ಕಾನೂನುಗಳಿದ್ದರೂ ಸಾರ್ವಜನಿಕರಲ್ಲಿ ಕಾನೂನು ಅರಿವು ಹಾಗೂ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ

ಕುಷ್ಟಗಿ: ಉದ್ಯೋಗ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸುವುದಾಗಿ ನಂಬಿಸಿ ವ್ಯಕ್ತಿಗಳನ್ನು ವಂಚಿಸಿ ಮಾನವ ಕಳ್ಳಸಾಗಣೆಯ ಜಾಲಕ್ಕೆ ಸೆಳೆಯುವ ಪ್ರಕರಣ ನಡೆಯುತ್ತಿದ್ದು, ಇಂತಹ ಆಮಿಷಗಳಿಗೆ ಯಾರೂ ಬಲಿಯಾಗಬಾರದು. ಅಪರಿಚಿತ ವ್ಯಕ್ತಿಗಳ ಮಾತು ಹಾಗೂ ಆಮಿಷಗಳಿಗೆ ಮರುಳಾಗದೆ ಎಚ್ಚರಿಕೆ ವಹಿಸಬೇಕು ಎಂದು ಸಿಪಿಐ ವಿಶ್ವನಾಥ ಹಿರೇಗೌಡರ್‌ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ತಾಲೂಕು ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಮಾನವ ಕಳ್ಳಸಾಗಣೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾನವ ಕಳ್ಳಸಾಗಣೆ ದೇಶದ ಗಂಭೀರ ಸಾಮಾಜಿಕ ಸಮಸ್ಯೆಯಾಗಿದ್ದು, ಇದನ್ನು ತಡೆಯಲು ಕಾನೂನುಗಳಿದ್ದರೂ ಸಾರ್ವಜನಿಕರಲ್ಲಿ ಕಾನೂನು ಅರಿವು ಹಾಗೂ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ.ಮಾನವ ಕಳ್ಳಸಾಗಣೆ ಮೂಲಕ ಲೈಂಗಿಕ ಶೋಷಣೆ, ಗುಲಾಮಗಿರಿ, ಬಲವಂತದ ಕಾರ್ಮಿಕ ಪದ್ಧತಿ ಹಾಗೂ ಅಂಗಾಂಗಗಳ ಕಳ್ಳಸಾಗಣೆ ಸೇರಿದಂತೆ ವಿವಿಧ ರೀತಿಯ ಅಪರಾಧ ನಡೆಯುತ್ತವೆ. ಇಂತಹ ಕೃತ್ಯ ಕಾನೂನು ಗಂಭೀರವಾಗಿ ಪರಿಗಣಿಸುತ್ತದೆ ಎಂದರು.

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಡಾಣಿ, ಮಾನವ ಕಳ್ಳಸಾಗಣೆ ಮಾಡುವವರು ಜನರ ದೌರ್ಬಲ್ಯ ಬಳಸಿಕೊಂಡು ವಿವಿಧ ರೀತಿಯ ಆಮಿಷ ಒಡ್ಡುತ್ತಾರೆ. ಉದ್ಯೋಗ ಕೊಡಿಸುವುದಾಗಿ,ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವುದಾಗಿ, ಹೆಚ್ಚಿನ ವೇತನದ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಜನರನ್ನು ತಮ್ಮ ಜಾಲಕ್ಕೆ ಸೆಳೆಯುವ ಸಾಧ್ಯತೆ ಇದೆ ಎಂದರು.

ವಿಶೇಷವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಇಂತಹ ಚಟುವಟಿಕೆ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಹೆಣ್ಣುಮಕ್ಕಳನ್ನು ವಿವಿಧ ರೀತಿಯಲ್ಲಿ ಶೋಷಣೆಗೆ ಒಳಪಡಿಸುವುದು, ಚಿಕ್ಕ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವುದು ಹಾಗೂ ಬಲವಂತವಾಗಿ ಕೆಲಸ ಮಾಡಿಸುವಂತಹ ಪ್ರಕರಣ ಕಂಡುಬರುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಅಪರಿಚಿತ ವ್ಯಕ್ತಿಗಳೊಂದಿಗೆ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವಾಗ ಹಾಗೂ ಅವರ ಆಮಿಷ ಸ್ವೀಕರಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಹಿರಿಯ ಸಿವಿಲ್ ನ್ಯಾಯಾಧೀಶ ಆರ್‌ ಮಂಜುನಾಥ ಮಾತನಾಡಿದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ ಮಾನವ ಕಳ್ಳಸಾಗಣೆ ತಡೆಗೆ ಕಾನೂನು ಕ್ರಮ, ಸಂತ್ರಸ್ತರಿಗೆ ದೊರೆಯುವ ನೆರವು ಹಾಗೂ ಸಾರ್ವಜನಿಕರ ಜವಾಬ್ದಾರಿಗಳ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಪಿಎಸ್ಐ ಹನುಮಂತಪ್ಪ ತಳವಾರ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಆರ್.ನಾಯಕ, ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ನಾಗಮ್ಮ ಗುಂಡೂರು, ಶಶಿಧರ ಶೆಟ್ಟರ್, ರಮೇಶ ಪಿ, ಎಂ.ಬಿ.ಕೊನಸಾಗರ, ಆನಂದ ಡೊಳ್ಳಿನ್‌, ಪರಸಪ್ಪ ಗುಜಮಾಗಡಿ ಸೇರಿದಂತೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು.

ಮಾನವ ಕಳ್ಳಸಾಗಣೆ ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಘನತೆಗೆ ಧಕ್ಕೆ ತರುವ ಗಂಭೀರ ಅಪರಾಧವಾಗಿದೆ. ಕಾನೂನು ನೆರವು ಹಾಗೂ ಸಂತ್ರಸ್ತರ ರಕ್ಷಣೆಗೆ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಸಾರ್ವಜನಿಕರು ಕಾನೂನು ಅರಿವು ಪಡೆದುಕೊಂಡು ಇಂತಹ ಪ್ರಕರಣಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್‌.ಮಂಜುನಾಥ ತಿಳಿಸಿದ್ದಾರೆ.