ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಕಂಕಣಬದ್ಧರಾಗಿ

| Published : Nov 02 2024, 01:17 AM IST

ಸಾರಾಂಶ

ಕನ್ನಡ ನಾಡಿನ ಹಿರಿಮೆ, ಗರಿಮೆ, ಪುರಾತನ ಇತಿಹಾಸ, ನೆಲ, ಜಲ, ಇತರೆ ಸಂಪತ್ತಿನ ಬಗ್ಗೆ ಅರಿವಿರಬೇಕು

ಶಿರಹಟ್ಟಿ: ವಿಶ್ವಮಾನ್ಯವಾಗಿರುವ ಕನ್ನಡ ನಾಡು, ನುಡಿ, ಸಂಸ್ಕೃತಿ, ನೆಲ, ಜಲ, ಭಾಷೆ ಪೋಷಿಸಿ, ಅಭಿವೃದ್ಧಿಪಡಿಸುವ ನಮ್ಮ ಕರ್ತವ್ಯ ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಕಂಕಣಬದ್ಧರಾಗೋಣ. ಸಾಹಿತ್ಯದ ಜತೆಗೆ ಇತರ ಭಾಷೆ ಗೌರವಿಸೋಣ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಶುಕ್ರವಾರ ಪಟ್ಟಣದ ಎಸ್.ಎಂ.ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ಜರುಗಿದ ೬೯ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ನಾಡಿಗೆ ಸಾವಿರಾರು ವರ್ಷಗಳಷ್ಟು ಗತವೈಭವದ ಸುದೀರ್ಘ ಇತಿಹಾಸವಿದೆ. ಸುಮಾರು ೨ ಸಾವಿರ ವರ್ಷಗಳಷ್ಟು ಇತಿಹಾಸ ಹೊಂದಿದ ಕನ್ನಡ ಭಾಷೆಗೆ ಆದಿ ಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪುವರೆಗೂ ಅನೇಕ ಕೃತಿಗಳು ಪ್ರಕಟವಾಗಿವೆ ಎಂದರು.

ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆ ಕನ್ನಡ ಭಾಷೆಗೆ ಇದೆ. ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಅನೇಕ ಗಣ್ಯರಿಗೆ ನಮನ ಸಲ್ಲಿಸಿದ ಅವರು, ಕನ್ನಡ ನಾಡಿನ ಹಿರಿಮೆ, ಗರಿಮೆ, ಪುರಾತನ ಇತಿಹಾಸ, ನೆಲ, ಜಲ, ಇತರೆ ಸಂಪತ್ತಿನ ಬಗ್ಗೆ ಅರಿವಿರಬೇಕು. ಶಿಕ್ಷಕರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಈ ಕುರಿತು ತಿಳಿವಳಿಕೆ ನೀಡಬೇಕು ಎಂದು ತಿಳಿಸಿದರು.

ಕನ್ನಡ ಭಾಷೆ, ಸಾಹಿತ್ಯ,ಸಂಸ್ಕೃತಿ ಬೆಳವಣಿಗೆಗೆ ಎಲ್ಲರೂ ಶ್ರಮಿಸೋಣ. ಕನ್ನಡದ ಕಹಳೆ ಎಲ್ಲೆಡೆ ಮೊಳಗಬೇಕು. ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ಎಲ್ಲ ಮಹನೀಯರ ಕೊಡುಗೆ ಸ್ಮರಿಸೋಣ. ಜತೆಗೆ ಕನ್ನಡ ಕಟ್ಟುವ ಕೆಲಸ ಯುವ ಮನಸ್ಸುಗಳು ಮಾಡಬೇಕು. ಆಡಳಿತದಲ್ಲಿ ಕನ್ನಡೀಕರಣಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದರು.

ರಾಜ್ಯದಲ್ಲಿರುವ ಪರಭಾಷಿಕರು ಈ ನೆಲದ ಭಾಷೆಯನ್ನು ತಮ್ಮದೆಂದು ತಿಳಿದು ವ್ಯವಹರಿಸಬೇಕು. ಕನ್ನಡ ನಾಡಿನ ನೆಲ, ಜಲ, ತಮ್ಮದೆಂದು ಭಾವಿಸಿ ಜೀವಿಸಬೇಕಾದ ಅಗತ್ಯವಿದೆ. ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಬೇಕಾಗಿದೆ. ಶಿಕ್ಷಕರು ಹಾಗೂ ಇಲಾಖೆಯು ತಾಯ್ನಾಡಿನ ಬಗ್ಗೆ ಹೆಮ್ಮೆ ಮೂಡಿಸಲು ಸದಾ ಪ್ರಯತ್ನಿಸಬೇಕು. ಆಗ ಮಾತ್ರ ಸ್ವಾಭಿಮಾನ ಸಹಜವಾಗಿ ಮೂಡುತ್ತದೆ ಎಂದು ಹೇಳಿದರು.

ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್‌ ಅನಿಲ ಬಡಿಗೇರ ಮಾತನಾಡಿ, ಕನ್ನಡವು ವಿಶ್ವದ ಶ್ರೇಷ್ಠಭಾಷೆಯಾಗಿದೆ. ನಮ್ಮ ಕನ್ನಡಕ್ಕೆ ಭವ್ಯ ಸಂಸ್ಕೃತಿ ಇದ್ದು, ಅದನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಸಹ ಕಳಕಳಿಯಿಂದ ಕೆಲಸ ಮಾಡುವ ಸಂಕಲ್ಪ ಮಾಡಬೇಕಿದೆ. ಇಂಗ್ಲಿಷ ಹಾಗೂ ಪರಭಾಷೆಗಳು ವಿಜೃಂಭಿಸುತ್ತಿವೆ. ನಮ್ಮ ಭಾಷೆ ಕಾಣೆಯಾಗುತ್ತಿದೆ. ಕನ್ನಡಿಗರ, ಕನ್ನಡ ಸಾಧಕರ, ನಾಡುನುಡಿ ಚಿಂತಕರ ಹೆಸರುಗಳನ್ನು ಗಲ್ಲಿಗಲ್ಲಿಗೂ ನಾಮಕರಣ ಮಾಡುವ ಮೂಲಕ ಕನ್ನಡಿಗರು ತಮ್ಮ ಅಸ್ಮಿತೆ ಮೂಡಿಸಬೇಕಿದೆ ಎಂದರು.

ಕೆ.ಎ.ಬಳಿಗೇರ ಉಪನ್ಯಾಸ ನೀಡಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ತಾಪಂ ಇಒ ಎಸ್.ಎಸ್. ಕಲ್ಮನಿ, ಬಿಇಒ ಎಚ್. ನಾಣಕೀ ನಾಯಕ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಸದಸ್ಯರಾದ ಫಕ್ಕಿರೇಶ ರಟ್ಟಿಹಳ್ಳಿ, ಸಂದೀಪ ಕಪ್ಪತ್ತನವರ, ಪರಸು ಡೊಂಕಬಳ್ಳಿ, ಅಕ್ಬರಸಾಬ್‌ ಯಾದಗಿರಿ, ಕಂದಾಯ ನಿರೀಕ್ಷಕ ಬಸವರಾಜ ಕಾತರಾಳ, ಎಚ್.ಆರ್. ಬೆನಹಾಳ, ಎಚ್.ಎಂ. ದೇವಗಿರಿ, ಬಸವರಾಜ ವಡವಿ ಇತರರು ಇದ್ದರು.