ಬಿಡಿಸಿಸಿ ಬ್ಯಾಂಕಿಗೆ ₹7.61 ಕೋಟಿ ಲಾಭ: ಅಜಯಕುಮಾರ್ ಸರನಾಯಕ್

| Published : Jul 26 2025, 02:00 AM IST

ಬಿಡಿಸಿಸಿ ಬ್ಯಾಂಕಿಗೆ ₹7.61 ಕೋಟಿ ಲಾಭ: ಅಜಯಕುಮಾರ್ ಸರನಾಯಕ್
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2024-25ನೇ ಸಾಲಿಗೆ ₹7.61 ಕೋಟಿಯಷ್ಟು ನಿವ್ಹಳ ಲಾಭ ಗಳಿಸಿದೆ ಎಂದು ಮಾಜಿ ಸಚಿವ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2024-25ನೇ ಸಾಲಿಗೆ ₹7.61 ಕೋಟಿಯಷ್ಟು ನಿವ್ಹಳ ಲಾಭ ಗಳಿಸಿದೆ ಎಂದು ಮಾಜಿ ಸಚಿವ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ್‌ ತಿಳಿಸಿದರು.

ಬ್ಯಾಂಕಿನ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕ್ ಆರಂಭದಿಂದಲೂ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಲೆಕ್ಕ ಪರಿಶೋಧನಾ ವರದಿಯನ್ನು ಎ ಶ್ರೇಣಿ ಲಭಿಸಿದೆ ಎಂದರು.

ಕೇಂದ್ರ ಸರ್ಕಾರದ ಫ್ಯಾಕ್ಸ್ ಗಣಕೀಕರಣ ಯೋಜನೆಯಡಿ ಒಟ್ಟು 265 ಸಂಘಗಳನ್ನು ಗಣಕೀಕರಣ ಗೊಳಿಸಲು ಮಂಜೂರಾತಿ ನೀಡಿದ್ದು, ಈ ಪೈಕಿ 222 ಸಂಘಗಳು ಸಂಪೂರ್ಣ ಗಣಕೀಕರಣ ಹೊಂದಿವೆ. ಉಳಿದ ಸಂಘಗಳ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದೆ. ಬಾಗಲಕೋಟ ಡಿಸಿಸಿ ಬ್ಯಾಂಕಿನ ಸಾಧನೆ ರಾಜ್ಯದಲ್ಲಿಯೇ ನಮ್ಮ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಪ್ರಶಂಸನೆಗೆ ಅರ್ಹ ವಾಗಿರುವುದು ಹೆಮ್ಮೆಯ ವಿಷಯ ಎಂದು ಅಜಯಕುಮಾರ್ ಸರನಾಯಕ್ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ 2,54,191 ರೈತರಿಗೆ ಶೂನ್ಯ ಬಡ್ಡಿದರದಲ್ಲಿ ₹1,375 ಕೋಟಿ ಬೆಳೆ ಸಾಲ ಮತ್ತು 1,093 ರೈತರಿಗೆ ಶೇ.3ರಷ್ಟು ಬಡ್ಡಿದರದಲ್ಲಿ ಸುಮಾರು ₹66 ಕೋಟಿ ಕೃಷಿ ಚಟುವಟಿಕೆಗಳಿಗೆ ಮಾಧ್ಯಮಿಕ ಕೃಷಿ ಸಾಲ ನೀಡಲಾಗಿದೆ. ಮುಂಬರುವ ಆರ್ಥಿಕ ವರ್ಷದಲ್ಲಿ ಶೂನ್ಯ ಬಡ್ಡಿದರದಲ್ಲಿ ₹1,500 ಕೋಟಿ ಬೆಳೆಸಾಲ ಅಲ್ಲದೆ ಪ್ರತಿಶತ ಶೇ.3 ಬಡ್ಡಿದರದಲ್ಲಿ ₹100 ಕೋಟಿ ಕೃಷಿ ಮಾಧ್ಯಮಿಕ ಸಾಲ ನೀಡಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಬ್ಯಾಂಕ್ ಗ್ರಾಹಕರಿಗೆ ಆರ್ಥಿಕ ಅನುಕೂಲ ಹೆಚ್ಚಿಸುವ ದೃಷ್ಟಿಯಿಂದ 1-11-2024 ರಿಂದ ಜಾರಿಗೆ ಬರುವಂತೆ ಬಂಗಾರ ಆಭರಣಗಳ ಮೇಲೆ ನೀಡಲಾಗುವ ಸಾಲದ ಮೇಲಿನ ಬಡ್ಡಿದರವನ್ನು ಶೇ. 12ರಿಂದ 10ಕ್ಕೆ ಇಳಿಸಲಾಗಿದೆ. ಇದರಿಂದ ಸುಮಾರು ₹100 ಕೋಟಿಯಷ್ಟು ಬಂಗಾರ ಆಭರಣ ಸಾಲದ ಮೊತ್ತ ಹೆಚ್ಚಾಗಿದ್ದು, ಇದರ ಪ್ರಯೋಜನ ಗ್ರಾಹಕರು ಪಡೆದು ಕೊಂಡಿದ್ದಾರೆ ಎಂದು ತಿಳಿಸಿದರು.

