ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ: ಲೋಕೇಶ್‌ಮೂರ್ತಿ

| Published : Oct 30 2025, 01:45 AM IST

ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ: ಲೋಕೇಶ್‌ಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಿಂದ ಬರುವ ದೂರು ಅರ್ಜಿಗಳನ್ನು ಅಧಿಕಾರಿಗಳು ತುರ್ತು ಕ್ರಮ ವಹಿಸಿ ಬಗೆಹರಿಸಬೇಕು. ಗ್ರಾಮಗಳಲ್ಲಿ ಕುಡಿಯುವ ನೀರು, ಬೀದಿ ದೀಪ ನಿರ್ವಹಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾರ್ವಜನಿಕರ ಜೊತೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು ಎಂದು ಮಂಡ್ಯ ತಾಲೂಕು ಕಾರ್ಯನಿರ್ವಾಹಕ ಅಕಾರಿ ಲೋಕೇಶಮೂರ್ತಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ದೊಡ್ಡಗರುಡನಹಳ್ಳಿ ಗ್ರಾಪಂನಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸಾರ್ವಜನಿಕರಿಂದ ಬರುವ ದೂರು ಅರ್ಜಿಗಳನ್ನು ಅಧಿಕಾರಿಗಳು ತುರ್ತು ಕ್ರಮ ವಹಿಸಿ ಬಗೆಹರಿಸಬೇಕು. ಗ್ರಾಮಗಳಲ್ಲಿ ಕುಡಿಯುವ ನೀರು, ಬೀದಿ ದೀಪ ನಿರ್ವಹಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

ಗ್ರಾಮ ಪಂಚಾಯ್ತಿಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಮಲ ಅವರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವುದಿಲ್ಲ. ಅವರನ್ನು ತಕ್ಷಣ ನಮ್ಮ ಗ್ರಾಮ ಪಂಚಾಯ್ತಿಯಿಂದ ಬೇರೆಡೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಸಾರ್ವಜನಿಕರು ಇಒಗೆ ಮನವಿ ಸಲ್ಲಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಇಒ ಲೋಕೇಶ್‌ಮೂರ್ತಿ, ಕಮಲ ಅವರನ್ನು ತರಾಟೆಗೆ ತೆಗೆದುಕೊಂಡು ಸಾರ್ವಜನಿಕರೊಂದಿಗೆ ಮುಂದಿನ ದಿನಗಳಲ್ಲಿ ಸೌಜನ್ಯದಿಂದ ವರ್ತಿಸಿ ಅವರ ಕೆಲಸ ಕಾರ್ಯಗಳನ್ನು ಅತಿ ಜರೂರಾಗಿ ಮಾಡಿಕೊಡುವಂತೆ ತಾಕೀತು ಮಾಡಿದರು.

ಸಭೆಯಲ್ಲಿ ತಾಲೂಕು ಯೋಜನಾಕಾರಿ ವೆಂಕಟರಾವ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರುತಿ, ಕೆಡಿಪಿ ಸಭೆಯ ನಾಮ ನಿರ್ದೇಶನ ಸದಸ್ಯ ರಮೇಶ್ ಮಾಯಪ್ಪನಹಳ್ಳಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರು, ಸದಸ್ಯರುಗಳು, ಪಿಡಿಒ ಸೌಭಾಗ್ಯ ಲಕ್ಷ್ಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ನ.1ರಂದು ಜಯರಾಮ್ ರಾಯಪುರ ಅವರಿಗೆ ಅಭಿನಂದನೆ: ಪ್ರೊ.ಜೆಪಿ

ಕನ್ನಡಪ್ರಭ ವಾರ್ತೆ ಮಂಡ್ಯ

ಜಯರಾಮ್ ರಾಯಪುರ ಅಭಿನಂದನಾ ಸಮಿತಿ ವತಿಯಿಂದ ನ.1ರಂದು ಆಂಧ್ರಪ್ರದೇಶದ ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತರಾಗಿ ನೇಮಕಗೊಂಡ ಜಯರಾಮ್ ರಾಯಪುರ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್‌ಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3 ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕಾರ್ಯಕ್ರಮವು ಕರ್ನಾಟಕ ಸಂಘ, ಫಸ್ಟ್ ಸರ್ಕಲ್ ಸಹಕಾರದೊಂದಿಗೆ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಮಾಜಿ ಸಚಿವ ಸಿ.ಎಸ.ಪುಟ್ಟರಾಜು ಅಧ್ಯಕ್ಷತೆ ವಹಿಸುವರು. ಶಾಸಕ ಪಿ.ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು ಎಂದರು.

ಜಯರಾಮ್ ರಾಯಪುರ ದಂಪತಿಯನ್ನು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅಭಿನಂದಿಸಲಿದ್ದಾರೆ. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಭೈರಮಂಗಲ ರಾಮೇಗೌಡ ಅಭಿನಂದನಾ ನುಡಿಗಳನ್ನಾಡುವರು ಎಂದರು.

ಅತಿಥಿಗಳಾಗಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಬಿ.ರಾಮಕೃಷ್ಣ, ಕೆ.ಟಿ.ಶ್ರೀಕಂಠೇಗೌಡ, ಹಾಲಿ ಶಾಸಕ ಮಧು ಜಿ.ಮಾದೇಗೌಡ, ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಎಸ್‌ಬಿಇಟಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ, ಫಸ್ಟ ಸರ್ಕಲ್ ಅಧ್ಯಕ್ಷ ಡಾ.ಡಿ.ಮುನಿರಾಜು, ಕೆನರಾ ಬ್ಯಾಂಕ್ ಪ್ರಭಾರ ವ್ಯವಸ್ಥಾಪಕ ಡಾ.ಎಸ್.ಟಿ.ರಾಮಚಂದ್ರ, ಉದ್ಯಮಿ ಟಿ.ಜೆ.ಪ್ರಸನ್ನಕುಮಾರ್ ಭಾಗವಹಿಸಲಿದ್ದಾರೆ ಎಂದರು.

ಲೇಖಕಿ ಡಾ.ಕೆಂಪಮ್ಮ ಅವರ ಜಯರಾಮ್ ರಾಯಪುರ ಅವರ 250 ಪುಟಗಳ ಪ್ರಗತಿಯ ಹರಿಕಾರ ಜೀವನ ಚರಿತ್ರೆಯ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಎಸ್‌ಬಿಇಟಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಕರ್ನಾಟಕ ಸಂಘದ ನಿರ್ದೇಶಕ ನಾಗರೇವಕ್ಕ, ಕೆ.ಎಚ್.ಜಯರಾಮ್ ಹಾಗೂ ಚಂದ್ರು ಇದ್ದರು.