ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಅಧ್ಯಯನಶೀಲರಾಗಿ

| Published : Aug 30 2024, 01:01 AM IST

ಸಾರಾಂಶ

ವಿದ್ಯಾರ್ಥಿಗಳು ಪರೀಕ್ಷೆಗಳು ಸಮೀಪ ಬಂದಾಗ ತರಾತುರಿಯಲ್ಲಿ ಸಿದ್ಧತೆ ನಡೆಸಿಕೊಳ್ಳದೆ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಅಧ್ಯಯನಶೀಲರಾದರೆ ಯಾವುದೇ ಆತಂಕವಿಲ್ಲದೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ಚಿತ್ರದುರ್ಗದ ಹವ್ಯಾಸಿ ಖಗೋಳ ವೀಕ್ಷಕ ಎಚ್‌ಎಸ್‌ಟಿ ಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ವಿದ್ಯಾರ್ಥಿಗಳು ಪರೀಕ್ಷೆಗಳು ಸಮೀಪ ಬಂದಾಗ ತರಾತುರಿಯಲ್ಲಿ ಸಿದ್ಧತೆ ನಡೆಸಿಕೊಳ್ಳದೆ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಅಧ್ಯಯನಶೀಲರಾದರೆ ಯಾವುದೇ ಆತಂಕವಿಲ್ಲದೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ಚಿತ್ರದುರ್ಗದ ಹವ್ಯಾಸಿ ಖಗೋಳ ವೀಕ್ಷಕ ಎಚ್‌ಎಸ್‌ಟಿ ಸ್ವಾಮಿ ತಿಳಿಸಿದರು.

ಸಿರಿಗೆರೆಯ ಶ್ರೀ ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆಯಲ್ಲಿ 2024 25 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಮತ್ತು ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅವಧಾನವನ್ನು ಕೇಂದ್ರೀಕರಿಸುವ ಬಗ್ಗೆ, ಓದುವ ಹವ್ಯಾಸ, ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಕ್ರಮಗಳನ್ನು ಕುರಿತು ಮಾತನಾಡಿದರು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ಅತ್ಯುತ್ತಮವಾದ ಟೆಲಿಸ್ಕೋಪನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದರು.ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಮಂಜುನಾಥ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿನಿಯರು ಸರಿಯಾದ ಅಧ್ಯಯನ ಕ್ರಮವನ್ನು ಅನುಸರಿಸಿದರೆ ಅತ್ಯುನ್ನತ ಸಾಧನೆಯನ್ನು ಮಾಡಬಹುದು ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ನೀಡಿದರು. ಇತರ ದೇಶಗಳು ಭಾರತವನ್ನು ನೋಡುವ ದೃಷ್ಟಿಕೋನ ಈಗ ತುಂಬಾ ಬದಲಾಗಿದೆ. ಭಾರತಮಾತೆಯ ಮಕ್ಕಳಾದ ನಾವು ಇದಕ್ಕೆ ಹೆಮ್ಮೆ ಪಡಬೇಕು ಎಂದು ತಿಳಿಸಿದರು.ದೈಹಿಕ ಶಿಕ್ಷಕ ಎ ಸಿ ಗಿರೀಶ್ ಮಾತನಾಡಿ, ರಾಷ್ಟ್ರೀಯ ಕ್ರೀಡಾ ದಿನದ ನಿಮಿತ್ತ, ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಕುರಿತು ಮಾತನಾಡಿದರು. ಕ್ರೀಡೆಗೆ ಪ್ರೇರಣೆ ನೀಡಲು ಅತ್ಯುನ್ನತ ಸಾಧನೆ ತೋರುವ ವಿದ್ಯಾರ್ಥಿಗಳಿಗೂ ಕೂಡ ಪ್ರತಿಭಾ ಪುರಸ್ಕಾರ ನೀಡಬೇಕೆಂಬ ಅಪೇಕ್ಷೆಯನ್ನು ವ್ಯಕ್ತಪಡಿಸಿದರು.

ಸ್ವತಃ ತಾವೇ ₹10,000 ದತ್ತಿ ನಿಧಿಯನ್ನು ನೀಡುವುದಾಗಿ ಘೋಷಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ರವರು ಸಹ ದತ್ತಿ ನಿಧಿಯನ್ನು ಅವರ ತಂದೆ ತಾಯಿಗಳ ಹೆಸರಿನಲ್ಲಿ ನೀಡುವ ಇಚ್ಛೆ ವ್ಯಕ್ತಪಡಿಸಿದರು.ಎಸ್ ಎಸ್ ಎಲ್ ಸಿ ಯಲ್ಲಿ ಈ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಮೇಘ ಎಂ ಕುಂದಗೋಳ್ ಪ್ರತಿಭಾ ಪುರಸ್ಕಾರವನ್ನು ಪಡೆದರು. ಅಲ್ಲದೆ ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸೇರಿದಂತೆ ಆರು ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡುವ ಬಹುಮಾನವನ್ನೂ ಸಹ ಪಡೆದುಕೊಂಡಿರು. ದ್ವಿತೀಯ ಸ್ಥಾನ ಬಸಮ್ಮ ಬಣಕಾರ್, ತೃತೀಯ ಸ್ಥಾನ ಶ್ವೇತಾ ಮತ್ತು ಸೃಷ್ಟಿ ಹಂಚಿಕೊಂಡರು. ಶಾಲೆಯ ಮುಖ್ಯೋಪಾಧ್ಯಾಯ ಎಂ ಎಸ್ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.