ಸಾರಾಂಶ
ತೇರದಾಳ: ದೇವರು ಸೃಜಿಸಿದ ಪ್ರಕೃತಿಯ ಸೌಂದರ್ಯ ಮುಕುಟವೇ ನಾರಿ. ನಮ್ಮ ಭಾರತೀಯ ನಾರಿಯರು ಸೌಂದರ್ಯದಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದ್ದು,ಜಾಹೀರಾತುಗಳಿಗೆ ಮಾರು ಹೋಗಿ ರಸಾಯನಿಕಯುಕ್ತ ಸೌಂದರ್ಯವರ್ಧಕ ಬಳಸುವುದರ ಬದಲಾಗಿ ಭಾರತೀಯ ಆಯುರ್ವೇದ ಶೈಲಿಯ ವಸ್ತುಗಳನ್ನು ಬಳಸಬೇಕೆಂದು ಎಸ್.ಬಿ.ಎಂ.ಕೆ. ಆಯುರ್ವೇದ ವಿದ್ಯಾಲಯ ಕಹೆರ ಅಸೋಸಿಯೇಟ್ ಪ್ರೋ.ಗೀತಾ ಗಡಾದ ಹೇಳಿದರು.
ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)
ದೇವರು ಸೃಜಿಸಿದ ಪ್ರಕೃತಿಯ ಸೌಂದರ್ಯ ಮುಕುಟವೇ ನಾರಿ. ನಮ್ಮ ಭಾರತೀಯ ನಾರಿಯರು ಸೌಂದರ್ಯದಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದ್ದು, ನೈಸರ್ಗಿಕ ಸೌಂದರ್ಯಕ್ಕೆ ಸಂತೃಪ್ತಾಗದೇ ಕೃತ್ರಿಮ ಸೌಂದರ್ಯ ವಿಕಾಸದ ಗುಂಗಿನಲ್ಲಿ ಹಲವಾರು ಸೌಂದರ್ಯ ವರ್ಧಕಗಳಿಗೆ ಮಾರು ಹೋಗಿ ನೈಜ ಸೌಂದರ್ಯ ಕಳೆದುಕೊಂಡ ಸಹಸ್ರ ಉದಾಹರಣೆಗಳಿವೆ. ಜಾಹೀರಾತುಗಳಿಗೆ ಮಾರು ಹೋಗಿ ರಸಾಯನಿಕಯುಕ್ತ ಸೌಂದರ್ಯವರ್ಧಕ ಬಳಸುವುದರ ಬದಲಾಗಿ ಭಾರತೀಯ ಆಯುರ್ವೇದಿಕ್ ಶೈಲಿಯ ವಸ್ತುಗಳನ್ನು ಬಳಸಬೇಕೆಂದು ಕಹೆರ್ ಎಸ್.ಬಿ.ಎಂ.ಕೆ. ಆಯುರ್ವೇದ ವಿದ್ಯಾಲಯ ಬೆಳಗಾವಿಯ ಅಸೋಸಿಯೇಟ್ ಪ್ರೋ. ಗೀತಾ ಗಡಾದ ಹೇಳಿದರು.ಪಟ್ಟಣದ ಶ್ರೀಬಾಹುಬಲಿ ವಿದ್ಯಾಪೀಠದ ಜೆ.ವ್ಹಿ. ಮಂಡಳದ ಗ್ರಾಮೀಣ ಆಯುರ್ವೇದ ವೈದ್ಯಕೀಯ ವಿದ್ಯಾಲಯದ ಹಾಗೂ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಎಸ್.ಬಿ.ಎಂ.ಕೆ. ಆಯುರ್ವೇದ ವಿದ್ಯಾಲಯ ಬೆಳಗಾವಿಯ ರಸಶಾಸ್ತ್ರ ಹಾಗೂ ಭೈಷಜ್ಯ ಕಲ್ಪನಾ ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾಂತಿವರ್ಧಕಗಳ ಕುರಿತು ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಸಾಕಷ್ಟು ಹೆಣ್ಣುಮಕ್ಕಳು ಮಾರುಕಟ್ಟೆಯಲ್ಲಿ ಕಳಪೆ ಕಾಂತಿವರ್ಧಕಗಳನ್ನು ಬಳಸಿ ತಮ್ಮ ಸೌಂದರ್ಯ ಹಾಳು ಮಾಡಿಕೊಳ್ಳುತ್ತಿದ್ದು, ಜಾಹಿರಾತುಗಳಿಂದ ಆಕರ್ಷಿತರಾಗದೆ ವಸ್ತುವಿನ ಗುಣಮಟ್ಟ ನೋಡಿ ಖರೀದಿಸಬೇಕೆಂದ ಅವರು, ಮನೆಯಲ್ಲಿಯೇ ಸಿದ್ಧಪಡಿಸಿಕೊಳ್ಳಬಹುದಾದ ಹಲವಾರು ಕಾಂತಿವರ್ಧಕಗಳ ಕುರಿತು ಮಾಹಿತಿ ನೀಡಿದರು.
ಈ ಕುರಿತು ಅವರು ಹಲವಾರು ಜೆಲ್, ಲಿಪ್ ಸ್ಟಿಕ್, ಲಿಪ್‌ಬಾಮ್, ಲೋಶನ್‌ಗಳನ್ನು ವೈದ್ಯವಿದ್ಯಾರ್ಥಿಗಳ ಮುಂದೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿ ಎಲ್ಲರೂ ಇವುಗಳನ್ನು ಮನೆಯಲ್ಲಿಯೇ ತಯಾರಿಸಿ ಉಪಯೋಗಿಸಬಹುದು ಎಂದು ತಿಳಿಸಲಾಯಿತು.ಕಾರ್ಯಾಗಾರದಲ್ಲಿ ಡಾ.ಪೂರ್ಣಿಮಾ ತುಕ್ಕಾನಟ್ಟಿ ಹಾಗೂ ಡಾ.ವೀಣಾ ಕುಪಾಟಿಯವರು ಕಾಂತಿವರ್ಧಕಗಳ ಉತ್ಪನ್ನ ಹಾಗೂ ಬಳಕೆಯ ಕುರಿತು ಉಪನ್ಯಾಸ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಡಾ.ಜೆ.ಬಿ. ಆಲಗೂರ ಮಾತನಾಡಿದರು. ಪ್ರಾಂಶುಪಾಲ ಡಾ, ಎ.ಬಿ. ಅಂಬಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಡಾ.ಎಸ್.ಎಸ್. ಹಿರೇರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಯು.ಪಿ. ಪಾಟೀಲ ಮತ್ತು ಡಾ.ರಾಧಿಕಾ ಪುಂಗಾಲಿಯಾ ನಿರೂಪಿಸಿದರು. ವೇದಿಕೆಯಲ್ಲಿ ಡಾ. ಬಿ.ಎಸ್. ಜಂಬಗಿ ಇದ್ದರು.