ಬಂಟ್ವಾಳ ತಾಲೂಕು ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬ್ರಹ್ಮ ಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಏ.4 ರಿಂದ ಏ.9ರ ವರೆಗೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬ್ರಹ್ಮ ಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಏ.4 ರಿಂದ ಏ.9ರ ವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ರಮೇಶಾನಂದ ಸೋಮಯಾಜಿ ತಿಳಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ಮಧ್ಯಾಹ್ನ 2 ಗಂಟೆಗೆ ಬಿಸಿರೋಡಿನ ಕೈಕಂಬ ದ್ವಾರದಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಚೆಂಡೆವಾದನ ಹಾಗೂ ಗೊಂಬೆ ಕುಣಿತ, ಭಜನಾ ತಂಡಗಳ ಕುಣಿತ ಭಜನೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಏ. 4 ರಿಂದ ಏ.9 ರವರೆಗೆ ವಿವಿಧ ವೈದಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ದೇವಸ್ಥಾನದ ಬಲಭಾಗದ ವೇದಿಕೆಯಲ್ಲಿ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ ನಡೆಯಲಿವೆ. ಎಡಭಾಗದಲ್ಲಿರುವ ವಿಶಾಲ ಸ್ಥಳದಲ್ಲಿ ಪ್ರತಿ ನಿತ್ಯ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಬಿ.ಸಿ.ರೋಡ್‌ನ ಹೃದಯ ಭಾಗದಲ್ಲಿರುವ ರಕ್ತೇಶ್ವರಿ ದೇವಸ್ಥಾನದಲ್ಲಿ ಮೂರನೇ ಬಾರಿಗೆ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುವ ದೃಷ್ಟಿಯಿಂದ ಬೇರೆ ಬೇರೆ ಸಮಿತಿಗಳು ಹಾಗೂ ಸ್ವಯಂ ಸೇವಕರ ತಂಡ ರಾತ್ರಿಹಗಲು ಸೇವಾ ರೂಪದಲ್ಲಿ ಕೆಲಸಗಳನ್ನು ಮಾಡುತ್ತಿದೆ. ಇದರ ಜೊತೆಗೆ ಬಿಸಿರೋಡು ನಗರವನ್ನು ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸ್ವಾಗತಿಸುವ ಬ್ಯಾನರ್ ಮತ್ತು ಆಕರ್ಷಣೆಯ ರೂಪದಲ್ಲಿ ಸಿಂಗರಿಸುವ ಕೆಲಸಗಳನ್ನು ಸ್ಥಳೀಯ ಯುವಕರ ತಂಡ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಮಾತನಾಡಿ, ಚಂಡಿಕಾ ಪರಮೇಶ್ವರಿ ಹಾಗೂ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಸುಪಾಸಿನಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸ್ಥಳೀಯರು ಕಾಲ್ನಡಿಗೆಯಲ್ಲಿಯೇ ದೇವಸ್ಥಾನಕ್ಕೆ ಬರುವ ಮೂಲಕ ನೆರೆ ಊರಿನ ಭಕ್ತರಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ರಕ್ತೇಶ್ವರಿ ದೇವಿ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ, ಸಮಿತಿ ಸದಸ್ಯ ನ್ಯಾಯವಾದಿ ಎಂ.ಆಶ್ವನಿ ಕುಮಾರ್ ರೈ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ, ಪ್ರಧಾನ ಕಾರ್ಯದರ್ಶಿ ಐತ್ತಪ್ಪ ಪೂಜಾರಿ, ಕೋಶಾಧಿಕಾರಿ ನಾರಾಯಣ ಹೆಗ್ಡೆ , ಸಹಕೋಶಾಧಿಕಾರಿ ವಸಂತ ರಾವ್, ಆರ್ಥಿಕ ಸಮಿತಿ ಸಂಚಾಲಕ ಸತೀಶ್ ಶೆಟ್ಟಿ ಕುಳತ್ತಬೆಟ್ಟು, ಹೊರೆ ಕಾಣಿಕೆ ಸಮಿತಿ ಸಂಚಾಲಕ ಬೇಬಿ ಕುಂದರ್, ಅನ್ನಸಂತರ್ಪಣೆ ಸಮಿತಿ ಸಂಚಾಲಕ ರಾಜೇಶ್ ಎಲ್ ನಾಯಕ್, ಸ್ವಾಗತ ಸಮಿತಿ ಸಹಸಂಚಾಲಕ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಸತೀಶ್ ಕುಮಾರ್ ಮೊದಲಾದವರು ಇದ್ದರು.