ಕನ್ನಡಪ್ರಭ ವಾರ್ತೆ ಪಾಂಡವಪುರ

ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಬಿಎಲ್‌ಒ-1 ಹಾಗೂ 2 ಬೂತ್‌ ಮಟ್ಟದ ಕಾರ್ಯಯಕರ್ತರ ಕಾರ್ಯಾಗಾರ ನಡೆಯಿತು.

ಸಭೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆಯಲ್ಲಿ ಬೂತ ಮಟ್ಟದ ಬಿಎಲ್‌ಒ-1 ಹಾಗೂ 2 ಕಾರ್ಯಕರ್ತರು ಯಾವ ರೀತಿ ಕರ್ತವ್ಯ ನಿರ್ವಹಿಸಬೇಕು, ಬಿಎಲ್‌ಒ ಅಧಿಕಾರಿಗಳು ಕೇಳುವ ದಾಖಲಾತಿ ನೀಡಬೇಕು, 2002ರ ಮತಪಟ್ಟಿ ಹಾಗೂ 2025 ಮತದಾರರ ಪಟ್ಟಿಯನ್ನು ಓಲಿಕೆ ಮಾಡಿ ಪರಿಶೀಲನೆ ನಡೆಸಬೇಕು, ಸಮಸ್ಯೆಗಳು ಕಂಡುಬಂದರೆ ತಕ್ಷಣ ಪಕ್ಷದ ಬಿಎಲ್‌ಒ-1ಗೆ ಮಾಹಿತಿ ನೀಡಬೇಕು ಎನ್ನುವ ಕುರಿತು ಮಾಹಿತಿ ನೀಡಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ಮಾತನಾಡಿ, ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿದೆ. ಈ ವೇಳೆ ನಮ್ಮ ಮತದಾರರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಬೂತ್‌ಮಟ್ಟದಲ್ಲಿ ಪಕ್ಷದ ಬಿಎಲ್‌ಒ-2 ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.

ಒಂದು ವೇಳೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗಿದ್ದರೆ ತಕ್ಷಣ ಬಿಎಲ್‌ಒ ಅಧಿಕಾರಿಗಳ ಗಮನಕ್ಕೆ ತಂದು ಕೇಳುವ ಸೂಕ್ತವಾದ ಮಾಹಿತಿ ನೀಡಿ ಮತ್ತೆ ಮತದಾರರ ಪಟ್ಟಿಗೆ ಸೇರಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕಿದೆ. ಇದರಲ್ಲಿ ಯಾವುದಾದರು ಸಮಸ್ಯೆಗಳು ಕಂಡುಬಂದರೆ ತಕ್ಷಣ ನನ್ನ ಗಮನಕ್ಕೆ ತಂದರೆ ಕ್ರಮವಹಿಸಲಾಗುವುದು ಎಂದರು.


ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಮತದಾರರ ಪರಿಷ್ಕರಣೆಯೂ ಮೂರು ಹಂತದಲ್ಲಿ ನಡೆಯಲಿದೆ, ಈ ವೇಳೆ ಪಕ್ಷದ ಬಿಎಲ್‌ಒ-1 ಮತ್ತು 2 ಕಾರ್ಯಕರ್ತರು ನಮ್ಮ ಬೂತ್‌ಗಳಲ್ಲಿ ನಮ್ಮ ಮತಗಳು ಡಿಲಿಟ್ ಆಗದಂತೆ ನೋಡಿಕೊಳ್ಳಬೇಕು. ಹಲವು ರಾಜ್ಯಗಳಲ್ಲಿ ಮತದಾರರನ್ನು ಡಿಲಿಟ್ ಮಾಡಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿರುವುದನ್ನು ನಾವು ನೋಡಿದ್ದೇವೆ. ಹಾಗಾಗಿ ಕಾರ್ಯಕರ್ತರು ಸೈನಿಕರಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.

ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜೇಂದ್ರಮೂರ್ತಿ, ಬ್ಲಾಕ್ ಅಧ್ಯಕ್ಷ ಸಂಪಳ್ಳಿ ಉಮೇಶ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್, ಭರತ್‌ಪಟೇಲ್, ಟೌನ್ ಅಧ್ಯಕ್ಷ ಉಮಾಶಂಕರ್, ಎಸ್‌ಸ್ಸಿ ಘಟಕದ ಅಧ್ಯಕ್ಷ ಕಣಿವೆ ರಾಮು, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಡಿ.ಹುಚ್ಚೇಗೌಡ, ರೇವಣ್ಣ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಶ್ರೀಕಾಂತ್, ಮೇಲುಕೋಟೆ ಸೊಸೈಟಿ ಅಧ್ಯಕ್ಷ ಯೋಗನರಸಿಂಹೇಗೌಡ ಸೇರಿದಂತೆ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.