ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಆಧುನಿಕತೆ ಬೆಳೆದಂತೆ ಅಪರಾಧಗಳಿಗೂ ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ, ಈ ಬಗ್ಗೆಯೂ ಹೆಚ್ಚಿನ ಜಾಗೃತಿ ಇರಬೇಕೆಂದು ಡಿವೈಎಸ್ಪಿ ಲೋಕೇಶ್ ಕರೆ ನೀಡಿದರು.ಅವರು ನಗರದ ಗಾಯತ್ರಿ ಅಗ್ರಹಾರದಲ್ಲಿರುವ ಶ್ರೀ ಚಂದ್ರಶೇಖರ ಭಾರತಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಶಾಲೆಯಲ್ಲಿ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಕೇಳಿದ್ದೇನೆ, ಮಕ್ಕಳ ಜ್ಞಾನ ವಿಕಾಸಕ್ಕೆ ಪೂರಕವಾದ ಪಠ್ಯ ಹಾಗೂ ಪಠ್ಯದ ಚಟುವಟಿಕೆಗಳನ್ನು ಮಾಡಿಸುತ್ತಿರುವುದನ್ನು ಮತ್ತು ಪ್ರತಿಭಾ ವಿದ್ಯಾರ್ಥಿಗಳನ್ನು ಅಭಿನಂದಿಸುವುದು, ಆತ್ಮರಕ್ಷಣೆಗಾಗಿ ಕರಾಟೆ ಕಲಿಯಲು ಇಲ್ಲಿ ಸೌಲಭ್ಯವನ್ನು ಒದಗಿಸಿರುವ ಬಗ್ಗೆ ಪ್ರಾಂಶುಪಾಲರು ಮಂಡಿಸಿದ ವರದಿಯಿಂದ ತಿಳಿದು ಸಂತೋಷವಾಗಿದೆ.
ತಮ್ಮ ಮಕ್ಕಳಿಗೆ ಉತ್ತಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಹಂಬಲದಿಂದ ಪೋಷಕರು ಮಕ್ಕಳನ್ನು ಶಾಲೆಗಳಿಗೆ ದಾಖಲಿಸುತ್ತಾರೆ, ಅವರ ನಿರೀಕ್ಷೆಯಂತೆ ಶಾಲೆ ಸ್ಪಂದಿಸುತ್ತಿದೆ ಎಂದ ಅವರು ಆಧುನಿಕತೆ ಬೆಳೆದಂತೆ, ಅಪರಾಧ ಎಸೆಗುವವರು ಆಧುನಿಕತೆಯ ತಂತ್ರಗಾರಿಕೆ ಬಳಸುತ್ತಿದ್ದಾರೆ, ಇತ್ತೀಚಿಗೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ, ಈ ಬಗ್ಗೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದ ಅವರು ಯುವ ಪೀಳಿಗೆ ಡ್ರಗ್ಸ್ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಡ್ರಗ್ಸ್, ಗಾಂಜಾ ಮೊದಲಾದವುಗಳ ತಡೆಗಟ್ಟುವಲ್ಲಿ ನಾವು ಸದಾ ಕಾರ್ಯಪ್ರವೃತ್ತರಾಗಿರುತ್ತ ಆಗಿದ್ದೇವೆ. ಅಂತೆಯೇ ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರವಹಿಸಬೇಕು ಎಂದು ಸಲಹೆ ಇತ್ತರು, ಮೊಬೈಲಲ್ಲಿ ಓಟಿಪಿ ಕೇಳುವ ಮೂಲಕ ನಿಮ್ಮ ಖಾತೆಯಲ್ಲಿನ ಹಣ ದೋಚುವ ಪ್ರಕರಣಗಳನ್ನು ನೀವು ನೋಡುತ್ತಿದ್ದೀರಿ ಎಚ್ಚರದಿಂದಿರಿ ಎಂದು ಅವರು ಸೂಚಿಸಿ, ಮಕ್ಕಳಿಗೆ ಶುಭಕೋರಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕಲ್ಯಾಡಿ ಕೆ. ಎಂ.ಹಿರಿಯಣ್ಣ ಮಕ್ಕಳಿಗೆ ಶಿಕ್ಷಣದೊಂದಿಗೆ ಧಾರ್ಮಿಕತೆ ಹಾಗೂ ನೈತಿಕತೆ ಮತ್ತು ಸುಸಂಸ್ಕೃತರನ್ನಾಗಿ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿಯೂ ಸಹ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ, ಪೋಷಕರು ತಮ್ಮ ಮಕ್ಕಳು ಗಳಿಸುವ ಅಂಕಗಳಿಗೆ ಸೀಮಿತವಾಗದೆ ಅವರ ಸರ್ವತೋಮುಖ ಬೆಳವಣಿಗೆಯನ್ನು ಗಮನಿಸಬೇಕು, ಸಂಸ್ಥೆ ಒದಗಿಸಲಾಗಿರುವ ಸೌಲಭ್ಯಗಳನ್ನು ವಿದ್ಯಾರ್ಥಿ ಮಕ್ಕಳಿಗೆ ತಲುಪಿಸುವಲ್ಲಿ ಶಿಕ್ಷಕ ವರ್ಗ ಸಫಲವಾಗುತ್ತಿದೆ, ಮಕ್ಕಳು ಶಿಕ್ಷಣ ಪಡೆದರೆ ಸಾಲದು ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಬಲ್ಲ ಜ್ಞಾನವು ಬಹಳ ಅಗತ್ಯ. ಅದಕ್ಕಾಗಿ ಇಲ್ಲಿ ವಿಶೇಷ ಕಾಳಜಿಯನ್ನು ವಹಿಸಲಾಗುತ್ತಿದೆ, ಮಕ್ಕಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರದೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಸಫಲರಾಗುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದನ್ನು ನೆನಪಿಸಿದರು.
