ಕೋವಿಡ್‌ ಹೊಸ ರೂಪಾಂತರಿ ಬಗ್ಗೆ ಎಚ್ಚರದ ಕೆಲಸ ಮಾಡಿ

| Published : Dec 23 2023, 01:47 AM IST

ಸಾರಾಂಶ

ಹೊಸ ತಳಿ ಬಗ್ಗೆ ಹೆಚ್ಚಿನ ಭಯ ಬೇಡ. ಜನಸಾಮಾನ್ಯರಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕವೇ ರೋಗವನ್ನು ಮೊದಲಿಗೆ ನಿಯಂತ್ರಣಕ್ಕೆ ತರಬೇಕು. ನಂತರದಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕೋವಿಡ್ ಪರೀಕ್ಷೆ, ನಿಯಂತ್ರಣಕ್ಕೆ ಅಗತ್ಯ ಸಿಬ್ಬಂದಿ ಸಿದ್ಧತೆ, ಔಷಧಿಗಳ ದಾಸ್ತಾನು ಇರುವಂತೆ ಮುಂಜಾಗ್ರತೆ ವಹಿಸಬೇಕು. ಯಾವುದೇ ಕಾರಣಕ್ಕೂ ಸೌಲಭ್ಯಗಳ ಕೊರತೆ ಉಂಟಾಗಬಾರದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದದಾರೆ.

ಸುರಕ್ಷತಾ ಕ್ರಮಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ

ಆಸ್ಪತ್ರೆ, ಔಷಧಿ, ಸಿಬ್ಬಂದಿಗಳ ಅಗತ್ಯ ಸಿದ್ಧತೆ ಇರಲಿ

ಅಧಿಕಾರಿಗಳ ಸಭೆಯಲ್ಲಿ ಡಿಸಿ ಗುರುದತ್ತ ಹೆಗಡೆಕನ್ನಡಪ್ರಭ ವಾರ್ತೆ ಧಾರವಾಡ

ಮೊಟ್ಟ ಮೊದಲಿಗೆ ಕೋವಿಡ್‌-19 ಬಂದ ಸಂದರ್ಭದಲ್ಲಿ ಕಟ್ಟೆಚ್ಚರದಿಂದ ಕೆಲಸ ಮಾಡಿದ ರೀತಿಯಲ್ಲಿಯೇ ಕೋವಿಡ್ ಹೊಸ ರೂಪಾಂತರಿ ತಳಿ ಬಗ್ಗೆಯೂ ಎಚ್ಚರಿಕೆಯಿಂದ ಕಾರ್ಯ ಮಾಡಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಪೊಲೀಸ್ ಮತ್ತು ಇತರ ಇಲಾಖೆಗಳ ಅಧಿಕಾರಿಗಳ ಸಭೆ ಜರುಗಿಸಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಕುರಿತು ಸಭೆ ಜರುಗಿಸಿ ಮಾತನಾಡಿದರು.

ಹೊಸ ತಳಿ ಬಗ್ಗೆ ಹೆಚ್ಚಿನ ಭಯ ಬೇಡ. ಜನಸಾಮಾನ್ಯರಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕವೇ ರೋಗವನ್ನು ಮೊದಲಿಗೆ ನಿಯಂತ್ರಣಕ್ಕೆ ತರಬೇಕು. ನಂತರದಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕೋವಿಡ್ ಪರೀಕ್ಷೆ, ನಿಯಂತ್ರಣಕ್ಕೆ ಅಗತ್ಯ ಸಿಬ್ಬಂದಿ ಸಿದ್ಧತೆ, ಔಷಧಿಗಳ ದಾಸ್ತಾನು ಇರುವಂತೆ ಮುಂಜಾಗ್ರತೆ ವಹಿಸಬೇಕು. ಯಾವುದೇ ಕಾರಣಕ್ಕೂ ಸೌಲಭ್ಯಗಳ ಕೊರತೆ ಉಂಟಾಗಬಾರದು ಎಂದು ಎಚ್ಚರಿಸಿದರು.

ಕೋವಿಡ್ ಹೊಸ ರೂಪಾಂತರಿ ತಳಿಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಆತಂಕ, ಭಯ ಬೇಡ. ಈಗಾಗಲೇ ರಾಜ್ಯಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಮತ್ತು ಸಲಹಾತ್ಮಕ ಕ್ರಮಗಳನ್ನು ಪಾಲಿಸುವ ಮೂಲಕ ಜಾಗೃತಿ ವಹಿಸಬೇಕು. ಜಿಲ್ಲೆಯಲ್ಲಿ ಕಳೆದ ಕೋವಿಡ್ ಅವಧಿಯಲ್ಲಿ ಅನುಸರಿಸಿದ ಸೂಕ್ತ ಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಕೈಗೊಳ್ಳಲಾಗುವುದು. ಹಿಂದಿನ ಕೋವಿಡ್ ಸಂದರ್ಭದಲ್ಲಿ ರಚಿಸಿದ ಸಮಿತಿಗಳನ್ನು ಪುನರ್ ಸಿದ್ದಗೊಳಸಿ, ಅಗತ್ಯವಿದ್ದಲ್ಲಿ ಸಮಿತಿಗಳಿಗೆ ಕಾರ್ಯ ಹಂಚಿಕೆ ಮಾಡಲಾಗುತ್ತದೆ ಎಂದರು.

ರಾಜ್ಯ ಆರೋಗ್ಯ ಇಲಾಖೆಯಿಂದ ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆರೋಗ್ಯ ಇಲಾಖೆಯೊಂದಿಗೆ ಇತರ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ತೀವ್ರ ಎಚ್ಚರಿಕೆ ವಹಿಸಲು ಸೂಚಿಸಿದ್ದು ತಾವು ಸಹ ಅಷ್ಟೇ ಗಂಭೀರವಾಗಿ ಕೆಲಸ ಮಾಡಿ ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಮತ್ತು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ಸಭೆಯಲ್ಲಿ ವಿವರಿಸಿದರು. ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಕಿಮ್ಸ ವೈಧ್ಯಕೀಯ ಅಧೀಕ್ಷಕ ಡಾ.ಸಿ ಅರುಣಕುಮಾರ ಸೇರಿದಂತೆ ವಿವಿಧ ತಾಲೂಕು ಆಸ್ಪತ್ರೆಗಳ ವೈದ್ಯಾಧಿಕಾರಿ, ವಿವಿಧ ಇಲಾಖೆ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಇಲಾಖೆಯ ಕಾರ್ಯಕ್ರಮದ ಅಧಿಕಾರಿಗಳು ಭಾಗವಹಿಸಿದ್ದರು.