ಕನ್ನಡಪ್ರಭ ವಾರ್ತೆ ಮೇಲುಕೋಟೆ

ವಿಶ್ವ ಪ್ರಸಿದ್ಧ ವೈರಮುಡಿ ಉತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿರುವುದರಿಂದ ಯಾವುದೇ ಲೋಪವಾಗದಂತೆ ಮಂಡ್ಯ ಜಿಲ್ಲಾ ಪೊಲೀಸರು ಕಟ್ಟೆಚ್ಚರ ವಹಿಸಬೇಕು ಎಂದು ಮೈಸೂರು ವಿಭಾಗದ ಪೊಲೀಸ್ ಐಜಿಪಿ ಬೋರಲಿಂಗಯ್ಯ ತಿಳಿಸಿದರು.

ಮೇಲುಕೋಟೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರೊಂದಿಗೆ ಗುರುವಾರ ಭೇಟಿ ನೀಡಿ ವೈರಮುಡಿ ಉತ್ಸವ ನಡೆಯುವ ಸ್ಥಳ ಪಾರ್ಕಾವಣೆಯಾಗುವ ಸ್ಥಳ ಹಾಗೂ ಪಾರ್ಕಿಂಗ್ ಸ್ಥಳ ಪರಿಶೀಲಿಸಿ ನಂತರ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಎಸ್ಪಿ ಶೋಭಾರಾಣಿ ನೇತೃತ್ವದಲ್ಲಿ ವೈರಮುಡಿ ಕಿರೀಟಧಾರಣ ಮಹೋತ್ಸವಕ್ಕೆ ಭದ್ರತೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು, ಇನ್ಸ್‌ಪೆಕ್ಟರ್ ರ್‍ಯಾಪಿಡ್ ಪೋರ್ಸ್, ಕ್ರಿಪ್ರ ಕಾರ್ಯಪಡೆ ಸೇರಿದಂತೆ 1500 ಪೊಲೀಸ್ ಸಿಬ್ಬಂದಿ, ಹೋಮ್ ಗಾರ್ಡ್ ಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿ ಉತ್ಸವವನ್ನು ಶಾಂತಿಯುತವಾಗಿ ಭಕ್ತ ಸ್ನೇಹಿಯಾಗಿ ನಡೆಸಬೇಕು ಎಂದು ಸೂಚನೆ ನೀಡಿದರು.

ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಉತ್ಸವ ಆರಂಭವಾಗುವ ಸ್ಥಳ ಪರಿಶೀಲಿಸಿದ ಎಸ್ಪಿ ಶೋಭಾರಾಣಿ, ಉತ್ಸವ ಮಹಾ ಮಂಗಳಾರತಿ ನಡೆಯುವ ಸ್ಥಳದಲ್ಲಿ ಉಂಟಾಗುವ ನೂಕಾಟ ತಳ್ಳಾಟ ನಿಯಂತ್ರಿಸಬೇಕು. ಉತ್ಸವ ಬೀದಿಗಳಲ್ಲೂ ನೂಕಾಟ ತಳ್ಳಾಟವಾಗದಂತೆ ಎಚ್ಚರವಹಿಸಿ ಮಹಿಳಾ ಭಕ್ತರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.


100ಕ್ಕೂ ಹೆಚ್ಚು ಕಡೆಗಳಲ್ಲಿ ಸಿಸಿ ಟಿವಿ ಕಣ್ಗಾವಲು ವಹಿಸಲಾಗುತ್ತಿದೆ. 14 ಕಡೆ ದ್ವಿಚಕ್ರವಾಹನಗಳ ಪಾರ್ಕಿಂಗ್, 12 ಕಡೆ ಕಾರ್ ಪಾರ್ಕಿಂಗ್ ಸೇರಿದಂತೆ 35 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.

ಪ್ರಮುಖ ನಾಲ್ಕು ಸ್ಥಳಗಳಲ್ಲಿ ಪೊಲೀಸ್ ಸಹಾಯ ಕೇಂದ್ರ ಸ್ಥಾಪಿಸಿದ್ದು, ಭಕ್ತರು ಯಾವುದೇ ನೂಕು ನುಗ್ಗಲಿಲ್ಲದೆ ದರ್ಶನ ಮಾಡಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಬ್ಯಾನರ್ ಅಳವಡಿಕೆ, ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದರು.

ಈ ವೇಳೆ ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಶ್ರೀರಂಗಪಟ್ಟಣ ಡಿವೈಎಸ್‌ಪಿ ಯು.ಡಿ.ಕೃಷ್ಣಕುಮಾರ್, ಪಾಂಡವಪುರ ಸರ್ಕಲ್ ಶರತ್‌ಕುಮಾರ್, ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಕೀಲ ಕಾಡೇನಹಳ್ಳಿ ಸತೀಶ್ ಕುಮಾರ್, ದೇವಾಲಯದ ಸಿಬ್ಬಂದಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.ಇಂದು ನಾಗವಲ್ಲೀ ಉತ್ಸವ

ಮೇಲುಕೋಟೆ:

ವೈರಮುಡಿ ಬ್ರಹ್ಮೋತ್ಸವದ ಮೂರನೇ ತಿರುನಾಳ್ ದಿನವಾದ ಮಾ.27ರ ಶುಕ್ರವಾರ ಮಧ್ಯಾಹ್ನ 3ಗಂಟೆಗೆ ನಾಗವಲ್ಲೀ ಉತ್ಸವ ಆರಂಭವಾಗಲಿದೆ.

ಕಲ್ಯಾಣ ನಾಯಕಿ ಅಮ್ಮನವರೊಂದಿಗೆ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಚೆಲುವನಾರಾಯಣ ಸ್ವಾಮಿ ಉತ್ಸವ ಮೊದಲು ರಾಮಚಂದ್ರನ ಸಾನ್ನಿಧ್ಯವಿರುವ ಸೀತಾರಣ್ಯಕ್ಕೆ ನೆರವೇರಿ ನಂತರ ಕಲ್ಯಾಣಿಗೆ ಬಿಜಯ ಮಾಡಿದ ನಂತರ ನಾಗವಲ್ಲೀ ನರಂದಾಳಿಕಾರೋಹಣ ನಡೆಯಲಿದೆ. 8 ಗಂಟೆ ವೇಳೆಗೆ ದೇವಾಲಯ ತಲುಪಲಿದೆ. ರಾತ್ರಿ 9ರ ನಂತರ ಚಂದ್ರಮಂಡಲವಾಹನೋತ್ಸವ ನಡೆಯಲಿದೆ.

ಆಕರ್ಷಕ ಲೈಟಿಂಗ್:

ಇದೇ ಪ್ರಥಮ ಬಾರಿಗೆ ಚೆಲುವನಾರಾಯಣಸ್ವಾಮಿ ದೇವಾಲಯ ಯೋಗನರಸಿಂಹಸ್ವಾಮಿ ಬೆಟ್ಟ ಭುವನೇಶ್ವರಿ ಮಂಟಪಗಳಿರುವ ಮಾದರಿಯಲ್ಲಿ ಲೈಂಟಿಂಗ್ ಸಮೇತ ಸ್ವಾಗತಕ ಮಾನುಗಳನ್ನು ಹಾಕುತ್ತಿರುವುದು ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.