ಸಿಆರ್‌ಪಿ ವಿಷ್ಣುವರ್ಧನ್ ಮಾತನಾಡಿ, ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸೂಕ್ತ ವಾತಾವರಣವನ್ನು ಕಲ್ಪಿಸಲಾಗಿದೆ, ಶಿಕ್ಷಕ ವರ್ಗದಲ್ಲಿ ಬದ್ಧತೆ ಇದೆ, ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.ವಾರ್ಷಿಕ ವರದಿಯನ್ನು ನೀಡಿದ ಶಾಲೆಯ ಪ್ರಾಂಶುಪಾಲೆ ರೇಖಾ ಕುಮಾರ್ ವಿದ್ಯಾರ್ಥಿಗಳಿಗೆ ಇ-ಲರ್ನಿಂಗ್ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಕ್ರೀಡೆ ಹಾಗೂ ಪಠ್ಯದ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಲಾಗುತ್ತಿದ್ದು, ಈ ಕ್ಷೇತ್ರಗಳಲ್ಲಿಯೂ ಪ್ರತಿಭೆಯನ್ನು ತೋರುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ಸಹ ಮಕ್ಕಳು ಪ್ರತಿಭೆ ತೋರಿದ್ದಾರೆ. ಕರಾಟೆ ಚಾಂಪಿಯನ್ಶಿಪ್ ಗಳಿಸಿದ್ದಾರೆ, ಕಳೆದ ಬಾರಿ ವಿದ್ಯಾಸಂಸ್ಥೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಹಂಸಿತ ಮೌದ್ಗಲ್ಯ ರಾಜ್ಯಮಟ್ಟದಲ್ಲಿ ತೇರ್ಗಡೆಯಾಗಿ ತಾಲೂಕಿಗೆ ಹಿರಿಮೆ ತಂದಿದ್ದಳು ಎಂದರು.
ಕಾರ್ಯಕ್ರಮದಲ್ಲಿ ನಗರ ಯೋಜನೆ ಅಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ಶ್ರೀ ಚಂದ್ರಶೇಖರ ಭಾರತಿ ವಿದ್ಯಾ ಸಂಸ್ಥೆಯ ಖಜಾಂಚಿ ನಾರಾಯಣ್, ಕಾರ್ಯದರ್ಶಿ ಕಾರ್ತಿಕ್ ಬಾಪಟ್, ನಿರ್ದೇಶಕರುಗಳಾದ ಎನ್.ಎಲ್ ಕುಮಾರ್, ಟಿ.ಆರ್. ನಾಗರಾಜ್ ಕರ್ನಾಟಕ ಬ್ಯಾಂಕ್ ಮೋಹನ್, ವಿದ್ಯಾರ್ಥಿಗಳಿಗೆ ಶುಭಕೋರಿದರು. ಪ್ರತಿಭಾ ವಿದ್ಯಾರ್ಥಿಗಳನ್ನು ಗಣ್ಯರು ಅಭಿನಂದಿಸಿದರು.ಕಾರ್ಯಕ್ರಮವನ್ನು ಶಿಕ್ಷಕಿಯರಾದ ಯಮುನಾ ಸುಮಿತ್ರ ನಿರ್ವಹಿಸಿದರು. ವಿದ್ಯಾರ್ಥಿಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಸಭಿಕರ ಮೆಚ್ಚುಗೆ ಗಳಿಸಿತು.