ಸಮಾಜದಲ್ಲಾಗುವ ಬದಲಾವಣೆಗಳ ಬಗ್ಗೆಯೂ ಅರಿವಿರಲಿ: ಡಾ.ಬಾಲಕೃಷ್ಣ ಹೆಗಡೆ

| Published : May 13 2024, 12:07 AM IST

ಸಮಾಜದಲ್ಲಾಗುವ ಬದಲಾವಣೆಗಳ ಬಗ್ಗೆಯೂ ಅರಿವಿರಲಿ: ಡಾ.ಬಾಲಕೃಷ್ಣ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕೆಲಸಗಳೊಂದಿಗೆ ಸಮಾಜದಲ್ಲಿ ಆಗು ಹೋಗುವ ವಿಷಯಗಳ ಬಗ್ಗೆಯೂ ಕೊಂಚ ಗಮನ ಹರಿಸಬೇಕಾಗಿದೆ. ಅದಕ್ಕಾಗಿ ದಿನದಲ್ಲಿ ಸ್ವಲ್ಪ ಸಮಯವಾದರೂ ವೃತ್ತ ಪತ್ರಿಕೆ, ನಿಯತಕಾಲಿಕೆಗಳ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಬರವಣಿಗೆ ವ್ಯಾಕರಣದ ಬಗ್ಗೆಯೂ ಆಸಕ್ತಿ ಹೊಂದಿರುವುದು ಅವಶ್ಯವಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ ಯುವ ಜನತೆ ಮಾಧ್ಯಮವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಎನ್ನೆಎಸ್ಸೆಸ್‌ ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ ತಿಳಿಸಿದರು.

ತಾಲೂಕಿನ ಹಾರನಹಳ್ಳಿಯಲ್ಲಿ ಪಿಇಎಸ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಯುವ ಜನತೆ ಮತ್ತು ಮಾಧ್ಯಮ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಪ್ರಚಲಿತವಿರುವ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಪ್ರಕಾರಗಳಲ್ಲಿ ಅನೇಕ ಪರಿವರ್ತನೆಗಳಾಗಿವೆ. ವಿವಿಧ ರೀತಿಯ ಸುಧಾರಣೆಗಳಿಗೆ ಒಗ್ಗಿಕೊಂಡಿವೆ. ಯುವ ಸಮೂಹ ಇವುಗಳ ಕುರಿತು ಅರಿತುಕೊಳ್ಳುವ ಆಸಕ್ತಿ ತಳೆಯಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕೆಲಸಗಳೊಂದಿಗೆ ಸಮಾಜದಲ್ಲಿ ಆಗು ಹೋಗುವ ವಿಷಯಗಳ ಬಗ್ಗೆಯೂ ಕೊಂಚ ಗಮನ ಹರಿಸಬೇಕಾಗಿದೆ. ಅದಕ್ಕಾಗಿ ದಿನದಲ್ಲಿ ಸ್ವಲ್ಪ ಸಮಯವಾದರೂ ವೃತ್ತ ಪತ್ರಿಕೆ, ನಿಯತಕಾಲಿಕೆಗಳ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಬರವಣಿಗೆ ವ್ಯಾಕರಣದ ಬಗ್ಗೆಯೂ ಆಸಕ್ತಿ ಹೊಂದಿರುವುದು ಅವಶ್ಯವಾಗಿದೆ ಎಂದು ಹೇಳಿದರು.

ಬರವಣಿಗೆ ಹವ್ಯಾಸವಿದ್ದರೆ ತಮ್ಮ ಶಿಕ್ಷಣದ ವೆಚ್ಚವನ್ನು ಪಾಲಕರಿಂದ ಭರಿಸಿಕೊಳ್ಳುವ ಬದಲು ತಾವೇ ಅದನ್ನು ಸಂಪಾದಿಸಬಹುದು. ಇದಕ್ಕಾಗಿ ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಮುಕ್ತ ಅವಕಾಶಗಳು ಯುವ ಸಮೂಹವನ್ನು ಕೈಬೀಸಿ ಕರೆಯುತ್ತಿವೆ ಎಂದು ವಿವರಿಸಿದರು.

ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಪ್ರವೀಣಚಂದ್ರ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಜಿ.ರಂಜನ್ ಪ್ರೊ.ಕಾಂತರಾಜ, ಪ್ರೊ.ಶಿವಾನಿ, ಪ್ರೊ.ಅನು, ಪವನ ಮೊದಲಾದವರು ಉಪಸ್ಥಿತರಿದ್ದರು. ಶಿಬಿರಾರ್ಥಿ ಎಚ್.ಬಿ.ಸಿಂಚನಾ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು. ಯಶಸ್ವಿನಿ ಕಾರ್ಯಕ್ರಮ ನಿರ್ವಹಿಸಿದರು.

ಓದಿನ ಕಡೆಗೆ ಗಮನ ಹರಿಸಿ

ಪದವಿ ನಂತರ ಬದುಕು ಕಟ್ಟಿಕೊಳ್ಳಲು ಮುದ್ರಣ, ವಿದ್ಯುನ್ಮಾನ ಅಥವಾ ಸಾಮಾಜಿಕ ಜಾಲತಾಣಗಳ ಸರಿಯಾಗಿ ಬಳಸಿಕೊಂಡು ಆಸಕ್ತಿಯಿಂದ ಕೆಲಸ ಮಾಡಿದರೆ ಖಂಡಿತವಾಗಿಯೂ ಉದ್ದೇಶ ಈಡೇರುತ್ತದೆ. ಸಾಮಾಜಿಕ ಜಾಲತಾಣಗಳ ಅತಿಯಾದ ಅವಲಂಬನೆಯಿಂದ ಓದುವ ಮತ್ತು ಬರೆಯುವ ಎರಡೂ ರೂಢಿಗಳಿಂದ ಯುವ ಜನತೆ ವಿಮುಖರಾಗುತ್ತಿದ್ದಾರೆ ಎಂದ ಅವರು ಜೀವನದಲ್ಲಿ ಸೃಜನಶೀಲತೆ ಮೈಗೂಡಿಸಿಕೊಳ್ಳಲು ಓದಿನತ್ತ ಗಮನ ಹರಿಸಬೇಕು.

ಡಾ.ಬಾಲಕೃಷ್ಣ ಹೆಗಡೆ, ಎನ್ನೆಎಸ್ಸೆಸ್‌ ಕಾರ್ಯಕ್ರಮಾಧಿಕಾರಿ