ಸಾರಾಂಶ
ಹಾನಗಲ್ಲ: ವ್ಯಸನಮುಕ್ತರಾಗಿ ಕುಟುಂಬ ಸದಸ್ಯರೊಂದಿಗೆ ಸುಖ, ನೆಮ್ಮದಿಯಿಂದ ಸಂತೃಪ್ತ ಬದುಕು ಸಾಗಿಸುವಂತೆ ಶಾಸಕ ಶ್ರೀನಿವಾಸ ಮಾನೆ ಕಿವಿಮಾತು ಹೇಳಿದರು.
ತಾಲೂಕಿನ ತಿಳವಳ್ಳಿಯ ಹೆಗಡಿಕಟ್ಟಿ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೧೮೯೧ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದುಶ್ಚಟಗಳು ಇಡೀ ಬದುಕು ನಾಶ ಪಡಿಸುತ್ತವೆ. ದುಡಿದ ಹಣವನ್ನೆಲ್ಲ ದುಶ್ಚಟಗಳಿಗೆ ವ್ಯಯ ಮಾಡಿದರೆ ಅವಲಂಬಿತ ಕುಟುಂಬ ಸದಸ್ಯರು ತುತ್ತು ಅನ್ನಕ್ಕೂ ಪರದಾಡುವಂತಾಗಲಿದೆ. ಇಂಥ ಅದೆಷ್ಟೋ ಕುಟುಂಬಗಳು ದುಶ್ಚಟಗಳ ಕಾರಣದಿಂದ ಬೀದಿಗೆ ಬಂದಿವೆ. ಹಾಗಾಗಿ ದುಶ್ಚಟಗಳಿಂದ ದೂರ ಉಳಿದು ಎಲ್ಲರೊಂದಿಗೆ ಪ್ರೀತಿಯಿಂದ ಉತ್ತಮ ಜೀವನ ಸಾಗಿಸುವಂತೆ ಕರೆ ನೀಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಆರ್ಥಿಕ ಚಟುವಟಿಕೆಗಷ್ಟೇ ಸೀಮಿತವಾಗಿರದೇ ಸಮಾಜಕ್ಕೆ ಉಪಯೋಗಿಯಾಗಿರುವ ಇಂಥ ಕಾರ್ಯಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡಿರುವುದು ಮಾದರಿ. ಪ್ರತಿಯೊಬ್ಬರಿಗೂ ಹೊಸ ಜೀವನ ಕಟ್ಟಿಕೊಡುತ್ತಿರುವ ಯೋಜನೆಯ ಕಾರ್ಯ ಚಟುವಟಿಕೆ ಶ್ಲಾಘಿಸಿದರು.ಯೋಜನಾಧಿಕಾರಿ ರಾಘವೇಂದ್ರ ಪಟಗಾರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಪರಿವರ್ತನೆಗೆ ಮದ್ಯವರ್ಜನ ಶಿಬಿರಗಳು ಸಹಕಾರಿಯಾಗಿವೆ. ಮದ್ಯವ್ಯಸನದಿಂದ ಕೌಟುಂಬಿಕ ಮಾತ್ರವಲ್ಲದೇ ಸಾಮಾಜಿಕ ಸಮಸ್ಯೆಗಳು ತಲೆದೋರುತ್ತವೆ. ಕುಡಿತದ ಚಟದಿಂದ ಸಾಕಷ್ಟು ಸಂಖ್ಯೆಯ ಕುಟುಂಬಗಳು ಹಾಳಾಗಿವೆ. ಕೊಲೆ, ದರೋಡೆ, ಕಳ್ಳತನದಂತ ಅಪರಾಧ ಪ್ರಕರಣಗಳು ಹೆಚ್ಚಲಿವೆ. ಹಾಗಾಗಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶಿಬಿರ ಆಯೋಜಿಸಲಾಗಿದ್ದು, ೮೦ಕ್ಕೂ ಹೆಚ್ಚು ವ್ಯಸನಿಗಳು ವ್ಯಸನಮುಕ್ತರಾಗಿ ನವ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದರು.ಗ್ರಾಪಂ ಅಧ್ಯಕ್ಷೆ ರೇಖಾ ಕುರುಬರ, ಮಾಜಿ ಅಧ್ಯಕ್ಷೆ ಅಫ್ರೋಜಾ ಕನವಳ್ಳಿ, ತಾಪಂ ಮಾಜಿ ಸದಸ್ಯ ಫಯಾಜ್ ಲೋಹಾರ, ಮುಖಂಡರಾದ ವಿನಾಯಕ ಪವಾರ, ಶಿವಯೋಗಿ ಒಡೆಯರ, ಯಲ್ಲಪ್ಪ ಕಲ್ಲೇರ, ಚಂದ್ರಣ್ಣ ಪಾಟೀಲ, ರಾಮಚಂದ್ರ ಕಲ್ಲೇರ, ಬಸವರಾಜ ಚವ್ಹಾಣ, ಸಮ್ಮದ ಮೂಡಿ, ಮಾಲತೇಶ ಹೆಗಡಿಕಟ್ಟಿ, ಮಂಜು ಗೊರಣ್ಣನವರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.