ಸಾರಾಂಶ
ಅಡುಗೆ ಮನೆಗಳಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ಪೂರೈಸಬೇಕು
ಧಾರವಾಡ: ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಆಹಾರ, ಆಹಾರ ಸಾಮಗ್ರಿ ಅನರ್ಹರಿಗೆ ಸಿಗದಂತೆ ಮತ್ತು ಅನಗತ್ಯವಾಗಿ ಸೋರಿಕೆಯಾಗದಂತೆ ಕ್ರಮ ಕೈಗೊಳ್ಳಲು ಜಿಪಂ ಸಿಇಓ ಭುವನೇಶ ಪಾಟೀಲ ಹೇಳಿದರು.
ಜಿಪಂ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಹಾಗೂ ಸಂರಕ್ಷಣೆ ನಿಯಮಾನುಸಾರ ದಾಖಲಿಸಬೇಕು. ಪೋಷಣ ಅಭಿಯಾನದಡಿ ನಿರ್ಧಿಷ್ಟಪಡಿಸಿರುವ ನಿಯಮಗಳ ಪಾಲನೆಯಾಗಬೇಕು. ಫೇಸ್ ಕ್ಯಾಪ್ಚರ್ ಆ್ಯಪ್‌ದಲ್ಲಿ ಮಕ್ಕಳ ದಾಖಲಾತಿ ನಿಗದಿತ ಅವಧಿಯೊಳಗೆ ದಾಖಲಿಸಲು ಸೂಚಿಸಿದರು.ಅಡುಗೆ ಮನೆಗಳಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರ ಪೂರೈಸಬೇಕು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ನಿರಂತರ ತಪಾಸಣೆ ಮೂಲಕ ಯಾವುದೇ ರೀತಿ ಲೋಪಗಳಾದಂತೆ ಮುನ್ನಚ್ಚರಿಕೆ ವಹಿಸಬೇಕು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿರುವ ಸರ್ಕಾರೇತರ ಸಂಸ್ಥೆಗಳು, ವಿದ್ಯಾರ್ಥಿಗಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುವ ಕುರಿತು ಶೀಘ್ರದಲ್ಲಿ ನಿರ್ಧಾರ ತಿಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಸೂಚಿಸಿದ್ದಾರೆ. ಏಜೆನ್ಸಿಗಳು ಆದಷ್ಟು ಬೇಗ ತಮ್ಮ ಅಭಿಪ್ರಾಯ ಮತ್ತು ನಿರ್ಧಾರ ತಿಳಿಸಿದ್ದಲ್ಲಿ, ಪರ್ಯಾಯ ವ್ಯವಸ್ಥೆ ಕುರಿತು ಸರ್ಕಾರ ಮಟ್ಟದಲ್ಲಿ ಅಂತಿಮ ತಿರ್ಮಾನ ಮಾಡಲಾಗುತ್ತದೆ ಎಂದರು.
ಸ್ವಚ್ಛ ಭಾರತ ಮಿಷನ್ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ಡಾ.ಕಮಲಾ ಬೈಲೂರ, ಡಿಡಿಪಿಐ ಎಸ್.ಎಸ್. ಕೆಳದಿಮಠ, ರೂಪಾ ಪುರಂಪಕರ ಮತ್ತಿತರರು ಇದ್ದರು.