ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸಲಿ: ಬಿ.ಎಸ್. ಲೋಕೇಶ್ ಕುಮಾರ್

| Published : Apr 03 2024, 01:30 AM IST / Updated: Apr 03 2024, 01:31 AM IST

ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸಲಿ: ಬಿ.ಎಸ್. ಲೋಕೇಶ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಶಾಂತಿ-ಸುವ್ಯವಸ್ಥೆಗೆ ಪೊಲೀಸರು ಶ್ರಮ ಶ್ಲಾಘನೀಯವಾದದ್ದು. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಆರೋಗ್ಯ ಕಡೆ ಗಮನ ನೀಡಬೇಕು ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕರಾದ ಬಿ.ಎಸ್. ಲೋಕೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಪೊಲೀಸರು ಸಾರ್ವಜನಿಕರ ಜೊತೆ ಸಹನಶೀಲರಾಗಿ ವರ್ತಿಸಬೇಕು. ಸಾರ್ವಜನಿಕರ ರಕ್ಷಣೆಗೆ ಆದ್ಯತೆ ನೀಡಿ ಜನರ ವಿಶ್ವಾಸಗಳಿಸಬೇಕು ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕರಾದ ಬಿ.ಎಸ್. ಲೋಕೇಶ್ ಕುಮಾರ್ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೊಲೀಸರ ಬಗ್ಗೆ ಜನರಿಗೆ ಅಪಾರ ನಿರೀಕ್ಷೆಗಳಿರುತ್ತವೆ. ಸಂಕಷ್ಟಕ್ಕೆ ಸಹಾಯ ಮಾಡುವವರು, ನಮ್ಮ ರಕ್ಷಣೆಗೆ ನಿಂತವರು ಎಂಬ ಜನ ಸಮುದಾಯದ ಭಾವನೆಗೆ ಚ್ಯುತಿಯಾಗದಂತೆ ನಡೆದುಕೊಳ್ಳಬೇಕು. ಸಮಾಜದ ಶಾಂತಿ-ಸುವ್ಯವಸ್ಥೆಗೆ ಪೊಲೀಸರು ಶ್ರಮ ಶ್ಲಾಘನೀಯವಾದದ್ದು. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಆರೋಗ್ಯ ಕಡೆ ಗಮನ ನೀಡಬೇಕು. ಕುಟುಂಬ ಸದಸ್ಯರ ಜೊತೆ ಬೆರೆಯಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಶಸ್ತ್ರ ಸಹಾಯಕ ನಿವೃತ್ತ ಪೊಲೀಸ್ ಸಬ್‍ಇನ್‌ಸ್ಪೆಕ್ಟರ್ ಹೆಚ್.ಎ.ಎಂ. ಚನ್ನಬಸಯ್ಯ ಅವರು ಧ್ವಜ ವಂದನೆ ಸ್ವೀಕರಿಸಿ ಮಾತನಾಡಿ, ರಾಜ್ಯ ಸರ್ಕಾರದ ಸೇವೆಗಳಲ್ಲಿ ಪೊಲೀಸ್ ಸೇವೆ ಅತ್ಯಂತ ಮುಖ್ಯವಾದದ್ದು. ಸಮಾಜದ ದುರ್ಬಲ ವರ್ಗದವರಿಗೆ ನ್ಯಾಯ ದೊರಕಿಸಿ ಕೊಡುವ ಕಾರ್ಯದಲ್ಲಿ ಪೊಲೀಸ್ ಸೇವೆ ಕಾರ್ಯ ವಿಶಿಷ್ಟವಾಗಿದೆ. ಪೊಲೀಸರು ಇಲ್ಲದಿದ್ದರೆ ಸಮಾಜದಲ್ಲಿ ಅಶಾಂತಿ ತಲೆದೋರುತ್ತದೆ. ಪೊಲೀಸರು ಯಾರನ್ನೂ ಕೀಳರಿಮೆಯಿಂದ ಕಾಣಬಾರದು. ನಿಂದಿಸಬಾರದು. ಜನರೊಂದಿಗೆ ಸೌಜನ್ಯದಿಂದ ವರ್ತಿಸಿ ಗೌರವ ಕಾಪಾಡಿಕೊಳ್ಳಬೇಕು. ಸಾರ್ವಜನಿಕರಲ್ಲಿ ಬಾಂಧವ್ಯದ ವಾತಾವರಣ ಮೂಡಿಸಬೇಕು ಎಂದು ತಿಳಿಸಿದರು.ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು, ಕರ್ನಾಟಕ ಏಕೀಕರಣವಾದ ನಂತರ ಕರ್ನಾಟಕ ಪೊಲೀಸ್ ಪಡೆಯನ್ನು 1965ರ ಏಪ್ರಿಲ್ 2 ರಂದು ಕರ್ನಾಟಕ ಪೊಲೀಸ್ ಕಾಯ್ದೆಗೆ ಒಳಪಡಿಸಲಾಯಿತು. ಅದರ ಸ್ಮರಣೆಗಾಗಿ ಪ್ರತಿ ವರ್ಷ ಪೊಲೀಸ್ ಧ್ವಜ ದಿನವನ್ನಾಗಿ ರಾಜ್ಯದ ಎಲ್ಲ ಘಟಕಗಳಲ್ಲಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಕಾನೂನು ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳ ಸಂರಕ್ಷಣೆ ಮಾಡಲು ಈ ದಿನವನ್ನು ಮುಡಿಪಾಗಿಡಲಾಗುತ್ತದೆ. ನಿತ್ಯ ಜೀವನದಲ್ಲಿ ಶಾಂತಿ ಸೌಹಾರ್ದವನ್ನು ನಿರಂತರವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತೋರಿದ ಶೌರ್ಯ, ಸಾಹಸ ಹಾಗೂ ನಿಸ್ವಾರ್ಥ ಸೇವೆ ನೆನಪಿಸುವಂತಹ ದಿನ ಇದಾಗಿದೆ. ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಸಂಗ್ರಹವಾದ ಹಣವನ್ನು ನಿವೃತ್ತ ಪೋಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ್ಪಿಸಲಾಗುವುದು ಎಂದರು.

ಇದಕ್ಕೂ ಮೊದಲು, ಎಚ್.ಎ.ಎಂ. ಚನ್ನಬಸಯ್ಯ ಅವರು ಪೊಲೀಸ್ ತುಕಡಿಗಳಿಂದ ವಂದನೆ ಸ್ವೀಕರಿಸಿದರು. ನಂತರ ಪಥ ಸಂಚಲನ ನಡೆಯಿತು. ಆ ಬಳಿಕ ಧ್ವಜಗಳ ವಿತರಣೆ ಮಾಡಲಾಯಿತು. ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೆ.ಪಿ. ರವಿಕುಮಾರ್, ಎಸ್. ನವೀನ್‍ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಕುಟುಂಬ ವರ್ಗದವರು ಉಪಸ್ಥಿತರಿದ್ದರು.