ಕ್ಷಯರೋಗ ತಡೆಗೆ ಬಿಸಿಜಿ ಚುಚ್ಚುಮದ್ದು

| Published : May 10 2025, 01:03 AM IST

ಸಾರಾಂಶ

ಕ್ಷಯರೋಗವನ್ನು ತಡೆಗಟ್ಟುವಲ್ಲಿ ಬಿಸಿಜಿ ಚುಚ್ಚುಮದ್ದು ತಡೆಗೋಡೆಯಂತೆ ಕಾರ್ಯ ನಿರ್ವಹಿಸುತ್ತಿದೆ

ಶಿರಸಿ: ಕ್ಷಯರೋಗವನ್ನು ತಡೆಗಟ್ಟುವಲ್ಲಿ ಬಿಸಿಜಿ ಚುಚ್ಚುಮದ್ದು ತಡೆಗೋಡೆಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಯಶ್ರೀ ಹೆಗಡೆ ಹೇಳಿದರು.

ಅವರು ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡ ವಯಸ್ಕರ ಬಿಸಿಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕ್ಷಯ ಮುಕ್ತ ಭಾರತ ಮಾಡುವಲ್ಲಿ ಬಿಸಿಜಿ ಚುಚ್ಚುಮದ್ದು ಅತಿ ಅವಶ್ಯಕವಾಗಿದ್ದು, ಇದನ್ನು ಎಲ್ಲರೂ ಪಡೆಯಬೇಕು. ನಮ್ಮ ಜೀವಿತಾವಧಿಯಲ್ಲಿ ಕ್ಷಯ ರೋಗ ಬರದಂತೆ ತಡೆಯಲು ಬಿಸಿಜಿ ಚುಚ್ಚುಮದ್ದು ತಡೆಗೋಡೆಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡೆಯಬೇಕು. ಮೊದಲ ಹಂತದಲ್ಲಿ ೬೦ ವರ್ಷ ಮೇಲ್ಪಟ್ಟ ವಯಸ್ಕರು ಹಾಗೂ ೧೮ ವರ್ಷ ಮೇಲ್ಪಟ್ಟವರು ಕಳೆದ ಐದು ವರ್ಷಗಳಿಂದ ಕ್ಷಯರೋಗಕ್ಕೆ ಚಿಕಿತ್ಸೆ ಪಡೆದು ಗುಣಮುಖರಾದವರು, ಅವರ ನಿಕಟ ಸಂಪರ್ಕಿತರು, ಮಧುಮೇಹ ಕಾಯಿಲೆ ಉಳ್ಳವರು, ಧೂಮಪಾನಿಗಳು, ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆಯಿದ್ದವರು ತಮ್ಮ ಆಧಾರ್ ಕಾಡ್೯ ನೊಂದಿಗೆ ಬಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಿ ಮಂಗಳವಾರದಂದು ಕಡ್ಡಾಯವಾಗಿ ಬಿಸಿಜಿ ಲಸಿಕೆ ಪಡೆಯಬೇಕು. ನಂತರದ ದಿನಗಳಲ್ಲಿ ೧೮ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಸ್ವ ಇಚ್ಛೆಯಿಂದ ಬಂದು ಬಿಸಿಜಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ಕರೆ ನೀಡಿದರು.

ಹಿರಿಯ ಆರೋಗ್ಯ ಸುರಕ್ಷತಾಧಿಕಾರಿ ಕಲಾವತಿ ನಾಯ್ಕ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಬಸವರಾಜ ಅಕ್ಕಿವಳ್ಳಿ, ಮಾರುತಿ ಬಾರ್ಕಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಶಿವಾಜಿ ವಿ, ಸ್ವಾತಿ ನಾಯ್ಕ, ಲತಾ ಸಿ, ಉಪಸ್ಥಿತರಿದ್ದರು. ಕವಿತಾ ಮೊಗೇರ ವ್ಯಾಕ್ಸಿನೇಟರ್ ಆಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.