ಸಾರಾಂಶ
ಲಕ್ಷ್ಮೇಶ್ವರ: ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗದಂತೆ ಅಧಿಕಾರಿಗಳು ಸದಾ ಸನ್ನದ್ಧ ಸ್ಥಿತಿಯಲ್ಲಿ ಇರಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ತಾಲೂಕಿನ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತದೆ. ಅಂತಹ ಗ್ರಾಮೀಣ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಯಿಸಿ ಜನರಿಗೆ ಕುಡಿಯಲು ನೀರು ಕೊಡುವ ಕಾರ್ಯವಾಗಬೇಕು. ಲಕ್ಷ್ಮೇಶ್ವರ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮುಖ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಕಾರ್ಯವಾಗಬೇಕು. ಅದಕ್ಕೆ ಎಲ್ಲ ಸಿದ್ಧತೆ ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದು ಹೇಳಿದ ಅವರು, ಲಕ್ಷ್ಮೇಶ್ವರ ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಬೇಕು.ತಾಲೂಕಿನಲ್ಲಿ ಮೇವಿನ ಕೊರತೆ ನಿವಾರಿಸಲು ಬೇರೆ ಜಿಲ್ಲೆಗಳಿಂದ ಮೇವು ತರಿಸುವ ಕಾರ್ಯ ಪಶು ವೈದ್ಯಕೀಯ ಇಲಾಖೆ ಮತ್ತು ಗ್ರಾಪಂ ಸಿಬ್ಬಂದಿ ಸೇರಿ ಮೇವಿನ ವಿತರಣಾ ಕಾರ್ಯಕ್ರಮ ರೂಪಿಸಿ ಜಾನುವಾರುಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ವೇಳೆ ತೋಟಗಾರಿಕಾ ಇಲಾಖೆಯ ಡಾ.ಸುರೇಶ ಕುಂಬಾರ ರೈತರಿಗೆ ಉಚಿತ ತರಕಾರಿ ಬೀಜಗಳನ್ನು ವಿತರಣೆ ಮಾಡಿದರು.ಈ ವೇಳೆ ನೋಡಲ್ ಅಧಿಕಾರಿ ಜಗದೇವ ಬಿ. ತಹಸೀಲ್ದಾರ್ ವಾಸುದೇವ ಸ್ವಾಮಿ ಹಾಗೂ ತಾಪಂ ಇಓ ಕೃಷ್ಣಪ್ಪ ಧರ್ಮರ ಇದ್ದರು.