ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ ಬಾಲ ತಾಯಂದಿರಿಗೆ ಸಂಬಂಧಿಸಿದ ಪ್ರಕರಣಗಳ ಕುರಿತ ವಿವರವಾದ ಮಾಹಿತಿಯನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅಧಿಕಾರಿಗಳಿಗೆ ಗಡುವು ನೀಡಿದರು.ಜಿಪಂ ನೂತನ ಸಭಾಭವನದಲ್ಲಿ ಶುಕ್ರವಾರ ಆರ್.ಟಿ.ಇ, ಪೋಕ್ಸೋ-2012, ಬಾಲನ್ಯಾಯ ಕಾಯ್ದೆ-2015ರ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಸ್ಥಾಪಿಸಿರುವ ವಿಶೇಷ ಘಟಕಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು. ಜೊತೆಗೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯೊಳಗಿನ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ತಿಳಿಸಿದರು.
ಕೆಲವೊಂದು ಪೊಲೀಸ್ ಸಿಬ್ಬಂದಿಗೆ ಪೋಕ್ಸೋ ಕಾಯ್ದೆ ಸೇರಿದಂತೆ ಮಕ್ಕಳ ರಕ್ಷಣಾ ಕಾಯ್ದೆಯ ಕುರಿತು ತಿಳಿವಳಿಕೆ ಕೊರತೆಯಿರುವ ಹಿನ್ನೆಲೆಯಲ್ಲಿ ಎಲ್ಲ ಪೊಲೀಸ್ ಸಿಬ್ಬಂದಿಗೆ ಪೂರ್ಣ ಮಾಹಿತಿ ಮತ್ತು ತರಬೇತಿ ನೀಡುವಂತೆ ಆದೇಶ ನೀಡಲಾಗಿದೆ. ಕಾಣೆಯಾದ ಮಕ್ಕಳ ಪತ್ತೆ ಹಾಗೂ ಬಾಕಿ ಉಳಿದ ಪ್ರಕರಣಗಳ ಸಮರ್ಪಕ ತನಿಖೆ ನಡೆಸಿ ಪತ್ತೆ ಹಚ್ಚುವಂತೆ ಸೂಚಿಸಲಾಗಿದೆ. ಶಾಲಾ ರಜೆ ದಿನಗಳಲ್ಲಿ ಶಾಲಾ ಆವರಣದಲ್ಲಿ ಅನಧಿಕೃತ ಪ್ರವೇಶ ನಿಷೇಧಿಸಿ, ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.ತಾಲೂಕು ಪಂಚಾಯತಿ ಮಟ್ಟದಲ್ಲಿ ಬಾಲ್ಯ ವಿವಾಹ ನಿಷೇಧ ಸಮಿತಿ ರಚಿಸುವುದು ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಬಾಲ್ಯ ವಿವಾಹ ಕುರಿತು ಮಾಹಿತಿ ಹಂಚಿಕೊಳ್ಳಬೇಕು. ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತಿ ಸಿಬ್ಬಂದಿ ಮೂಲಕ ಬಾಲ್ಯ ವಿವಾಹ ಮಾಹಿತಿ ಸಂಗ್ರಹಿಸಿ ತಡೆಗಟ್ಟುವಂತೆ ಕ್ರಮವಹಿಸಲು ಸೂಚಿಸಲಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಕ್ಕಳ ಗ್ರಾಮಸಭೆ ನಡೆಸಿ, ಮಕ್ಕಳ ಕಾವಲು ಸಮಿತಿ ರಚಿಸಬೇಕು. ಇದರಲ್ಲಿ ಗ್ರಾಮದ ಪೊಲೀಸ್ ಬೀಟ್ ಅಧಿಕಾರಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಬಾದಾಮಿ ತಾಲೂಕಿನ ಕೆಲವು ಶಾಲೆಗಳಲ್ಲಿ ಪಠ್ಯಪುಸ್ತಕ ಕೊರತೆಯಿದ್ದು, ತಕ್ಷಣ ಪೂರೈಕೆ ಮಾಡಬೇಕೆಂದು ಸೂಚಿಸಲಾಗಿದೆ. ದೀರ್ಘಕಾಲದ ಗೈರು ಹಾಜರಾತಿ ಇರುವ ವಿದ್ಯಾರ್ಥಿಗಳ ಹಾಜರಾತಿ ವಿವರಗಳನ್ನು ಹಾಜರಾತಿ ಪ್ರಾಧಿಕಾರಕ್ಕೆ ಕಳುಹಿಸಬೇಕು. ಎಲ್ಲಾ ವಿದ್ಯಾರ್ಥಿಗಳ ಆಧಾರ್ ಸೀಡಿಂಗ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಪಿಯುಸಿ ಕಾಲೇಜುಗಳಲ್ಲಿ ಮಕ್ಕಳ ರಕ್ಷಣಾ ಕಾಯ್ದೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಶಾಲಾ ಆವರಣದ ವಿದ್ಯುತ್ ವೈರ್ ಮತ್ತು ಟ್ರಾನ್ಸಫಾರ್ಮರ್‌ಗಳನ್ನು ತೆರವುಗೊಳಿಸಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಪರಿಸರ ಸುಧಾರಣೆ ಕಾರ್ಯ ಕೈಗೊಳ್ಳಬೇಕು. ಶಾಲಾ ಆವರಣವನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಜಾಲಿಹಾಳ ಬಿಸಿಎಂ ಹಾಸ್ಟೆಲ್ ನಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದು, ತಕ್ಷಣ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸೂಚನೆ ಇದೆ. ಚಿಕ್ಕಮುಚ್ಚಳ ಗುಡ್ಡ ವಸತಿ ನಿಲಯದ ಸಿಬ್ಬಂದಿ ಸಮಯ ಪಾಲನೆ ಮಾಡದಿರುವುದು, ಶೌಚಾಲಯದ ಸ್ವಚ್ಛತೆ ಕೊರತೆಯಿರುವುದು ಹಾಗೂ ಆಹಾರದ ಗುಣಮಟ್ಟ ದುರ್ಬಲವಾಗಿದೆ. ಒಂದು ಕೋಣೆಯಲ್ಲಿ 10-12 ವಿದ್ಯಾರ್ಥಿಗಳನ್ನು ಇರಿಸಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಲು ತಿಳಿಸಿದರು.
ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿಪಂ ಸಿಇಒ ಶಶಿಧರ ಕುರೇರ ಅವರು ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಬೇಜವಾಬ್ದಾರಿ ಸಲ್ಲದು. ಮಕ್ಕಳ ರಕ್ಷಣೆ ಇರುವ ಕಾಯ್ದೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಶ್ರಮಿಸಬೇಕಿದೆ. ಇಂದಿನ ಸೈಬರ್ ಕ್ರೈಂ ಮತ್ತು ಮಾದಕ ವ್ಯಸನದಿಂದ ಹಾಳಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಗಮನ ಹರಿಸಲು ಸೂಚಿಸಿದರು.ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ, ಶಶಿಧರ ಕೋಸುಂಬೆ, ತಿಪ್ಪೆಸ್ವಾಮಿ, ಮಂಜುಳಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೆ.ಪ್ರಭಾಕರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಡಾ.ವೀಣಾ ಎಂ ಸೇರಿ ಇತರರು ಉಪಸ್ಥಿತರಿದ್ದರು.ಶಕ್ತಿ ಯೋಜನೆ ಆರಂಭವಾದ ಬಳಿಕ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕೊರತೆಯಾಗಿ, ಬಸ್ ಬಾಗಿಲುಗಳಲ್ಲಿ ನಿಂತು ಪ್ರಯಾಣಿಸುವ ದೃಶ್ಯಗಳು ಹೆಚ್ಚಾಗಿವೆ. ಇದನ್ನು ಗಮನಿಸಿ ಬಸ್ ನಿರ್ವಾಹಕರಿಗೆ ಮಕ್ಕಳ ರಕ್ಷಣಾ ಕಾಯ್ದೆ ಕುರಿತು ತರಬೇತಿ ನೀಡಿ, ಬಸ್ಸಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಸೂಕ್ತ ಮಾಹಿತಿ ನೀಡುವ ಕ್ರಮ ಕೈಗೊಳ್ಳಬೇಕು.. ಬಸ್ ನಿಲ್ದಾಣಗಳಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು.
- ಕೆ.ನಾಗಣ್ಣಗೌಡ ಅಧ್ಯಕ್ಷರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