ಡೆಂಘೀ ಉಲ್ಬಣ ಮೊದಲೇ ಎಚ್ಚರಿಕೆ ವಹಿಸಿ: ಶಾಸಕ ಕೃಷ್ಣನಾಯ್ಕ

| Published : Jul 11 2024, 01:32 AM IST

ಡೆಂಘೀ ಉಲ್ಬಣ ಮೊದಲೇ ಎಚ್ಚರಿಕೆ ವಹಿಸಿ: ಶಾಸಕ ಕೃಷ್ಣನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆಯಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ.

ಹೂವಿನಹಡಗಲಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಡೆಂಘೀ ಜ್ವರ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಕೃಷ್ಣನಾಯ್ಕ ಎಚ್ಚರಿಕೆ ನೀಡಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಡೆಂಘೀ ಜ್ವರ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆಯಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಜತೆಗೆ ಗ್ರಾಪಂ ಮಟ್ಟದಲ್ಲಿ ಪಿಡಿಒಗಳು ಹಳ್ಳಿಗಳಿಗೆ ಹೋಗುತ್ತಿಲ್ಲ. ಡೆಂಘೀ ಜ್ವರ ಪ್ರಕರಣಗಳು ಹೆಚ್ಚಾಗುವ ಮುನ್ನವೇ ಸ್ವಚ್ಛತೆ ಸೇರಿದಂತೆ ಕುಡಿಯುವ ನೀರು ಒದಗಿಸುವ ಕೆಲಸ ಮಾಡಬೇಕಿದೆ ಎಂದರು.

ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ಚರಂಡಿಗಳಲ್ಲಿ ಕಸದ ರಾಶಿ ಕೊಳೆತು ನಾರುತ್ತಿವೆ. ನೆಪಕ್ಕೆ ಮಾತ್ರ ಬ್ಲಿಚಿಂಗ್‌ ಪೌಡರ್‌ ಹಾಕಿ ಕೈ ತೊಳೆದುಕಂಡರೆ ಸಾಲದು, ಜನರ ಕಷ್ಟ ನಷ್ಟ ಸಮಸ್ಯೆಗಳನ್ನು ಆಲಿಸಬೇಕು. ಜನರ ಕೈಗೆ ಸಿಗದೇ ಅಧಿಕಾರಿಗಳು ತೊಂದರೆ ನೀಡಿದರೆ, ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು.

ತಾಲೂಕಿನ ಪ್ರತಿಯೊಂದು ಇಲಾಖೆಗಳು ಹಾಗೂ ಪ್ರತಿ ಶಾಲೆಗಳಲ್ಲಿ, ಸಿಸಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್‌ ವ್ಯವಸ್ಥೆ ಅಳವಡಿಸಲು ಸೂಚನೆ ನೀಡಿದರು. ಅಧಿಕಾರಿಗಳು ತಿಳಿದಾಗ ಬಂದು ಹೋದರೇ ಜನರ ಕೆಲಸ ಯಾರು ಮಾಡಬೇಕು, ಜನರ ತೆರಿಗೆ ಹಣದಲ್ಲಿ ಸಂಬಳ ತೆಗೆದುಕೊಳ್ಳುವ ಇವರು, ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಅಸಮಾದಾನ ವ್ಯಕ್ತಪಡಿಸಿದರು.

ಪಟ್ಟಣದ ಆಸ್ಪತ್ರೆಯಲ್ಲಿ ನರ್ಸ್‌ಗಳು ಹಳ್ಳಿಗಳಿಂದ ಬಂದ ರೋಗಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಣ್ಣ ರೋಗಕ್ಕೂ ಹೊರಗೆ ಹೋಗಿ ಎಂದು ಹೇಳುತ್ತಿದ್ದಾರೆ. ಇಂತಹ ಪ್ರಕರಣ ಕಂಡು ಬಂದರೆ ಅವರನ್ನು ಮುಲಾಜಿಲ್ಲದೇ ಅವರ ಮೇಲೆ ಕ್ರಮಕ್ಕೆ ಬರುತ್ತೇನೆಂದು ಹೇಳಿದರು.

