನೆಯೇ? ನನ್ನ ಅವಧಿಯಲ್ಲಿ ಬಸರಿಹಳ್ಳಿ ಐಟಿಐ ಕಾಲೇಜಿಗೆ ಭೂಮಿಪೂಜೆ ಮಾಡಿದ್ದು, ನೀವು ಮತ್ತೊಮ್ಮೆ ಭೂಮಿಪೂಜೆ ಮಾಡಿ ಪ್ರಾರಂಭಿಸಿದ್ದೀರಿ. ಹಿರೇಕೆರೂರು ಪಟ್ಟಣ ಪಂಚಾಯಿತಿಗೆ ₹5 ಕೋಟಿ ಮಂಜೂರು ಮಾಡಿಸಿದ್ದು, ಇನ್ನೂ ಮುಕ್ತಾಯವಾಗಿಲ್ಲ. ನನ್ನ ಅವಧಿಯಲ್ಲಿ ಆದಂತಹ ಕಾರ್ಮಿಕ ಭವನ ಈಗ ಮುಕ್ತಾಯಗೊಂಡು ಕಾರ್ಮಿಕ ಭವನವನ್ನು ಉದ್ಘಾಟಿಸಿದ್ದು ನಿಮ್ಮ ಸಾಧನೆಯೇ? ನನ್ನ ಅವಧಿಯಲ್ಲಿ ಆದಂತಹ ಹಿರೇಕೆರೂರು ಪಟ್ಟಣಕ್ಕೆ ₹36 ಕೋಟಿ ವೆಚ್ಚದಲ್ಲಿ ನಿರಂತರ ಕುಡಿಯುವ ನೀರನ್ನು ಯೋಜನೆ ಪ್ರಾರಂಭಿಸಿದ್ದು ನಿಮ್ಮ ಸಾಧನೆಯೇ? ನಮ್ಮ ಅಧಿಕಾರ ಅವಧಿಯಲ್ಲಿ ರಟ್ಟಿಹಳ್ಳಿ ಹಾಗೂ ಕೋಡ ಗ್ರಾಮಗಳಿಗೆ ರೈತರಿಗೆ ಅನುಕೂಲವಾಗಲೆಂದು ಕೋಲ್ಡ್ ಸ್ಟೋರೇಜ್ ಮಂಜೂರು ಮಾಡಿಸಿದ್ದು, ಇನ್ನೂ ಮುಕ್ತಾಯಗೊಳಿಸದೆ ಇರುವುದು ನಿಮ್ಮ ಸಾಧನೆಯೇ ಎಂದು ಪ್ರಶ್ನಿಸಿದ್ದಾರೆ. 2 ವರ್ಷದ ಸಾಧನೆ: ಕೃಷಿ ಇಲಾಖೆಯಿಂದ ಬಡ ರೈತ ಮಕ್ಕಳಿಗೆ ನೀಡುತ್ತಿದ್ದ ರೈತ ವಿದ್ಯಾನಿಧಿಯನ್ನು ಸ್ಥಗಿತಗೊಳಿಸಲಾಗಿದೆ. ಪ್ರಧಾನಮಂತ್ರಿಗಳು ರೈತರಿಗೆ ₹6 ಸಾವಿರಗಳನ್ನು ಹಾಗೂ ನಮ್ಮ ರಾಜ್ಯ ಸರ್ಕಾರ ₹4 ಸಾವಿರ ನೀಡುತ್ತಿದ್ದು, ಅದನ್ನು ನಿಲ್ಲಿಸಲಾಗಿದೆ. ರೈತರಿಗೆ ಅನುಕೂಲವಾಗಲೆಂದು ₹1940 ಇದ್ದ ಸ್ಪಿಂಕ್ಲರ್‌ಗಳನ್ನು ₹4,500ಕ್ಕೆ ಏರಿಸಲಾಗಿದೆ. ಕೃಷಿ ಪಂಪಸೆಟ್‌ಗಳಿಗೆ ಅಕ್ರಮ ಸಕ್ರಮದಲ್ಲಿ ಟಿಸಿ ಪಡೆಯಲು ₹25000 ಇದ್ದ ಹಣವನ್ನು ₹3 ಲಕ್ಷಕ್ಕೆ ಏರಿಸಿದ್ದು, ₹10 ಇದ್ದ ಬಾಂಡ್‌ಗಳನ್ನು ₹100ಕ್ಕೆ ಏರಿಸಿದ್ದು ನಿಮ್ಮ ಸಾಧನೆಯೇ ಎಂದು ಪ್ರಶ್ನಿಸಿದ್ದಾರೆ.