ಸಾರಾಂಶ
ವಿದ್ಯಾರ್ಥಿಗಳಿಗೆ ಸಲಹೆ । ರಾಜ್ಯಮಟ್ಟದ ಜನಪದ ಗೀತೆ, ಭಾವಗೀತೆ ಸ್ಪರ್ಧೆ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹಾಸನಕೋಟಿ ಹಣಕ್ಕಿಂತ ಮೇಟಿ ವಿದ್ಯೆ ಲೇಸು ಎನ್ನುವಂತೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಹಿರಿಯ ರಂಗಭೂಮಿ ಕಲಾವಿದ ಎ.ಸಿ.ರಾಜು ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸರ್ಕಾರ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು-ಸ್ವಾಯತ್ತ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಅಂತರ ಕಾಲೇಜುಗಳ ಜನಪದಗೀತೆ ಮತ್ತು ಭಾವಗೀತೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಬಿ.ಇರ್ಷಾದ್, ವಿದ್ಯಾರ್ಥಿಗಳ ಪ್ರತಿಭೆಯನ್ನು ಹೆಕ್ಕಿ ತೆಗೆಯುವುದೇ ಇಂತಹ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಜನರಿಂದ ಜನರಿಗೆ ಹರಡುತ್ತ ದೇಶದ ಪಾರಂಪರಿಕ ಸೊಗಡನ್ನು ಜನಪದ ಸಾರುತ್ತದೆ ಎಂದು ತಿಳಿಸಿದರು.
ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ. ಶ್ರೀನಿವಾಸ್ ಮಾತನಾಡಿ, ಜನಪದ ಮತ್ತು ಭಾವಗೀತೆಗಳ ಮಹತ್ವ, ಕವಿವಾಣಿ ಹೂವು, ಜನವಾಣಿ ಬೇರು ಎನ್ನುವ ವಾಕ್ಯದೊಂದಿಗೆ ನೆಲ ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕಾಗಿರುವುದು ಎಲ್ಲರ ಆದ್ಯ ಕರ್ತವ್ಯ. ಹಾಗಾಗಿ ಪದವಿ ಹಂತದಲ್ಲಿಯೇ ಯುವ ಜನತೆಗೆ ಸಂಸ್ಕೃತಿಯ ಬಗ್ಗೆ ಗೌರವ ಮೂಡಿಸಬೇಕು ಎಂದು ಹೇಳಿದರು.ಜನಪದ ಸ್ಪರ್ಧೆಯ ತೀರ್ಪುಗಾರರಾಗಿ ಕಲಾವಿದರಾದ ದೊಡ್ಡಳ್ಳಿ ರಮೇಶ್, ನಾರಾಯಣಗೌಡ, ಗ್ಯಾರಂಟಿ ರಾಮಣ್ಣ ಹಾಗೂ ಭಾವಗೀತೆ ಸ್ಪರ್ಧೆಯ ತೀರ್ಪುಗಾರರಾಗಿ ಕಲಾವಿದರಾದ ಕುಮಾರ್, ನಿರ್ದೇಕರಾದ ಜಯಶಂಕರ್ ಬೆಳಗುಂಬ, ಮುಖ್ಯ ಶಿಕ್ಷಕ ಶಂಕರೇಗೌಡ ಇದ್ದರು.
ಜನಪದ ಗೀತೆ ಸ್ಪರ್ಧೆಯಲ್ಲಿ ಕೊಣನೂರು ಬಿಎಂ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ದರ್ಶನ್ ಪ್ರಥಮ ಬಹುಮಾನ, ದ್ವಿತೀಯ ಮಂಡ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹರ್ಷವರ್ಧನ್ ಹಾಗೂ ತೃತೀಯ ಬಹುಮಾನವನ್ನು ಹುಣಸೂರು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಶ್ಮಿತ ಪಡೆದರು. ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹುಣಸೂರು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಶ್ಮಿತ, ದ್ವಿತೀಯ ಬಹುಮಾನವನ್ನು ಹಾಸನ ಗಂಧದಕೋಠಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಿಯಾಂಕ, ಎಚ್‌ಆರ್‌ಐಎಚ್‌ಇ ಕಾಲೇಜಿನ ಸ್ಮೃತಿ ತೃತೀಯ ಬಹುಮಾನ ಪಡೆದರು.ಪ್ರಥಮ ಬಹುಮಾನವಾಗಿ 5 ಸಾವಿರ ರು. ನಗದು, ದ್ವಿತೀಯ ಬಹುಮಾನ 3 ಸಾವಿರ ರು., ತೃತೀಯ 2 ಸಾವಿರ ರು. ಮತ್ತು ಪಾರಿತೋಷಕ ಮತ್ತು ಪ್ರಮಾಣ ಪತ್ರ ನೀಡಲಾಯಿತು. ರಾಜ್ಯದ ವಿವಿಧ ಭಾಗಗಳ ಪದವಿ ಕಾಲೇಜುಗಳ 60ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಜನಪದ ಸ್ಪರ್ಧೆಯನ್ನು ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಸವಿತಾ, ಭಾವಗೀತೆ ಸ್ಪರ್ಧೆ ಶಾಂತ ನಿರ್ವಹಿಸಿದರು. ಶೈಕ್ಷಣಿಕ ಡೀನ್ ರಾಜು, ಪರೀಕ್ಷಾ ನಿಯಂತ್ರಕ ಡಾ.ಮುರುಳೀಧರ್, ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ.ಸತ್ಯಮೂರ್ತಿ ಇದ್ದರು.