ಸಾರಾಂಶ
- ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆವರೆಗೆ ಪರೀಕ್ಷೆ: ಪರೀಕ್ಷಾಂಗ ಕುಲ ಸಚಿವ
- ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ವಿದ್ಯಾರ್ಥಿಗಳು, ಕಾಲೇಜು ಪ್ರಾಚಾರ್ಯರಿಗೆ ಸೂಚನೆ- ಆ.5ರಂದು ಉತ್ತರ ಸಮೇತ ಪ್ರಶ್ನೆಪತ್ರಿಕೆ ನೀಡಿದ್ದರಿಂದ ಉಂಟಾಗಿದ್ದ ಎಡವಟ್ಟು- - - ಕನ್ನಡಪ್ರಭ ವಾರ್ತೆ, ದಾವಣಗೆರೆ, ಆ.12
ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ವಾಣಿಜ್ಯ ಪದವಿಯ 6ನೇ ಸೆಮಿಸ್ಟರ್‌ನ ಇ-ಕಾಮರ್ಸ್ ವಿಷಯದ ಪರೀಕ್ಷೆಯನ್ನು ಆ.24ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ದಾವಣಗೆರೆ ವಿವಿ ತಿಳಿಸಿದೆ.ದಾವಣಗೆರೆ ವಿ.ವಿ.ಯಿಂದ ನಡೆಯಬೇಕಿದ್ದ ಅಂತಿಮ ವರ್ಷದ ವಾಣಿಜ್ಯ ಪದವಿಯ ಇ-ಕಾಮರ್ಸ್ ಪರೀಕ್ಷೆಯು ಆ.5ಕ್ಕೆ ನಡೆಯಬೇಕಿತ್ತು. ಆದರೆ, ಅಂದು ವಿವಿಯ ಪರೀಕ್ಷಾ ಮಂಡಳಿಯ ಅಧಿಕಾರಿ, ಸಿಬ್ಬಂದಿ ಎಡವಟ್ಟಿನಿಂದಾಗಿ ಪ್ರಶ್ನೆಪತ್ರಿಕೆ ನೀಡುವ ಬದಲಿಗೆ ಮೌಲ್ಯಮಾಪಕರಿಗೆ ಸಿದ್ಧಪಡಿಸಿದ್ದ ಪ್ರಶ್ನೆ-ಉತ್ತರ ಒಳಗೊಂಡ ಪ್ರಶ್ನೋತ್ತರ ಪತ್ರಿಕೆ ನೀಡಿದ್ದರಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು.
ಪ್ರಶ್ನೆಪತ್ರಿಕೆ ಬದಲಿಗೆ ಉತ್ತರ ಸಮೇತ ಪ್ರಶ್ನೆ ಬಂದ ವಿಚಾರ ಗಮನಿಸಿದ ವಿದ್ಯಾರ್ಥಿಗಳು ತಕ್ಷಣವೇ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಗಮನಕ್ಕೆ ತಂದು, ದಾವಣಗೆರೆ ವಿ.ವಿ.ಗೆ ವಿಷಯ ಮುಟ್ಟಿಸಿದ್ದರಿಂದ ಅಂದು ಪರೀಕ್ಷೆಯನ್ನು ಸ್ಥಗಿತಗೊಳಿಸಿ, ಮುಂದೂಡಲಾಗಿತ್ತು. ಇದೀಗ ಆ.24ರಂದು ಇ-ಕಾಮರ್ಸ್ ಪರೀಕ್ಷೆ ದಿನಾಂಕವನ್ನು ದಾವಣಗೆರೆ ವಿವಿ ನಿಗದಿಪಡಿಸಿದೆ.ಬಿ.ಕಾಂ. (ಎನ್ಇಪಿ) ಪದವಿಯ ಇ-ಕಾಮರ್ಸ್ ವಿಷಯದ ಪರೀಕ್ಷೆಯನ್ನು ಆ.24ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12 ಗಂಟೆವರೆಗೆ ನಡೆಸಲಾಗುವುದು. ಈಗಾಗಲೇ ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ. ನಿಗದಿತ ದಿನಾಂಕದಂದು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಹಾಗೂ ಕಾಲೇಜು ಪ್ರಾಚಾರ್ಯರಿಗೆ ಸೂಚಿಸಲಾಗಿದೆ ಎಂದು ದಾವಣಗೆರೆ ವಿವಿ ಪರೀಕ್ಷಾಂಗ ಕುಲ ಸಚಿವ ಪ್ರೊ. ಸಿ.ಕೆ. ರಮೇಶ ತಿಳಿಸಿದ್ದಾರೆ.
ದಾವಣಗೆರೆ, ಚಿತ್ರದುರ್ಗ ಅವಳಿ ಜಿಲ್ಲೆಗಳ ಸುಮಾರು 15 ಪದವಿ ಕಾಲೇಜುಗಳಲ್ಲಿ ಇ-ಕಾಮರ್ಸ್ ಪರೀಕ್ಷೆ ತೆಗೆದುಕೊಂಡಿದ್ದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಂದು ತೊಂದರೆಯಾಗಿತ್ತು. ಇದೀಗ ಆ ಎಲ್ಲಾ ವಿದ್ಯಾರ್ಥಿಗಳು ಆ.24ರಂದು ಮತ್ತೆ ಇ-ಕಾಮರ್ಸ್ ಪರೀಕ್ಷೆಗೆ ಸಜ್ಜಾಗಬೇಕಾಗಿದೆ.