ಮಳೆಗಾಲಕ್ಕೂ ಮುನ್ನ ಇರಲಿ ಮುಂಜಾಗ್ರತೆ!

| Published : May 27 2024, 01:01 AM IST

ಸಾರಾಂಶ

ಬೇಸಿಗೆ ಮುಗಿದು ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭಗೊಳ್ಳಲಿದೆ. ಹೀಗಾಗಿ ಈಗಲೇ ಪುರಸಭೆಯವರು ಎಚ್ಚೆತ್ತುಕೊಂಡು ಮಳೆಗಾಲದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವ ಮೂಲಕ ಮಳೆಗಾಲದಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಲು ಕಾರ್ಯೋನ್ಮುಖವಾಗಬೇಕಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿಬೇಸಿಗೆ ಮುಗಿದು ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭಗೊಳ್ಳಲಿದೆ. ಹೀಗಾಗಿ ಈಗಲೇ ಪುರಸಭೆಯವರು ಎಚ್ಚೆತ್ತುಕೊಂಡು ಮಳೆಗಾಲದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವ ಮೂಲಕ ಮಳೆಗಾಲದಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸಲು ಕಾರ್ಯೋನ್ಮುಖವಾಗಬೇಕಿದೆ.

ಮಳೆಯ ನೀರು ಚರಂಡಿಯಲ್ಲಿ ತುಂಬಿ ಮತ್ತು ರಸ್ತೆಯ ಮೇಲಿನ ಮಳೆಯ ನೀರು ಮನೆ, ಅಂಗಡಿಗಳಲ್ಲಿ ನುಗ್ಗುವ ಮುಂಚೆ ಯಾವ ವಾರ್ಡ್‌ನ, ಯಾವ ಪ್ರದೇಶದಲ್ಲಿ ಇಳಿಜಾರು ಇದೆ, ಎಲ್ಲಿ ಚರಂಡಿ ನಿರ್ಮಿಸಿದರೆ, ಮಳೆಯ ನೀರು ಚರಂಡಿ ಮೂಲಕ ಪಟ್ಟಣದ ಹೊರ ವಲಯ ಸೇರುತ್ತದೆ ಎಂಬ ಮುಂಜಾಗ್ರತ ಕ್ರಮಕೈಗೊಳ್ಳುವುದು ಅನಿವಾರ್ಯವಾಗಿದೆ.

ಚರಂಡಿ ಸ್ವಚ್ಛಗೊಳಿಸಲಿ:

ದೊಡ್ಡ ದೊಡ್ಡ ಚರಂಡಿಗಳಲ್ಲಿನ ಹೂಳು ತೆಗೆಯುವುದು, ಹೊಸ ಚರಂಡಿಗಳನ್ನು ನಿರ್ಮಿಸುವುದು, ಇಳಿಜಾರು ಪ್ರದೇಶದಲ್ಲಿ ನೀರು ನುಗ್ಗದಂತೆ ವ್ಯವಸ್ಥೆ ಮಾಡಿಕೊಳ್ಳುವುದು ಸೇರಿದಂತೆ ಮುಂಗಾರು ಮಳೆಯ ರಸ್ತೆಯ ಮೇಲಿನ ನೀರಿನ ಸಮಸ್ಯೆಯನ್ನು ಸಾರ್ವಜನಿಕರಿಗೆ ಆಗದಂತೆ ಮುಂಜಾಗ್ರತ ಕ್ರಮ ಕೈಗೊಂಡರೆ, ಪಟ್ಟಣದ ಎಲ್ಲ ವಾರ್ಡ್‌ಗಳ ಸಾರ್ವಜನಿಕರು ಹರ್ಷಗೊಳ್ಳುತ್ತಾರೆ. ಮಳೆಯ ನೀರು ಎಲ್ಲಿಯೂ ಹೋಗದೆ, ರಸ್ಗೆಯ ಮೇಲೆಯೇ ನಿಂತು, ಇಳಿಜಾರು ಪ್ರದೇಶದ ಮನೆಗಳಿಗೆ ನುಗ್ಗಿದರೆ, ಆ ಕುಟುಂಬಗಳು ಪುರಸಭೆಗೆ ಹಿಡಿಶಾಪ ಹಾಕುವುದು ಗ್ಯಾರಂಟಿ.

