ಬಿಡಿಸಿಸಿ ಬ್ಯಾಂಕ್‌ಗೆ ₹12.72 ಕೋಟಿ ನಿವ್ವಳ ಲಾಭ: ಅಧ್ಯಕ್ಷ ತಿಪ್ಪೇಸ್ವಾಮಿ

| Published : Jul 21 2025, 01:30 AM IST

ಬಿಡಿಸಿಸಿ ಬ್ಯಾಂಕ್‌ಗೆ ₹12.72 ಕೋಟಿ ನಿವ್ವಳ ಲಾಭ: ಅಧ್ಯಕ್ಷ ತಿಪ್ಪೇಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್‌ 2024-25ನೇ ಸಾಲಿನಲ್ಲಿ ₹12.72 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ 48 ವರ್ಷಗಳಿಂದ ಬ್ಯಾಂಕ್‌ ನಿರಂತರ ಲಾಭ ಗಳಿಸುತ್ತಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್‌ 2024-25ನೇ ಸಾಲಿನಲ್ಲಿ ₹12.72 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ 48 ವರ್ಷಗಳಿಂದ ಬ್ಯಾಂಕ್‌ ನಿರಂತರ ಲಾಭ ಗಳಿಸುತ್ತಿದೆ. ಬ್ಯಾಂಕ್‌ನಲ್ಲಿ ಡಿಜಿಟಲ್‌ ಬ್ಯಾಂಕಿಂಗ್‌ ಸೇವೆ ಒದಗಿಸಲಾಗಿದೆ. ಬ್ಯಾಂಕ್‌ ಯುಪಿಐ ಸೇವೆ ಕೂಡ ಹೊಂದಿದೆ ಎಂದು ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಹೇಳಿದರು.

ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬ್ಯಾಂಕಿನ ಮಹಾಜನ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬ್ಯಾಂಕು 665 ಸಹಕಾರ ಸಂಘಗಳ ಸದಸ್ಯತ್ವ ಹೊಂದಿದೆ. ₹130.30 ಕೋಟಿ ಷೇರು ಬಂಡವಾಳ ಹಾಗೂ ₹165.65 ಕೋಟಿ ಕಾಯ್ದಿಟ್ಟ ನಿಧಿ ಸೇರಿದಂತೆ ₹295.93 ಕೋಟಿ ಸ್ವಂತ ಬಂಡವಾಳ ಹೊಂದಿದೆ. ಬ್ಯಾಂಕ್‌ ಸುಸ್ಥಿರ ಬಂಡವಾಳ ಪ್ರಮಾಣ ಹೊಂದಿದೆ. ₹1687.80 ಕೋಟಿ ಠೇವಣಿ ಹೊಂದಿದೆ. ₹2724.74 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ₹3590.33 ಕೋಟಿ ವ್ಯವಹಾರ ಗಾತ್ರ ಹೊಂದಿದೆ. ರೈತರಿಗೆ 1,16,896 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಸಾಲ ₹1068.05 ಕೋಟಿ ನೀಡಿದೆ. ಶೇ.3ರ ಬಡ್ಡಿದರದಲ್ಲಿ ಭೂ ಅಭಿವೃದ್ಧಿ ಸಾಲ ₹59.20 ಕೋಟಿ ನೀಡಲಾಗಿದೆ. ಬ್ಯಾಂಕಿನ ಎಪಿಎ ಶೇ.3.75ರಷ್ಟಿದ್ದು, ಆರ್‌ಬಿಐ ನಿಯಮಗಳ ಪ್ರಕಾರ ಬ್ಯಾಂಕ್‌ ಆರೋಗ್ಯಕರವಾಗಿದೆ ಎಂದರು.

ಬ್ಯಾಂಕ್‌ನಲ್ಲಿ ಸಾಲ ನೀಡಿಕೆ ಸರಳೀಕರಣಕ್ಕೆ ಒತ್ತು ನೀಡಲಾಗಿದೆ. ಹೈನುಗಾರಿಕೆಗೆ ಉತ್ತೇಜನ ನೀಡಲು ರೈತರಿಗೆ ₹100 ಕೋಟಿ ಸಾಲ ಒದಗಿಸಲು ನಿರ್ಧರಿಸಲಾಗಿದೆ. ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಿ, ಹೈನೋದ್ಯಮ ಬೆಳೆಸಲಾಗುವುದು. ರೈತರಿಗೆ ಅನುಕೂಲ ಮಾಡಲು ಈ ಯೋಜನೆ ರೂಪಿಸಲಾಗಿದೆ ಎಂದರು.

