ಸಾರಾಂಶ
- ಗೊಲ್ಲರಹಳ್ಳಿಯಲ್ಲಿ ಶ್ರೀರಾಮ ಮಂದಿರ ದೇವಸ್ಥಾನ ಗೃಹಪ್ರವೇಶ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಗವಂತನ ಸೇವೆಯಲ್ಲಿ ಉತ್ಸಾಹ ಮತ್ತು ಭಕ್ತಿ ಇರಬೇಕು ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.ತಾಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀರಾಮ ಮಂದಿರ ದೇವಸ್ಥಾನ ಗೃಹಪ್ರವೇಶ, ಕಳಸಾರೋಹಣ ಮತ್ತು ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವಕರೆಲ್ಲರೂ ಒಗ್ಗೂಡಿ ಕಡಿಮೆ ಅವಧಿಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿರುವುದು ಸಂತೋಷದ ವಿಷಯ. ದೇವಸ್ಥಾನದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ನಿತ್ಯ ಪೂಜಾ ಕೈಂಕರ್ಯಗಳನ್ನು ನಡೆಸುವುದು ಮುಖ್ಯ ಎಂದು ತಿಳಿಸಿದರು.ಮನುಷ್ಯರು ಭಾವನಾತ್ಮಕವಾಗಿ ಪರಿಶುದ್ಧವಾಗಿ ಇರಬೇಕು. ಭಗವಂತನ ಸೇವೆಯಲ್ಲಿ ಸದಾ ತೊಡಗಿದ್ದಾಗ ದೇವರ ಕೃಪೆಯಿಂದ ಮನುಕುಲದ ಏಳಿಗೆ ಆಯಾಗುತ್ತದೆ. ಧರ್ಮಸಭೆಗೆ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದೀರಿ. ಹೆಣ್ಣುಮಕ್ಕಳಿಗೆ ಕೊಟ್ಟಂತಹ ಗಮನ, ಎಚ್ಚರಿಕೆ ಗಂಡುಮಕ್ಕಳಿಗೆ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದಲ್ಲಿ ಬಾಲಕಿಯರ ಫಲಿತಾಂಶ ಮೇಲುಗೈ ಸಾಧಿಸುತ್ತಿದೆ. ಹೆಣ್ಣಾಗಲಿ, ಗಂಡಾಗಲಿ ಫಲಿತಾಂಶ ಸಮಾನಾಗಿ ಬರಬೇಕು ಎಂದರು.
ಸಮಾರಂಭ ಉದ್ಘಾಟಿಸಿದ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ನನ್ನ ಸ್ವಂತ ಊರು ಪಕ್ಕದ ಬೆನಕನಹಳ್ಳಿ ಆಗಿದ್ದರೂ, 50 ವರ್ಷಗಳಿಂದ ಗೊಲ್ಲರಹಳ್ಳಿಯಲ್ಲೇ ವಾಸಿಸುತ್ತಿದ್ದೇನೆ. ಗ್ರಾಮದವರು ತಮ್ಮೂರಿಗೆ ಏನು ಬೇಕು ಎನ್ನುವುದನ್ನು ಇದುವರೆಗೂ ನನ್ನ ಮುಂದೆ ಬೇಡಿಕೆ ಇಟ್ಟಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿ ₹2 ಕೋಟಿ ಅನುದಾನ ನೀಡುತ್ತೇನೆ. ಅಭಿವೃದ್ಧಿ ಕಾಮಗಾರಿಗೆ ಬಳಸಿಕೊಳ್ಳಿ ಎಂದು ಹೇಳಿದರು.ಅನೇಕ ಮಹಿಳೆಯರು ಸರ್ಕಾರ ನೀಡುವ ಗೃಹಲಕ್ಷ್ಮಿ ಯೋಜನೆಯ ₹2 ಸಾವಿರವನ್ನು ದೇವಸ್ಥಾನ ನಿರ್ಮಾಣಕ್ಕೆ ಕೊಡುತ್ತಿದ್ದಾರೆ. ಭಕ್ತಿ, ಧರ್ಮ ಮಹಿಳೆಯರಲ್ಲಿದೆ. ಕುಟುಂಬದ, ಯಜಮಾನಿಕೆ ತಾಯಂದಿರು ನಡೆಸುತ್ತಿದ್ದರೆ ಆ ಕುಟುಂಬ ಸಾಲದಲ್ಲಿ ಇರುವುದಿಲ್ಲ. ಪುರುಷ ಯಜಮಾನಿಕೆ ಮಾಡಿದರೆ ಸಾಲ ಇದ್ದೇ ಇರುತ್ತದೆ ಎಂದು ಹೇಳಿದರು.
ನಿವೃತ್ತಿ ಘೋಷಿಸಿದ ಶಾಸಕ: ತನಗೀಗ 76 ವರ್ಷ ವಯಸ್ಸು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮುಂದೆ ಯಾರು ಶಾಸಕರಾಗಿ ಬರುತ್ತಾರೆ ಎನ್ನುವುದು ಗೊತ್ತಿಲ್ಲ ಎಂದು ತಮ್ಮ ನಿವೃತ್ತಿ ಬಗ್ಗೆ ಕಾರ್ಯಕ್ರಮದಲ್ಲಿ ಶಾಸಕರು ಘೋಷಿಸಿದ್ದು ವಿಶೇಷವಾಗಿತ್ತು.ಗ್ರಾಮದ ಹಿರಿಯ ಮುಖಂಡ ಹಾಲಪ್ಪಗೌಡ, ವೈದ್ಯ ಅಭಿಷೇಕ್, ಪಿ.ಸಿ. ಗಿರೀಶ್ ಮಾತನಾಡಿದರು. ದೇವಸ್ಥಾನಕ್ಕೆ ಸ್ಥಳ ದಾನ ಮಾಡಿದ ವಿಜಯಪ್ಪ ಇದ್ದರು. ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಪ್ರಾರ್ಥಿಸಿದರು. ಗಣೇಶ್ ಸ್ವಾಗತಿಸಿದರು. ಕೆ.ಟಿ.ಗೋವಿಂದಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.
ಸಮಾರಂಭದಲ್ಲಿ ಎಸ್.ಸುನಿಲ್ ನಿರೂಪಿಸಿದರು. ಇಂದಿರಮ್ಮ ದಿ. ಜಿ.ಪಿ.ಶ್ರೀನಿವಾಸಗೌಡರ ಕುಟುಂಬದಿಂದ ಅನ್ನಸಂತರ್ಪಣೆ ಸೇವೆ ನಡೆಯಿತು.- - -
-12ಎಚ್.ಎಲ್.ಐ2.ಜೆಪಿಜಿ:ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.
;Resize=(128,128))
;Resize=(128,128))