ಮಳೆಗಾಲ ಆರಂಭಗೊಳ್ಳುವುದಕ್ಕೂ ಮುಂಚೆ ಸಿದ್ಧತೆ ಮಾಡಿಕೊಂಡರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಮಳೆಗಾಲದಲ್ಲಿಯೇ ನೀರು ನುಗ್ಗಿ ಸಮಸ್ಯೆ ಉಂಟಾದಾಗ ಪರಿಹಾರ ಕಂಡುಕೊಳ್ಳಲು ಹೊರಟರೆ ನೂರಾರು ಸಮಸ್ಯೆಗಳು ಎದುರಿಸಬೇಕಾಗುತ್ತದೆ.

ರಸ್ತೆಯ ಬದಿಯಲ್ಲಿರುವ ದೊಡ್ಡ ಚರಂಡಿಗಳಲ್ಲಿನ ಕಸಕಡ್ಡಿ ಸೇರಿದಂತೆ ಪ್ಲಾಸ್ಲಿಕ್‌ ಬಾಟಲು, ಬ್ಯಾಗ್‌ಗಳು ವಿಪರಿತವಾಗಿ ತುಂಬಿಕೊಂಡಿದ್ದು, ಮಳೆ ನೀರು ಸರಾಗವಾಗಿ ಚರಂಡಿ ಒಳಗೆ ಹೋಗಲು ಅಡ್ಡಿಪಡಿಸುತ್ತವೆ. ಹೀಗಾಗಿ ಚರಂಡಿಯಲ್ಲಿನ ಹೋಳು ತೆಗೆಯುವುದು ಉತ್ತಮ ಕಾರ್ಯವಾಗಿದೆ.

ಸಂಭವನೀಯ ಸಮಸ್ಯೆ ತಪ್ಪಿಸಿ:

ಪಟ್ಟಣದ ಪ್ರಮುಖ ರಸ್ತೆಗಳು, ತಗ್ಗು ಪ್ರದೇಶಗಳನ್ನು ಗುರುತಿಸಿ ಮಳೆಗಾಲದಲ್ಲಿ ಆಗಬಹುದಾದ ಸಂಭವನೀಯ ಸಮಸ್ಯೆಗಳನ್ನು ತಪ್ಪಿಸಲು ಪುರಸಭೆ ಮುಂದಾಗಬೇಕಾಗಿದೆ. ಲೋಕಸಭೆ ಚುನಾವಣಾ ನೀತಿ ಸಂಹಿತೆ ನಂತರ ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು, ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತೊಂದರೆಯಾಗಿದೆ. ನೀತಿಸಂಹಿತೆಯ ಪರಿಣಾಮ ಮಳೆಗಾಲದಲ್ಲಿ ಮಳೆಯ ನೀರಿನ ಸಮಸ್ಯೆ ಆಗಬಹುದೇನು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಮನೆ, ಅಂಗಡಿಗಳಿಗೆ ನುಗ್ಗುವ ನೀರು:

ಸದಾ ವಾಹನಗಳು, ಸಾರ್ವಜನಿಕ ಓಡಾಟದ ಜನದಟ್ಟಣೆಯಿಂದ ಕೂಡಿದ ವಿಜಯಪುರ ರಸ್ತೆಯ ಪಂಚಶೀಲ ನಗರದ ಬಳಿಯ ರಾಜ್ಯ ಹೆದ್ದಾರಿ ಮಳೆ ಬಂದರೆ ಸುಮಾರು ಸಾವಿರ ಮೀಟರ್‌ ಅಂತರದಲ್ಲಿ ರಸ್ತೆಯ ಮೇಲೆ ಮಳೆಯ ನೀರು ನಿಂತು ವಾಹನ ಸವಾರರು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟು ಮಾಡುತ್ತಿದೆ. ಕೆಲವೊಂದು ಬಾರಿ ಈ ರಸ್ತೆಯಲ್ಲಿನ ನೀರು ಎಲ್ಲಿಯೂ ಹೋಗಲು ಸಾಧ್ಯವಾದಾಗ ರಸ್ತೆಯ ಪಕ್ಕದ ಮನೆ, ಅಂಗಡಿಗಳಲ್ಲಿ ನುಗ್ಗಿದ ಉದಾಹರಣೆಗಳು ಇವೆ.