ಮಳೆಗಾಲ ಇದ್ದು ಸಾಕಷ್ಟು ಕಡೆಗಳಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಅಲ್ಲಿ ಚರಂಡಿ ಕಾಮಗಾರಿ ನಡೆಸದೇ ತಮಗೆ ತಿಳಿದಂತೆ ಮಾಡುತ್ತಿದ್ದಾರೆ. ಕೋಟಿಗಟ್ಟಲೇ ಹಣ ಬಂದರೂ ಬೇಕಾಬಿಟ್ಟಿ ಬಳಸುತ್ತಿದ್ದಾರೆ ಎಂದು ಹೇಳಿದರು.

ಅಧಿಕಾರಿಗಳು ನನ್ನನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇಲಾಖೆಗಳ ಮೇಲಧಿಕಾರಿಗಳು ಪ್ರತಿ ವಾರವೂ ವರದಿ ನೀಡಬೇಕೆಂದು ಹೇಳಿದರು.

ಸಭೆಯಲ್ಲಿ ಉತ್ತಂಗಿ ಗ್ರಾಮದ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ರೋಗಿಗಳು ಹುಡುಕಾಡಿದರೂ ಈ ವೈದ್ಯ ಸಿಗುತ್ತಿಲ್ಲ. ನಾವು ಟಿಎಚ್‌ಒ ಇಬ್ಬರೂ ಹುಡುಕಿದರೂ ಸಿಗಲಿಲ್ಲ. ಯಾವ ಸೀಮೆಗೆ ಹೋಗಿದ್ದೀಯಾ? ಸರ್ಕಾರದಿಂದ ಬರುವ ಸಂಬಳಕ್ಕಾದರೂ ಸರಿಯಾಗಿ ಕೆಲಸ ಮಾಡುವುದನ್ನು ಕಲಿಯಿರಿ ಎಂದರು.

ಗ್ರಾಪಂಗಳಲ್ಲಿ ನೀರುಗಂಟಿಗಳು ಕೆಲಸ ಮಾಡದೇ ತಮ್ಮ ಹೊಲ-ಮನೆ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಪಿಡಿಒಗಳ ನಿಗಾ ಇಲ್ಲ. ನಮ್ಮ ತಾಂಡದಲ್ಲಿ ನಮ್ಮ ಮನೆ ಮುಂದೆ ಮಳೆ ನೀರು ತಿಂಗಳುಗಟ್ಟಲೇ ನಿಂತರೂ ಪಿಡಿಒ ಕ್ರಮ ಕೈಗೊಂಡಿಲ್ಲ. ಇನ್ನು ಜನರ ಪರಿಸ್ಥಿತಿ ಹೇಗೆ ಇರಬೇಡ ಎಂದು ತಾಪಂ ಇಒಗೆ ಪಿಡಿಒಗಳ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ಸೂಚನೆ ನೀಡಿದರು.

ತಾಲೂಕಿನಲ್ಲಿರುವ ಶುದ್ಧ ಕುಡಿವ ನೀರಿನ ಘಟಕ, ಬಹುಗ್ರಾಮ ಕುಡಿವ ನೀರಿನ ಯೋಜನೆಗಳ ಸ್ವಚ್ಛತೆ ಕಾಪಾಡಬೇಕಿದೆ. ನದಿಗೆ ಮಳೆ ನೀರು ಬರುತ್ತಿದ್ದು, ಇದರಿಂದ ಬಹಳಷ್ಟು ಮಣ್ಣು ಮಿಶ್ರಣ ನೀರು ಬರುತ್ತಿದೆ. ಈ ಕುರಿತು ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕಿದೆ ಎಂದರು.

ಟಿಎಚ್‌ಒ ಸ್ವಪ್ನ ಕಟ್ಟಿ ಡೆಂಘೀ ಜ್ವರ ಕುರಿತು ಮಾಹಿತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್‌ ಮಲ್ಲಿಕಾರ್ಜುನ, ತಾಪಂ ಇಒ ಉಮೇಶ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.