ಬ್ಯಾಂಕಿನ ವ್ಯವಹಾರ ಉತ್ತೇಜಿಸಲು ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ14 ಹೊಸ ಶಾಖೆಗಳನ್ನು ತೆರೆಯಲಾಗುವುದು. ಇದಕ್ಕಾಗಿ ಆರ್‌ಬಿಐನಿಂದ ಪರವಾನಗಿ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಬ್ಯಾಂಕಿನ ಶಾಖೆಗಳು ಇಲ್ಲದ ಕಡೆಯೂ ಗ್ರಾಹಕರ ವ್ಯವಹಾರದ ಅನುಕೂಲಕ್ಕಾಗಿ ಹೊಸದಾಗಿ ಎಟಿಎಂಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದರು.

ಬ್ಯಾಂಕ್‌ನಲ್ಲಿ ₹2.34 ಕೋಟಿ ಸೈಬರ್‌ ವಂಚನೆ ಮಾಡಲಾಗಿದೆ. ಈ ಸಂಬಂಧ ಬಳ್ಳಾರಿ ಸೈಬರ್‌ ಠಾಣೆಗೆ ದೂರು ಸಲ್ಲಿಸಲಾಗಿದೆ. ಅಲ್ಲದೇ, ಬೆಂಗಳೂರಿಗೂ ನಿಯೋಗ ತೆರಳಿ ಉನ್ನತ ಪೊಲೀಸ್‌ ಅಧಿಕಾರಿಗಳ ಬಳಿಯೂ ಚರ್ಚಿಸಲಾಗಿದೆ. ಸೈಬರ್‌ ವಂಚಕರನ್ನು ಸೆರೆ ಹಿಡಿಯಲು ಪೊಲೀಸರು ಕೂಡ ತನಿಖೆ ಕೈಗೊಂಡಿದ್ದಾರೆ. ಈ ಬ್ಯಾಂಕು ರೈತರ ಬ್ಯಾಂಕ್‌ ಆಗಿದೆ. ಜೊತೆಗೆ ಸರ್ಕಾರಿ ನೌಕರರಿಗೂ ಸಾಲ ಸೌಲಭ್ಯದ ಜೊತೆಗೆ ವೇತನ ಖಾತೆಗಳನ್ನು ಕೂಡ ಬ್ಯಾಂಕ್‌ನಲ್ಲಿ ತೆರೆಯಲಾಗಿದೆ ಎಂದು ತಿಳಿಸಿದರು.

ಬ್ಯಾಂಕ್‌ನ ಉಪಾಧ್ಯಕ್ಷ ಐ. ದಾರುಕೇಶ್‌, ಹರಪನಹಳ್ಳಿ ಶಾಸಕಿ ಹಾಗು ಬ್ಯಾಂಕ್‌ನ ನಿರ್ದೇಶಕಿ ಎಂ.ಪಿ. ಲತಾ, ನಿರ್ದೇಶಕರಾದ ಎಲ್‌.ಎಸ್‌. ಆನಂದ, ಚಿದಾನಂದ ಐಗೋಳ, ವೈ. ಅಣ್ಣಪ್ಪ, ನವೀನ್‌ಕುಮಾರ ರೆಡ್ಡಿ, ಹುಲುಗಪ್ಪ, ಪಿ. ಮೂಕಯ್ಯಸ್ವಾಮಿ, ಜೆ.ಎಂ. ಶಿವಪ್ರಸಾದ್‌, ವಿ.ಆರ್. ಸಂದೀಪ್‌ ಸಿಂಗ್, ಪಿ. ವಿಶ್ವನಾಥ, ಬ್ಯಾಂಕ್‌ನ ಸಿಇಒ ಬಿ. ಜಯಪ್ರಕಾಶ ಮತ್ತಿತರರಿದ್ದರು.