ಸಾರಾಂಶ
ಇಂದು ಸ್ವದೇಶಿ ವಸ್ತುಗಳ ಬಳಕೆ ಮಾಡಲು ಮುಂದಾಗಿದ್ದೇವೆ. ಆದರೆ, ಕೇವಲ ಸ್ವದೇಶಿ ವಸ್ತುಗಳ ಬಳಕೆ ಮಾಡಿದರೆ ಸಾಲದು, ಅದರ ಜತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದು ಅಭಿಜಿತ ಗೋಖಲೆ ಹೇಳಿದರು.
ಹುಬ್ಬಳ್ಳಿ:
ಹಿಂದೂ ಧರ್ಮ, ಸಂಸ್ಕೃತಿ, ಸಂಪ್ರದಾಯದ ಕುರಿತು ನಾವೆಲ್ಲರೂ ಎಚ್ಚೆತ್ತುಕೊಳ್ಳುವ ಮೂಲಕ ನಮ್ಮ ಮುಂದಿನ ಪೀಳಿಗೆಗೂ ಸಹ ಅದನ್ನು ಅಡಿಪಾಯವಾಗಿ ಹಾಕಿ ಕೊಡಬೇಕು ಎಂದು ಸಂಸ್ಕಾರ ಭಾರತಿ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಅಭಿಜಿತ ಗೋಖಲೆ ಹೇಳಿದರು.ಅವರು ಇಲ್ಲಿನ ಇಂದಿರಾ ಗಾಜಿನ ಮನೆ ಉದ್ಯಾನವನದಲ್ಲಿ ಸೋಮವಾರ ಆರ್‌ಎಸ್‌ಎಸ್ ವತಿಯಿಂದ ನಡೆದ ರಕ್ಷಾ ಬಂಧನ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಮಾತನಾಡಿದರು.
ರಕ್ಷಾ ಬಂಧನ ಎಂದರೆ ಕೇವಲ ನಮ್ಮವರನ್ನು ರಕ್ಷಣೆ ಮಾಡುವುದಷ್ಟೇ ಅಲ್ಲ, ಅದರ ಜತೆಗೆ ಸರ್ವಾಂಗಿಣ ಅಭಿವೃದ್ಧಿಯೇ ನಮ್ಮ ಧ್ಯೇಯೋದ್ದೇಶವಾಗಬೇಕು ಎಂದರು.ಈ ಹಿಂದೆ ರಾಮಮಂದಿರ ನಿರ್ಮಾಣಕ್ಕಾಗಿ ಹಲವಾರು ಹೋರಾಟಗಳು ನಡೆದಿವೆ, ಜತೆಗೆ ರಾಮಮಂದಿರ ನಿರ್ಮಾಣಕ್ಕಾಗಿ ಹಲವಾರು ಜನ ಸಂಕಲ್ಪ ತೊಟ್ಟಿರುವುದು ನಾವು ನೋಡಿದ್ದೇವೆ, ಅಪ್ಪಟ್ಟ ರಾಮನ ಭಕ್ತನೊಬ್ಬ ರಾಮಮಂದಿರ ನಿರ್ಮಾಣದವರೆಗೂ ಚಪ್ಪಲಿ ಧರಿಸಲಿಲ್ಲ. ಹೀಗೆ ಹಲವಾರು ಜನರು ಹಲವು ಸಂಕಲ್ಪ ಮಾಡಿರುವುದು ನಾವೆಲ್ಲರೂ ನೋಡಿದ್ದೇವೆ. ಅದೇ ರೀತಿ ಎಲ್ಲರೂ ದೇಶ ಸೇವೆಗಾಗಿ, ದೇಶ ರಕ್ಷಣೆಗಾಗಿ ದೃಢ ಸಂಕಲ್ಪ ತೊಡಬೇಕು ಎಂದರು.
ನಾವುಗಳು ಇಂದು ಸ್ವದೇಶಿ ವಸ್ತುಗಳ ಬಳಕೆ ಮಾಡಲು ಮುಂದಾಗಿದ್ದೇವೆ. ಆದರೆ, ಕೇವಲ ಸ್ವದೇಶಿ ವಸ್ತುಗಳ ಬಳಕೆ ಮಾಡಿದರೆ ಸಾಲದು, ಅದರ ಜತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದರು.ಆರಂಭದಲ್ಲಿ ಧ್ವಜವಂದನೆ ಸಲ್ಲಿಸಲಾಯಿತು. ಸಭೆಯ ನಂತರ ಪರಸ್ಪರ ರಾಖಿ ಕಟ್ಟಿಕೊಳ್ಳುವ ಮೂಲಕ ರಕ್ಷಾ ಬಂಧನದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.ಶಾಸಕ ಮಹೇಶ ಟೆಂಗಿನಕಾಯಿ, ಆಟೋ ಚಾಲಕ ಪ್ರಕಾಶ ಮಾಗುಂಡಪ್ಪ ಉಳ್ಳಾಗಡ್ಡಿ, ಮಹಾನಗರ ಸಹ ಸಂಘಚಾಲಕ ಮಹಾದೇವ ದಿವಟೆ, ಸುಭಾಸಸಿಂಗ್ ಜಮಾದಾರ ಸೇರಿದಂತೆ ಹಲವರಿದ್ದರು.