ಸಾರಾಂಶ
ಹಗರಿಬೊಮ್ಮನಹಳ್ಳಿ ಪಟ್ಟಣದ ಗುರುಭವನದಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕರ ಸುರಕ್ಷತೆಗಾಗಿ ಜಾರಿಗೆ ತಂದಿರುವ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಉದ್ಘಾಟಿಸಿದರು.
ಹಗರಿಬೊಮ್ಮನಹಳ್ಳಿ: ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಇರುವ ಭಯ ಹೋಗಲಾಡಿಸುವ ಜತೆಗೆ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಲು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಜಯನಗರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕರ ಸುರಕ್ಷತೆಗಾಗಿ ಜಾರಿಗೆ ತಂದಿರುವ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯ ಸಿಬ್ಬಂದಿ ಸಾರ್ವಜನಿಕರ ಮನೆ ಬಳಿ ಹೋದಾಗ ಸಹಕರಿಸಬೇಕು. ಪ್ರತಿಯೊಬ್ಬರೂ ಅಪರಾಧಗಳ ಬಗ್ಗೆ ಜಾಗೃತಿ ಹೊಂದುವ ಅಗತ್ಯವಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಯ ಮೊಬೈಲ್ ಸಂಖ್ಯೆಯನ್ನು ಪ್ರತಿಯೊಬ್ಬರೂ ಇಟ್ಟುಕೊಳ್ಳಬೇಕು. ಮನೆಯ ಬಳಿ ಪೊಲೀಸರು ಬಂದಾಗ ಕೇವಲ ಪೊಲೀಸ್ ಇಲಾಖೆಗೆ ಸಂಬಂಧಿಸಿದಲ್ಲದೆ, ಇತರ ದೂರುಗಳನ್ನು ಅವರಿಗೆ ನೀಡಬಹುದಾಗಿದೆ. ಇತ್ತೀಚೆಗೆ ಸೈಬರ್ ಕ್ರೈಮ್ ಹೆಚ್ಚುತ್ತಿದ್ದು ಜಾಗೃತಿ ವಹಿಸುವ ಅಗತ್ಯವಿದೆ. ಅಪರಿಚಿತರು ಕಂಡು ಬಂದರೆ ಕೂಡಲೇ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಪೊಲೀಸರಿಗೆ ಮಾಹಿತಿ ಕೊಡುವಾಗ ಯಾವುದೇ ಭಯಪಡುವ ಅಗತ್ಯವಿಲ್ಲ, ಇದರಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದರು.ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶ ದೊಡ್ಮನಿ ಮಾತನಾಡಿ, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಂಪೂರ್ಣ ಸಹಕಾರ ಅಗತ್ಯವಾಗಿದೆ. ಸಾರ್ವಜನಿಕ ವಲಯದಲ್ಲಿ ಪೊಲೀಸ್ ಇಲಾಖೆ ಅತ್ಯಂತ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದೆ. ಅನ್ಯಾಯಕ್ಕೊಳಗಾದವರಿಗೆ ಸೂಕ್ತ ಕಾನೂನು ತಿಳಿವಳಿಕೆ ಮೂಲಕ ನ್ಯಾಯ ಒದಗಿಸುವ ಯತ್ನವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದು ಹೇಳಿದರು. ಸಿಪಿಐಗಳಾದ ವಿಕಾಸ ಲಮಾಣಿ, ಪ್ರಹ್ಲಾದ ಚೆನ್ನಗಿರಿ, ಪಿಎಸ್‌ಐ ಬಸವರಾಜ ಅಡವಿಬಾವಿ, ತಾರಾಬಾಯಿ, ಗುರುಚಂದ್ರ ಯಾದವ್, ಇಲಾಖೆಯ ದಶರಥ, ಮಲ್ಲೇಶ ನಾಯ್ಕ, ಚಿದಾನಂದ, ಸಿದ್ದೇಶ, ಪೂರ್ವಾಚಾರಿ, ರಾಮಾಂಜಿನಿ, ಮರಿಯಮ್ಮನಹಳ್ಳಿ ಪಂಪಾಪತಿ, ಶ್ರುತಿ, ಭಾರತಿ, ಕಿರಣ, ಪ್ರಸನ್ನ, ವಿಶ್ವನಾಥ ಇತರರಿದ್ದರು.