ಪಶು ಸಂಗೋಪನೆಗಾಗಿ ಶೂನ್ಯ ಬಡ್ಡಿದರದಲ್ಲಿ ದುಡಿಯುವ ಬಂಡವಾಳ ಸಾಲವೆಂದು ₹35 ಕೋಟಿಯಷ್ಟು ಅಲ್ಪಾವಧಿ ಕೃಷಿ ಸಾಲ ನೀಡಲಾಗಿದೆ ಎಂದ ಅವರು, ಒಟ್ಟು ಸಾಲ ಬಾಕಿ ₹3,630 ಕೋಟಿ ಪೈಕಿ ₹1,339 ಕೋಟಿ ಬೆಳಸಾಲ, ₹205 ಕೋಟಿ ಮಾಧ್ಯಮಿಕ ಕೃಷಿ ಸಾಲ ಹಾಗೂ ₹2,085 ಕೋಟಿ ಕೃಷಿಯೇತರ ಸಾಲ ಹೊರಬಾಕಿ ಹೊಂದಿದೆ ಎಂದು ವಿವರಿಸಿದರು.

ಬ್ಯಾಂಕು ವಿಭಜಗೊಂಡ ಸಂದರ್ಭ ದಲ್ಲಿ ಒಟ್ಟು 29 ಶಾಖೆ ಹೊಂದಿತ್ತು, ಪ್ರಸಕ್ತ ಸಾಲಿಗೆ 57 ಶಾಖೆ ಜಿಲ್ಲೆಯಲ್ಲಿ ಹೊಂದಿದೆ. ದುಡಿಯುವ ಬಂಡವಾಳ ₹341 ಕೋಟಿ ಇದ್ದದ್ದು, ₹5,705 ಕೋಟಿಗೆ ಹೆಚ್ಚಳವಾಗಿದೆ. ಸಾಲಗಳ ವಿತರಣೆಯಲ್ಲಿ ಕೃಷಿ ಕ್ಷೇತ್ರದಲ್ಲಿ ₹123 ಕೋಟಿ ಇದ್ದದ್ದು, ₹1,440 ಕೋಟಿಗೆ ಹೆಚ್ಚಾಗಿದೆ. ಕೃಷಿಯೇತರ ಸಾಲ ₹129 ಕೋಟಿ ಇದ್ದದ್ದು, ಈಗ ₹1,412 ಕೋಟಿಗೆ ಹೆಚ್ಚಾಗಿದೆ ಎಂದು ವಿವರಿಸಿದರು.

ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ಮಾಡಲು ರಿಸರ್ವ್‌ ಬ್ಯಾಂಕಿನಿಂದ ಅನುಮತಿ ದೊರೆತಿದ್ದು, ಈ ವ್ಯವಸ್ಥೆಯಡಿ ಆರ್‌ಟಿಜಿಎಸ್ ಹಾಗೂ ಎನ್ಇಎಫ್‌ಟಿ ವ್ಯವಹಾರ ಲಭ್ಯವಿದೆ. ಇಷ್ಟರಲ್ಲಿಯೇ ಗ್ರಾಹಕರಿಗೆ ಯುಪಿಐ ಸಹಿತ ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಮುರುಗೇಶ್ ಕಡ್ಲಿಮಟ್ಟಿ, ನಿರ್ದೇಶಕ ಪ್ರಕಾಶ ತಪಶೆಟ್ಟಿ, ವಿಧಾನ ಪರಿಷತ್ ಸದಸ್ಯ ಹನುಮಂತ್ ನಿರಾಣಿ ಹಾಗೂ ಬ್ಯಾಂಕಿನ ಕಾರ್ಯ ನಿರ್ವಾಹಕ ಎಸ್.ಎನ್. ನೀಲಪ್ಪನವರ ಉಪಸ್ಥಿತರಿದ್ದರು.