ಮುಂಜಾಗ್ರತ ಅಗತ್ಯ:

ಕಳೆದ ಎರಡ್ಮೂರು ದಿನಗಳ ಹಿಂದೆ ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್‌ 16 ಹಾಗೂ 17 ರ ಮಧ್ಯದಲ್ಲಿ ಬರುವ ಚರಂಡಿ ನಾಲೆಯ ಬಳಿ ನಿರ್ಮಾಣವಾದ ಆಳವಾದ ತಗ್ಗಿನಿಂದ ಚರಂಡಿ ನೀರು ನಿಂತಿರುವ ಪರಿಣಾಮ 6 ವರ್ಷದ ಬಾಲಕ ಚರಂಡಿ ನೀರಿನಲ್ಲಿ ಬಿದ್ದು, ಸಾರ್ವಜನಿಕರ ಸಹಾಯದಿಂದ ಪ್ರಾಣಾಪಾಯದಿಂದ ಮೇಲೆ ಬಂದಿದ್ದು, ಇಂತಹ ಅವಘಡಗಳು ಪಟ್ಟಣದ ಎಲ್ಲೆಂದರಲ್ಲಿ ಇವೆ. ಹೀಗಾಗಿ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿರುವುದು ಪುರಸಭೆಯ ಕರ್ತವ್ಯವಾಗಿದೆ. ಮುಂಗಾರು ಮಳೆಯ ನೀರು ಸಾರ್ವಜನಿಕರಿಗೆ ತೊಂದರೆ ನೀಡದಂತೆ ಮುಂಜಾಗ್ರತ ಕ್ರಮ ವಹಿಸುವುದು ಸೂಕ್ತವಾಗಿದೆ ಎಂಬುದು ಪಟ್ಟಣದ ನಾಗರಿಕರ ಆಗ್ರಹವಾಗಿದೆ.

---

ಕೋಟ್‌

ವಿಜಯಪುರ ರಸ್ತೆಯ ಪಂಚಶೀಲ ನಗರದ ಮುಂದಿನ ವಿಜಯಪುರ ಮುಖ್ಯರಸ್ತೆಯ ಮೇಲೆ ಮಳೆ ನೀರು, ಚರಂಡಿ ನೀರು ನಿಲ್ಲುವ ಕುರಿತು ನನ್ನ ಗಮನಕ್ಕೆ ಬಂದಿರುವುದಿಲ್ಲ. ಮಳೆಗಾಲದಲ್ಲಿ ಈ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ವಾರ್ಡ್‌ 16ರಲ್ಲಿನ ಚರಂಡಿಯಲ್ಲಿ ಮಗು ಬಿದ್ದಿರುವ ಕುರಿತು ಮಾಹಿತಿ ಗಮನಕ್ಕೆ ಬಂದಾಗ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ, ಚರಂಡಿ ನೀರು ನಿಲ್ಲದಂತೆ ಜೆಸಿಬಿ ಮೂಲಕ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

-ಅಬೀದ್ ಗದ್ಯಾಳ, ಪುರಸಭೆ ಆಡಳಿತಾಧಿಕಾರಿ ಹಾಗೂ ಎಸಿ,ಇಂಡಿ.

---

ಇಂಡಿ ಪಟ್ಟಣದ ವಿಜಯಪುರ ರಸ್ತೆಯ ಪಂಚಶೀಲ ನಗರದ ಬಳಿ ಹಾದು ಹೋಗಿರುವ ಮುಖ್ಯರಸ್ತೆಯ ಮೇಲೆ ಮಳೆ ನೀರು ಹಾಗೂ ಚರಂಡಿ ನೀರು ಹರಿಯುತ್ತಿದ್ದು, ಮಳೆ ಬಂದರೆ ರಸ್ತೆ ಜಲಾವೃತವಾಗುತ್ತದೆ. ಈ ಸ್ಥಳದಲ್ಲಿನ ನೀರು ಬೇರೆ ಕಡೆಗೆ ಹೋಗುವಂತೆ ಯೋಜನೆ ರೂಪಿಸಿ ಎಂದು ಹಲವಾರು ಬಾರಿ ಪುರಸಭೆ ಅಧಿಕಾರಿಗಳಿಗೆ ಹೇಳಿದ್ದೇನೆ. ಹಲವು ಬಾರಿ ಈ ಸಮಸ್ಯೆ ಪರಿಹಾರದ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ಧೇನೆ. ಆದರೂ ಇಂದಿನ ವರೆಗೂ ಚರಂಡಿ ನೀರು ಮುಖ್ಯರಸ್ತೆಯ ಮೇಲೆ ಹರಿಯುವುದು ತಪ್ಪಿಲ್ಲ. ಮಳೆಗಾಲ ಆರಂಭವಾದರೆ ಈ ರಸ್ತೆ ಸಂಪೂರ್ಣ ಜಲಾವೃತಗೊಂಡು ರಸ್ತೆಯ ಮೇಲಿನ ನೀರು ರಸ್ತೆಯ ಪಕ್ಕದ ಮನೆ,ಅಂಗಡಿಗಳಿಗೆ ನುಗ್ಗುತ್ತದೆ.

-ವಿಜಯಕುಮಾರ ಮೂರಮನ, ಪುರಸಭೆ ಸದಸ್ಯ, ಇಂಡಿ.