ಭೀಮ ಕೋರೆಗಾಂವ್ ಯುದ್ಧದ ಬಗ್ಗೆ ಇಂದಿನ ಯುವಪೀಳಿಗೆಗೆ ಅರಿವಿಲ್ಲದಿರುವುದು ಬೇಸರದ ಸಂಗತಿ. ಆದ್ದರಿಂದ ಯುವ ಸಮುದಾಯಕ್ಕೆ ಅರಿವು ಮೂಡಿಸಲು ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಸಂಘಟನೆ ಮುಂದಿನ ದಿನಗಳಲ್ಲಿ ಮಾಡಲಿದೆ.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಭಾರತದಲ್ಲಿ ನಡೆದಿರುವ ಸಾವಿರಾರು ಯುದ್ಧಗಳ ಪೈಕಿ ಭೀಮ ಕೋರೆಗಾಂವ್ ಯುದ್ಧದ ವಿಜಯವು ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದಲ್ಲದೆ ಮುಂದಿನ ತಲೆಮಾರಿಗೆ ಸ್ವಾಭಿಮಾನದ ಪ್ರತೀಕವಾಗಿ ಶಾಶ್ವತವಾಗಿ ಉಳಿದಿದೆ ಎಂದು ದಲಿತ ಸಂಘರ್ಷ ಸಮಿತಿ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ತಿಳಿಸಿದರು.

ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಖಾಜಿಹೊಸಹಳ್ಳಿ ಗ್ರಾಮದಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಕರ್ನಾಟಕ ವತಿಯಿಂದ ನಡೆದ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

1818ರ ಜನವರಿ 1ರಂದು ನಡೆದ ಭೀಮ ಕೋರೆಗಾಂವ್ ಯುದ್ಧವು ಕೇವಲ 500 ಮಂದಿ ಮಹರ್ ಸೈನಿಕರು, 25000 ಜಾತಿವಾದಿ ಪೇಶ್ವೆ ಸೈನಿಕರನ್ನು ಸದೆಬಡಿದು ಭಾರತದ ಸ್ವಾಭಿಮಾನದ ಇತಿಹಾಸವನ್ನು ಸಾರಿ ಸಾರಿ ಹೇಳುವಂತಿದೆ. ಈ ವಿಜಯದ ದಾಖಲೆಗಳನ್ನು ನಮ್ಮ ಮನುವಾದಿ ಇತಿಹಾಸಕಾರರು ಗೌಪ್ಯವಾಗಿ ಹುದುಗಿಸಿಟ್ಟಿದ್ದರು. ಅದನ್ನು ಭೇದಿಸಿದ ಡಾ.ಬಿ.ಆರ್ ಅಂಬೇಡ್ಕರ್ ಅವರು ಲಂಡನ್ ಲೈಬ್ರರಿಯಲ್ಲಿ ಭೀಮ ಕೋರೆಗಾಂವ್ ಯುದ್ಧದ ನೈಜ ದಾಖಲೆಗಳನ್ನು ನೋಡಿ ಪುಳಕಗೊಂಡು ಅಭಿಮಾನದಿಂದ ನಮ್ಮ ಪೂರ್ವಿಕರ ಕುರಿತು ಭಾರತದಲ್ಲಿ ಪ್ರಚಾರ ಮಾಡಿದರು. ಅದರ ಪರಿಣಾಮವಾಗಿ ಭೀಮ ಕೋರೆಗಾಂವ್ ವಿಜಯೋತ್ಸವ ವಿಚಾರ ದೇಶದ ಮೂಲೆ ಮೂಲೆ ತಲುಪಿತು ಎಂದರು.

ದಸಸಂಕ ತಾಲೂಕು ಸಂಚಾಲಕ ನಾರಾಯಣಸ್ವಾಮಿ ಮಾತನಾಡಿ, ಭೀಮ ಕೋರೆಗಾಂವ್ ಯುದ್ಧದ ಬಗ್ಗೆ ಇಂದಿನ ಯುವಪೀಳಿಗೆಗೆ ಅರಿವಿಲ್ಲದಿರುವುದು ಬೇಸರದ ಸಂಗತಿ. ಆದ್ದರಿಂದ ಯುವ ಸಮುದಾಯಕ್ಕೆ ಅರಿವು ಮೂಡಿಸಲು ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಸಂಘಟನೆ ಮುಂದಿನ ದಿನಗಳಲ್ಲಿ ಮಾಡಲಿದೆ ಎಂದರು.

ಇದೇ ಸಂದರ್ಭದಲ್ಲಿ ಯಲ್ಲಪ್ಪ, ಮಾರುತಿಪ್ರಸಾದ್ ತಂಡದಿಂದ ಕ್ರಾಂತಿ ಗೀತೆಗಳ ಕಾರ್ಯಕ್ರಮ ನಡೆಸಲಾಯಿತು.

ದಲಿತ ಸಂಘರ್ಷ ಸಮಿತಿ ಕರ್ನಾಟಕ ಜಿಲ್ಲಾ ಸಂಚಾಲಕ ಲೋಕೇಶ್, ಹೋಬಳಿ ಸಂಚಾಲಕ ಅನಿಲ್, ಸಂಘಟನಾ ಸಂಚಾಲಕ ಅಂಬರೀಶ್, ಖಜಾಂಚಿ ಮಹೇಶ್, ಯುವ ಘಟಕ ಅಧ್ಯಕ್ಷ ಶಿವು, ಗ್ರಾಮ ಸಮಿತಿ ಅಧ್ಯಕ್ಷ ಅಪ್ಪಯ್ಯ ಹಾಜರಿದ್ದರು.